“ಜನ ಕೊಡೋ ಜಡ್ಜ್ಮೆಂಟ್ ನಮಗೆ ಅಂತಿಮ..’ – ಹೀಗೆ ಹೇಳಿ ನಕ್ಕರು ರವಿಚಂದ್ರನ್. ಆಗಷ್ಟೇ “ದಿ ಜಡ್ಜ್ ಮೆಂಟ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿತ್ತು. ಇದು ರವಿಚಂದ್ರನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಿನಿಮಾ. ಚಿತ್ರ ಮೇ 24ರಂದು ತೆರೆಕಾಣುತ್ತಿದೆ.
ಟ್ರೇಲರ್ ರಿಲೀಸ್ ಬಳಿಕ ಚಿತ್ರದ ಬಗ್ಗೆ ಮಾತನಾಡಲಾರಂಭಿಸಿದರು ರವಿಚಂದ್ರನ್. “ಜಡ್ಜ್ಮೆಂಟ್ ಅನ್ನೋದು ಎಲ್ಲರ ಜೀವನದಲ್ಲೂ ಬಹಳ ಮುಖ್ಯ. ನಾವು ತೆಗೆದುಕೊಳ್ಳುವ ನಿರ್ಧಾರ ಅದು ನಮ್ಮ ಮುಂದಿನ ಭವಿಷ್ಯವನ್ನು ನಿರ್ಧರಿಸುತ್ತದೆ. ಅದು ಪ್ರೀತಿಯಾಗಿರಬಹುದು ಅಥವಾ ಯಾವುದೇ ವಿಷಯವಾಗಿರಬಹುದು… ಈ ಜಡ್ಜ್ಮೆಂಟ್ ಆರಂಭವಾಗಿದ್ದು ಶಿವ ಗೌಡ ಅವರಿಂದು. ನಿರ್ದೇಶಕ ಗುರುರಾಜ್ ಕುಲಕರ್ಣಿ ಆರಂಭದಲ್ಲಿ “ದಿ ಗಿಲ್ಟ್’ ಎಂಬ ಟೈಟಲ್‌ನಲ್ಲಿ ಸಿನಿಮಾ ಮಾಡಲು ಬಂದಿದ್ದರು. ಆ ನಂತರ ಟೈಟಲ್ ಅನ್ನು “ದಿ ಜಡ್ಜ್ಮೆಂಟ್’ ಎಂದು ಬದಲಿಸಿದರು. ಚಿತ್ರದಲ್ಲಿ ಸಾಕಷ್ಟು ಕೇಸ್‌ಗಳ ಬಗ್ಗೆ ನನ್ನಿಂದ ಹೇಳಿಸಿದ್ದಾರೆ. ಸಾಕಷ್ಟು ರಿಯಲ್ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡಿದ್ದಾರೆ. ಚಿತ್ರದಲ್ಲಿ ನಟಿಸಿದ ಎಲ್ಲರೂ ನನ್ನ ಜೊತೆ ನಟಿಸಿ ಖುಷಿಯಾಯಿತು ಎನ್ನುತ್ತಿದ್ದಾರೆ. ನನಗೂ ಅಷ್ಟೇ ಅವರೆಲ್ಲರ ಜೊತೆ ನಟಿಸಿ ಖುಷಿಯಾಗಿದೆ. ರವಿಚಂದ್ರನ್ ಅಂದರೆ ಹಂಗೆ, ಹಿಂಗೆ ಎಂದು ಜನರಲ್ಲಿ ಭಯ ಹುಟ್ಟಿಸಿಬಿಟ್ಟಿದ್ದರು. ಅದನ್ನೆಲ್ಲಾ ಕೇಳಿ ನನ್ನ ಬಗ್ಗೆ ಎಲ್ಲರೂ ಒಂದು ಕಲ್ಪನೆ ಕಟ್ಟಿಕೊಂಡಿದ್ದರು. ನಾನು ಸೆಟ್ ಗೆ ಬಂದರೆ ನನ್ನ ಮುಂದಿರುವ ಕ್ಯಾಮರಾವನ್ನು ಪ್ರೀತಿಸುವಷ್ಟು ಬೇರೆ ಯಾರನ್ನೂ ಪ್ರೀತಿಸುವುದಿಲ್ಲ’ ಎಂದರು.
