ರಾಯಚೂರು: ಮುಂದಿನ ವರ್ಷ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ 400ನೇ ಪಟ್ಟಾಭಿಷೇಕ ಹಾಗೂ 350ನೇ ಆರಾಧನಾ ಮಹೋತ್ಸವ ಜರುಗಲಿದೆ. ಈ ನಿಮಿತ್ತ ವರ್ಷವಿಡೀ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಶ್ರೀಮಠದ ಪೀಠಾ ಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ತಿಳಿಸಿದರು.
ಮಂತ್ರಾಲಯದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿ, ದೇಶಾದ್ಯಂತ ರಾಯರ ಪಾದುಕೆ ರಥಯಾತ್ರೆ ನಡೆಸಲಾಗುವುದು. ಆರೋಗ್ಯ ಶಿಬಿರ, ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ದೇಶಾದ್ಯಂತ ಇರುವ ಎಲ್ಲ ಮಠಗಳಲ್ಲಿ ನಡೆಸುವುದಾಗಿ ತಿಳಿಸಿದರು.
ತುಂಗಭದ್ರಾ ನದಿಗೆ ಪುಷ್ಕರ ಪುಣ್ಯಸ್ನಾನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ, ಆಂಧ್ರ ಸರ್ಕಾರಕ್ಕೆ ರಸ್ತೆ, ಸಾರಿಗೆ, ವೈದ್ಯಕೀಯ ವ್ಯವಸ್ಥೆ ಕಲ್ಪಿಸುವಂತೆ ಚರ್ಚಿಸಲಾಗಿದೆ. 12 ಕೋಟಿ ರೂ. ವೆಚ್ಚದಲ್ಲಿ ನದಿ ಪಾತ್ರದಲ್ಲಿ ಸ್ನಾನಘಟ್ಟ ನಿರ್ಮಿಸಲಾಗುತ್ತಿದೆ. ಬರುವ ಭಕ್ತರಿಗೆ ಪ್ರಸಾದ, ವಸತಿ, ದರ್ಶನಾಶೀರ್ವಾದಕ್ಕೆ ಅಗತ್ಯ ಅನುಕೂಲ ಕಲ್ಪಿಸಲಾಗಿದೆ. ಭಕ್ತರ ಅನುಕೂಲಕ್ಕಾಗಿ 25 ರೂ. ದರದಲ್ಲಿ 12ಗಿ12 ಅಳತೆಯ 300 ಕೋಣೆಗಳ ವಸತಿ ಸಮುತ್ಛಯ ನಿರ್ಮಾಣಕ್ಕೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದರು.
ಹರಿದಾಸ ಅಧ್ಯಯನ ಪೀಠಕ್ಕೆ ಅಗತ್ಯ ನೆರವು: ಯರಗೇರಾ ಸ್ನಾತಕೋತ್ತರ ಕೇಂದ್ರದಲ್ಲಿ ಗುಲ್ಬರ್ಗಾ ವಿವಿಯಿಂದ ಸ್ಥಾಪಿತವಾದ ರಾಯಚೂರು ಹರಿದಾಸ ಸಾಹಿತ್ಯ ಅಧ್ಯಯನ ಪೀಠಕ್ಕೆ ಎದುರಾದ ಆರ್ಥಿಕ ಕೊರತೆ ನೀಗಿಸಲು ಅಗತ್ಯ ಸಹಕಾರ, ಅನುದಾನ ನೀಡಲು ಸಿದ್ಧ.
ಈಗಾಗಲೇ ಹಂಪಿ ವಿವಿ ಉಪ ಕುಲಪತಿ, ಜಾನಪದ ವಿವಿ ಉಪ ಕುಲಪತಿ ಜತೆ ಸಮಾಲೋಚನೆ ನಡೆಸಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಚರ್ಚೆ ಮಾಡಿದ್ದೇವೆ. ರಾಜ್ಯದ ಸಿಎಂ ಹಾಗೂ ಶಿಕ್ಷಣ ಸಚಿವರ ಜತೆಗೂ ಸಮಾಲೋಚಿಸಿ ಸೂಕ್ತ ಅನುದಾನ ಒದಗಿಸುವಂತೆಯೂ ಒತ್ತಾಯ ಮಾಡಲಾಗುವುದು ಎಂದು ಶ್ರೀ ಸುಬುಧೇಂದ್ರ ತೀರ್ಥರು ತಿಳಿಸಿದರು.