ನವದೆಹಲಿ:ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶುಕ್ರವಾರ(ಫೆ.05, 2021) ದ್ವಿ ಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿದ್ದು ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇದರಿಂದ ಗೃಹ ಮತ್ತು ಆಟೋ ಸಾಲಗಳ ಮೇಲಿನ ಇಎಂಐ ಕಡಿಮೆಯಾಗುವ ಸಾಧ್ಯತೆ ಇಲ್ಲ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:RBI ಹಣಕಾಸು ನೀತಿ: ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 330 ಅಂಕ ಏರಿಕೆ, ನಿಫ್ಟಿ 15 ಸಾವಿರ ಗಡಿಗೆ
ರಿಸರ್ವ್ ಬ್ಯಾಂಕ್ ತನ್ನ ದ್ವೈ ಮಾಸಿಕ ಹಣಕಾಸು ನೀತಿಯ ದರವನ್ನು ಘೋಷಿಸಿದ್ದು, ಆ ಪ್ರಕಾರ ರೆಪೊ ದರ ಶೇ.4ನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ನಿರ್ಧರಿಸಿದೆ. ಅದೇ ರೀತಿ ರಿವರ್ಸ್ ರೆಪೊ ದರ ಶೇ.3.35ರಲ್ಲಿಯೇ ಮುಂದುವರಿಸಲು ನಿರ್ಧರಿಸಿದೆ.
ಆರ್ ಬಿಐನ ಹಣಕಾಸು ನೀತಿ ಸಮಿತಿಯಲ್ಲಿ ರೆಪೊ ಮತ್ತು ರಿವರ್ಸ್ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧಾರ ತೆಗೆದುಕೊಂಡಿರುವುದಾಗಿ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
2021-22ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾದ ನಂತರ ಆರ್ ಬಿಐ ಘೋಷಿಸುತ್ತಿರುವ ಮೊದಲ ಹಣಕಾಸು ನೀತಿ ಇದಾಗಿದೆ. ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅಧ್ಯಕ್ಷತೆಯಲ್ಲಿ ಆರು ಸದಸ್ಯರನ್ನೊಳಗೊಂಡ ಹಣಕಾಸು ನೀತಿ ಸಮಿತಿ ಸಭೆ ನಡೆಸಿದ್ದು, ಮೂರು ದಿನಗಳ ಸಭೆ ನಂತರ ರೆಪೊ ದರ ಯಥಾಸ್ಥಿತಿ ಬಗ್ಗೆ ಘೋಷಿಸಿದೆ.
ಏನಿದು ರಿವರ್ಸ್ ರೆಪೊ: ಬ್ಯಾಂಕ್ ಗಳಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಣ ಸಾಲ ಪಡೆದರೆ ಅದರ ಮೇಲೆ ವಿಧಿಸುವ ಬಡ್ಡಿದರವನ್ನು ರಿವರ್ಸ್ ರೆಪೊ ದರ ಎನ್ನಲಾಗುತ್ತದೆ. ರಿವರ್ಸ್ ರೆಪೊ ದರ ಹೆಚ್ಚಾದರೆ ಆರ್ ಬಿಐ ಬ್ಯಾಂಕ್ ಗಳಿಂದ ಆಕರ್ಷಕ ಬಡ್ಡಿದರಕ್ಕೆ ಸಾಲ ಪಡೆಯುತ್ತದೆ ಎಂದರ್ಥ.