ನಿರ್ದೇಶಕ ಗುರುರಾಜ್ ಕುಲಕರ್ಣಿ ಅವರಿಗೆ “ದಿ ಜಡ್ಜ್ಮೆಂಟ್’ ಮೇಲೆ ವಿಶ್ವಾಸವಿದೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲ್ಲುತ್ತದೆ ಎನ್ನುತ್ತಾರೆ. “ಮನುಷ್ಯನ ಪ್ರಾಯಶ್ಚಿತ್ತದ ಕಥೆ ಇದು. ನಾವು ತಿಳಿದೋ, ತಿಳಿಯದೆಯೋ ತಪ್ಪು ಮಾಡಿರುತ್ತೇವೆ. ಆ ತಪ್ಪನ್ನು ಅರ್ಥ ಮಾಡಿಕೊಳ್ಳುವುದರ ಜೊತೆಗೆ, ಅದನ್ನು ಸರಿಪಡಿಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕು. ಈ ಚಿತ್ರದಲ್ಲಿ ತಪ್ಪು ಮಾಡಿರುವ ವ್ಯಕ್ತಿ ಆ ತಪ್ಪನ್ನು ಸರಿಪಡಿಸಿಕೊಳ್ಳುವುದಕ್ಕೆ ಹೊರಟಾಗ, ಅವನಿಗಾಗುವ ಅಡೆತಡೆಗಳ ಬಗ್ಗೆ ಹೇಳುವ ಪ್ರಯತ್ನ ಮಾಡಿದ್ದೇವೆ’ ಎನ್ನುವುದು ಅವರ ಮಾತು. ಈ ಕಥೆಯನ್ನು ರವಿಚಂದ್ರನ್ ಅವರಿಗಾಗಿಯೇ ಬರೆದಿದ್ದು ಎನ್ನಲು ಅವರು ಮರೆಯಲಿಲ್ಲ.
ಚಿತ್ರದಲ್ಲಿ ನಟಿಸಿರುವ ದಿಗಂತ್ ಕೂಡಾ ಮಾತನಾಡಿದರು. “ನಾನು ಇಲ್ಲಿಯವರೆಗೆ ಮಾಡಿರುವ ಪಾತ್ರಗಳಿಗಿಂತ ವಿಭಿನ್ನವಾದ ಪಾತ್ರ ಸಿನಿಮಾದಲ್ಲಿದೆ. ಇಂದಿನ ಜನರೇಶನ್ ಬೆಂಗಳೂರಿನಂತಹ ಸಿಟಿಯಲ್ಲಿರುವ ಯುವಕರನ್ನು ಪ್ರತಿನಿಧಿಸುವಂತೆ ನನ್ನ ಪಾತ್ರವಿದೆ. ತನ್ನ ಇಷ್ಟದಂತೆ ಜೀವನ ನಡೆಸಲು ಹೊರಟ ಹುಡುಗನೊಬ್ಬನ ಜೀವನದಲ್ಲಿ ನಡೆಯುವ ಕೆಲವು ಅನಿರೀಕ್ಷಿತ ಘಟನೆಗಳು, ಏನೆಲ್ಲ ಬದಲಾವಣೆಗಳಿಗೆ ಕಾರಣವಾಗುತ್ತದೆ ಎಂಬುದರ ಸುತ್ತ ನನ್ನ ಪಾತ್ರವಿದೆ’ ಎಂದರು.
ಉಳಿದಂತೆ ಮೇಘನಾ ಗಾಂವ್ಕರ್, ಲಕ್ಷ್ಮೀ ಗೋಪಾಲ ಸ್ವಾಮಿ, ಧನ್ಯಾ ಚಿತ್ರದ ಬಗ್ಗೆ ಮಾತನಾಡಿದರು. ಈ ಚಿತ್ರ ಜಿ9 ಕಮ್ಯುನಿಕೇಶನ್‌ನಡಿ ತಯಾರಾಗಿದೆ. ಚಿತ್ರದಲ್ಲಿ ನಾಗಾಭರಣ, ಪ್ರಕಾಶ್ ಬೆಳವಾಡಿ, ರಂಗಾಯಣ ರಘು, ರವಿಶಂಕರ್ ಗೌಡ, ಸುಜಯ್ ಶಾಸ್ತ್ರಿ ,ಕೃಷ್ಣ ಹೆಬ್ಟಾಳೆ, ರೇಖಾ ಕೂಡ್ಲಿಗಿ, ನವಿಲ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಪಿ.ಕೆ. ಎಚ್. ದಾಸ್ ಛಾಯಾಗ್ರಹಣ, ಬಿ.ಎಸ್. ಕೆಂಪರಾಜು ಅವರ ಸಂಕಲನ ಮತ್ತು ಅನೂಪ್ ಸೀಳಿನ್ ಸಂಗೀತವಿದೆ.