ಮಂಗಳೂರು: ದೃಷ್ಟಿ ನಿರ್ಮಾಣ ಸಂಸ್ಥೆಯಲ್ಲಿ, ಮಹಿಳೆಯ ಶೃಂಗಾರದಲ್ಲಿ ಪ್ರಮುಖವಾಗಿರುವ ರವಿಕೆಯನ್ನು ಆಧಾರವಾಗಿಟ್ಟುಕೊಂಡು ಚಿತ್ರೀಕರಿಸಲಾದ ಹೊಸ ಪ್ರಯೋಗ ವಿರುವ “ರವಿಕೆ ಪ್ರಸಂಗ’ ಕನ್ನಡ ಸಿನೆಮಾ ಫೆ. 16ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರ ನಿರ್ದೇಶಕ ಸಂತೋಷ್ ಕೊಡಂಕೇರಿ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮಧ್ಯಮ ವರ್ಗದ ಕುಟುಂಬವೊಂದರ ಹೆಣ್ಣು ಮಗಳ ಸುತ್ತ ಹೆಣೆಯಲಾಗಿರುವ ಚಿತ್ರ ಇದಾಗಿದೆ.
ದ.ಕ. ಜಿಲ್ಲೆಯಲ್ಲಿಯೇ ಸಿನೆಮಾದ ಚಿತ್ರೀಕರಣ ಹಾಗೂ ಕಥೆ ಕೂಡ ಸಾಗಿದೆ. ರವಿಕೆ ಪ್ರಸಂಗವೊಂದು ಕೋರ್ಟ್ ಮೆಟ್ಟಿಲೇರಿದಾಗ ಸಮಾಜ ಹೆಣ್ಣನ್ನು ನೋಡುವ ಪರಿ ಈ ಚಿತ್ರದ ಎಳೆ ಎಂದು ಅವರು ಹೇಳಿದರು.
ಚಿತ್ರದಲ್ಲಿ ಗೀತಾ ಭಾರತಿ ಭಟ್, ಸುಮನ್ ರಂಗನಾಥ್, ರಾಕೇಶ್ ಮಯ್ಯ, ಸಂಪತ್ ಮೈತ್ರೇಯ, ಪದ್ಮಜಾ ರಾವ್, ಕೃಷ್ಣಮೂರ್ತಿ ಕವತಾರ್, ಪ್ರವೀಮ್ ಅಥರ್ವ, ರಘು ಪಾಂಡೇಶ್ವರ್, ಹನುನಂತೇ ಗೌಡ, ಖುಷಿ ಆಚಾರ್, ಹನುಮಂತ ರಾವ್ ಕೆ. ಮುಂತಾದವರು ವಿವಿಧ ಪಾತ್ರಗಳಲ್ಲಿ ನಟಿಸಿದ್ದಾರೆ. ಪಾವನಾ ಸಂತೋಷ್ ಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.
ಮುರಳೀಧರ್ ಎನ್. ಅವರ ಛಾಯಾ ಗ್ರಹಣ, ರಘು ಶಿವರಾಮ್ ಅವರ ಸಂಕಲನ, ವಿನಯ್ ಶರ್ಮಾ ಅವರ ಸಂಗೀತ, ರಮೇಶ್‌ಕೃಷ್ಣ ಅವರ ಹಿನ್ನೆಲೆ ಹಾಗೂ ಕಿರಣ್ ಕಾವೇರಪ್ಪ ಸಾಹಿತ್ಯ ಒದಗಿಸಿದ್ದಾರೆ.
ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ನಟಿ ಗೀತಾ ಭಾರತಿ ಭಟ್ ಮಾತನಾಡಿ, ಈ ಚಿತ್ರವು ಮನೋರಂಜನೆಯ ಜತೆಗೆ ಕಾಮಿಡಿ, ಸಾಮಾಜಿಕ ಸಂದೇಶವನ್ನೂ ಹೊಂದಿದೆ. ಮಂಗಳೂರು ಭಾಷೆಯ ಸೊಗಡು, ದ.ಕ. ಜಿಲ್ಲೆಯ ಶ್ರೀಮಂತ ಸಂಸ್ಕೃತಿಯನ್ನು ಈ ಚಿತ್ರವು ಮೇಳೈಸಿದೆ ಎಂದವರು ಹೇಳಿದರು.
ಕಥೆ ಮತ್ತು ಸಂಭಾಷಣೆ ಬರೆದಿರುವ ಪಾವನಾ ಸಂತೋಷ್, ನಟ ರಘು ಪಾಂಡೇಶ್ವರ್, ರಕ್ಷಕ್ ಉಪಸ್ಥಿತರಿದ್ದರು.