ಮುಂಬಯಿ: ಭಾರತ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರಾಗಿ ರವಿ ಶಾಸ್ತ್ರಿಯವರೇ ಮುಂದುವರಿಯಲಿದ್ದಾರೆ. ರವಿಶಾಸ್ತ್ರಿ ಅವರು 2021ರ ನವಂಬರ್ ವರೆಗೆ ಭಾರತ ತಂಡದ ಪ್ರಧಾನ ತರಬೇತುದಾರರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಕೋಚ್ ರೇಸ್ ನಲ್ಲಿದ್ದ ಒಟ್ಟು ಆರು ಜನರಿಗೆ ಇವತ್ತು ಸಂದರ್ಶನವನ್ನು ನಡೆಸಲಾಯಿತು. ರವಿಶಾಸ್ತ್ರಿಯವರು ಸದ್ಯ ತಂಡದ ಜೊತೆ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವುದರಿಂದ ಅವರು ಇಂದಿನ ಸಂದರ್ಶನಕ್ಕೆ ಹಾಜರಾಗಿರಲಿಲ್ಲ.
ಭಾರತಕ್ಕೆ ಪ್ರಥಮ ವಿಶ್ವಕಪ್ ಗೆಲ್ಲಿಸಿಕೊಟ್ಟ ಕಪ್ತಾನ ಕಪಿಲ್ ದೇವ್ ನೇತೃತ್ವದ ತ್ರಿಸದಸ್ಯ ಕ್ರಿಕೆಟ್ ಸಲಹಾ ಸಮಿತಿ ಭಾರತ ತಂಡಕ್ಕೆ ನೂತನ ತರಬೇತುದಾರರನ್ನು ಆಯ್ಕೆಮಾಡುವ ಜವಾಬ್ದಾರಿಯನ್ನು ಹೊತ್ತುಕೊಂಡಿತ್ತು.
ಹಾಲಿ ಕೋಚ್ ರವಿಶಾಸ್ತ್ರಿ ಸಹಿತ ಆಸ್ಟ್ರೇಲಿಯಾದ ಮಾಜೀ ಕ್ರಿಕೆಟಿಗ ಟಾಮ್ ಮೂಡಿ, ನ್ಯೂಝಿಲ್ಯಾಂಡ್ ನ ಮಾಜೀ ಆಟಗಾರ ಮೈಕ್ ಹೆಸೆನ್, ಭಾರತದ ಮಾಜೀ ಕ್ರಿಕೆಟಿಗ ಲಾಲ್ ಚಂದ್ ರಜಪೂತ್, ಮಾಜೀ ಆಲ್ ರೌಂಡರ್ ರಾಬಿನ್ ಸಿಂಗ್, ವೆಸ್ಟ್ ಇಂಡೀಸಿನ ಫಿಲ್ ಸಿಮನ್ಸ್ ಹೆಸರುಗಳು ಈ ಅಂತಿಮ ಪಟ್ಟಿಯಲ್ಲಿದ್ದವು.
ತ್ರಿಸದಸ್ಯ ಸಮಿತಿಯಲ್ಲಿ ಕಪಿಲ್ ದೇವ್ ಜೊತೆಗಿದ್ದ ಇನ್ನಿಬ್ಬರು ಸದಸ್ಯರೆಂದರೆ ಕರ್ನಾಟಕದ ಮಾಜೀ ಆಟಗಾರ್ತಿ ಶಾಂತಾ ರಂಗಸ್ವಾಮಿ ಮತ್ತು ಮಾಜೀ ಆರಂಭಿಕ ಆಟಗಾರ ಅಂಶುಮಾನ್ ಗಾಯಕ್ವಾಡ್.