ಚೆನ್ನೈ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬಾಕಿ ಉಳಿದಿರುವ ಏಕೈಕ ಟೆಸ್ಟ್ ಪಂದ್ಯಕ್ಕಾಗಿ ಟೀಂ ಇಂಡಿಯಾ ಈಗಾಗಲೇ ತಯಾರಿ ಆರಂಭಿಸಿದೆ. ಲಂಡನ್ ತಲುಪಿರುವ ರೋಹಿತ್ ಶರ್ಮಾ ನೇತೃತ್ವದ ತಂಡ ಅಭ್ಯಾಸ ಆರಂಭಿಸಿದೆ. ಆದರೆ ತಂಡದ ಪ್ರಮುಖ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಭಾರತದಲ್ಲೇ ಉಳಿದುಕೊಂಡಿದ್ದಾರೆ.
ರವಿಚಂದ್ರನ್ ಅಶ್ವಿನ್ ಅವರಿಗೆ ಕೋವಿಡ್ 19 ಪಾಸಿಟಿವ್ ವರದಿಯಾಗಿದೆ. ಹೀಗಾಗಿ ಅವರು ಟೀಂ ಇಂಡಿಯಾ ಜೊತೆಗೆ ಇಂಗ್ಲೆಂಡ್ ಗೆ ತೆರಳಿಲ್ಲ ಎಂದು ವರದಿ ತಿಳಿಸಿದೆ.
“ರವಿಚಂದ್ರನ್ ಅಶ್ವಿನ್ ಅವರು ತಂಡದೊಂದಿಗೆ ಇಂಗ್ಲೆಂಡ್ ಗೆ ಪ್ರಯಾಣ ಮಾಡಿಲ್ಲ. ಹೊರಡುವ ಮೊದಲು ನಡೆಸಿದ್ದ ಕೋವಿಡ್ ಪರೀಕ್ಷೆಯಲ್ಲಿ ಅವರಿಗೆ ಪಾಸಿಟಿವ್ ವರದಿಯಾಗಿದೆ. ಟೆಸ್ಟ್ ಪಂದ್ಯ ಜುಲೈ 1ರಿಂದ ಆರಂಭವಾಗುವ ಕಾರಣ ಅವರು ಅದಕ್ಕಿಂತ ಮೊದಲು ಗುಣಮುಖವಾಗುವ ನಂಬಿಕೆ ನಮಗಿದೆ. ಆದರೆ ಅದಕ್ಕಿಂತ ಮೊದಲು ಲೀಸೆಸ್ಟರ್‌ಶೈರ್ ವಿರುದ್ಧ ನಡೆಯುವ ಅಭ್ಯಾಸ ಪಂದ್ಯಕ್ಕೆ ಅವರು ಲಭ್ಯವಾಗುವುದಿಲ್ಲ” ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಮಧ್ಯೆ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಲೀಸೆಸ್ಟರ್‌ಶೈರ್ ತಲುಪಿದ್ದು, ಅಭ್ಯಾಸದಲ್ಲಿ ತೊಡಗಿದೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದ ಪ್ರಧಾನ ಕೋಚ್ ರಾಹುಲ್ ದ್ರಾವಿಡ್, ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಕೂಡಾ ಇಂಗ್ಲೆಂಡ್ ಗೆ ತೆರಳಿದ್ದಾರೆ.
ಇದನ್ನೂಓದಿ:ಹಾಸ್ಟೆಲ್ ಹುಡುಗರ ಸುತ್ತ ‘ಅಬ್ಬಬ್ಬ’
ಬಾಕಿ ಉಳಿದಿರುವ ಟೆಸ್ಟ್ ಪಂದ್ಯ ಜು.1ರಿಂದ ಆರಂಭವಾಗಲಿದೆ. ಬಳಿಕ ಟೀಂ ಇಂಡಿಯಾವು ಇಂಗ್ಲೆಂಡ್ ವಿರುದ್ಧ ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನು ಆಡಲಿದೆ.