ಮುಂಬೈ: ಕೊರೊನಾ ಎರಡನೇ ಅಲೆಯ ಆಘಾತದಿಂದ ಆರ್ಥಿಕತೆಯು ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. 2021-22ರ ಹಣಕಾಸು ವರ್ಷದ 3ನೇ ದ್ವೈಮಾಸಿಕ ನೀತಿ ಸಭೆಯಲ್ಲಿ ಆರ್‌ಬಿಐನ ಹಣಕಾಸು ನೀತಿ ಪರಾ ಮರ್ಶೆ ಸಮಿತಿಯು ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಿದೆ.
ಇದನ್ನೂ ಓದಿ: ಉಗ್ರರ ಅಟ್ಟಹಾಸ: ಅಫ್ಘಾನಿಸ್ತಾನದ ಮೊದಲ ಪ್ರಾಂತೀಯ ರಾಜಧಾನಿ “ತಾಲಿಬಾನ್ ವಶಕ್ಕೆ”
ಇದರಿಂದಾಗಿ ರೆಪೋ ದರ ಶೇ.4ರಲ್ಲೇ ಹಾಗೂ ರಿವರ್ಸ್ ರೆಪೋ ದರ ಶೇ.3.35ರಲ್ಲೇ ಮುಂದುವರಿಯಲಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿ ದ್ದಾರೆ. ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುತ್ತಿರುವುದು ಇದು ಸತತ7ನೇ ಬಾರಿ. ಇದೇ ವೇಳೆ, ಗೃಹ ಸಾಲದ ಮೇಲಿನ ಬಡ್ಡಿ ದರಗಳ ಇಳಿಕೆಯು ಆರ್ಥಿಕತೆಯ ಚೇತರಿಕೆಗೆ ಇಂಬು ನೀಡಿದೆ ಎಂದೂ ದಾಸ್ ಹೇಳಿದ್ದಾರೆ. ಕೊರೊನಾದ ಸಂಭಾವ್ಯ 3ನೇ ಅಲೆಯ ಕುರಿತು ಎಚ್ಚರಿಕೆ ವಹಿಸಬೇಕಾಗಿದೆ ಎಂದೂ ತಿಳಿಸಿದ್ದಾರೆ.
ಹಣದುಬ್ಬರ ಏರಿಕೆ ನಿರೀಕ್ಷೆ: 2021-22ರ ಚಿಲ್ಲರೆ ಹಣದುಬ್ಬರ ದರದ ನಿರೀಕ್ಷೆಯನ್ನು ಆರ್ ಬಿಐ ಶೇ.5.7ಕ್ಕೇರಿಸಿದೆ.ಕಚ್ಚಾ ತೈಲದ ದರ ಮತ್ತು ಕಚ್ಚಾ ವಸ್ತುಗಳ ದರ ಹೆಚ್ಚಳವೇ ಇದಕ್ಕೆ ಕಾರಣ. ಜೂನ್ ತಿಂಗಳಲ್ಲಿ ಆರ್‌ಬಿಐ ಪ್ರಸಕ್ತ ವಿತ್ತ ವರ್ಷದ ಹಣ ದುಬ್ಬರವನ್ನು ಶೇ.5.1 ಎಂದು ಅಂದಾಜಿಸಿತ್ತು.
ಆರ್ಥಿಕ ಪ್ರಗತಿ ದರದ ಅಂದಾಜು ಶೇ.9.5: ದೇಶದ ಆರ್ಥಿಕ ಚೇತರಿಕೆಗೆ ಉತ್ತೇಜನ ನೀಡುವಂಥ ಕ್ರಮಗಳನ್ನು ಮುಂದುವರಿಸಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟಿರುವ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ಪ್ರಸಕ್ತ ವಿತ್ತೀಯ ವರ್ಷದ ಜಿಡಿಪಿ ಅಂದಾಜನ್ನು ಶೇ.9.5ರಲ್ಲೇ ಮುಂದುವರಿಸಿ ದ್ದಾರೆ. ಮೊದಲ ತ್ತೈಮಾಸಿಕದಲ್ಲಿ ಜಿಡಿಪಿ ಪ್ರಗತಿ ದರ ಶೇ.21.4, 2ನೇ ತ್ತೈಮಾಸಿಕದಲ್ಲಿ ಶೇ.7.3, ಮೂರರಲ್ಲಿ ಶೇ.6.3 ಹಾಗೂ 4ನೇ ತ್ತೈಮಾಸಿಕ
ದಲ್ಲಿ ಶೇ.6.1 ಎಂದು ಅಂದಾಜಿಸಲಾಗಿದೆ.