Advertisement

ಸಂಸದ ಡಿ.ಕೆ.ಸುರೇಶ್‌ಗೆ ರವಿ ಪೂಜಾರಿ ಹೆಸರಲ್ಲಿ ಬೆದರಿಕೆ ಕರೆ

11:30 AM Aug 16, 2017 | |

ಬೆಂಗಳೂರು: ಸಂಸದ ಡಿ.ಕೆ.ಸುರೇಶ್‌ಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಭೂಗತ ಪಾತಕಿ ರವಿಪೂಜಾರಿ ವಿರುದ್ಧ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಬೆದರಿಕೆ ಹಾಕಿದ ನಂಬರಿನ ಮೂಲ ಪತ್ತೆಗಾಗಿ ಠಾಣೆ ಪೊಲೀಸರು ಸೈಬರ್‌ ಪೊಲೀಸರ ನೆರವು ಕೋರಿದ್ದಾರೆ. 

Advertisement

ಸಚಿವ ಡಿ.ಕೆ.ಶಿವಕುಮಾರ್‌ ಮನೆ ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ ದಿನವೇ ರವಿಪೂಜಾರಿ ಹೆಸರಿನಲ್ಲಿ ಸಂಸದ ಡಿ.ಕೆ.ಸುರೇಶ್‌ ಕಚೇರಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ ಹಣಕ್ಕೆ ಬೇಡಿಕೆ ಇಟ್ಟಿದ್ದ.  ಆ ಸಮಯದಲ್ಲಿ ಸುರೇಶ್‌ ಕಚೇರಿಯಲ್ಲಿ ಇರಲಿಲ್ಲ. ಕಚೇರಿ ಸಿಬ್ಬಂದಿ ಅರುಣ್‌ ದೇವ್‌ ಎನ್ನುವವರು ಕರೆ ಸ್ವೀಕರಿಸಿದ್ದರು.

ಫೋನ್‌ ಮಾಡಿದ ವ್ಯಕ್ತಿ ಮೊದಲು ಹಿಂದಿಯಲ್ಲಿ ಮಾತನಾಡಿ ತನ್ನನ್ನು ರವಿಪೂಜಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಆ ನಂತರ ಸುರೇಶ್‌ ಎಲ್ಲಿದ್ದಾರೆ ಎಂದು ವಿಚಾರಿಸಿದ. ಆ ವೇಳೆಯಲ್ಲಿ ಸುರೇಶ್‌ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಇದ್ದುದರಿಂದ ಅವರ ಆಪ್ತ ಸಹಾಯಕ ವಿನಯ್‌ಗೆ ಕರೆ ಮಾಡುವಂತೆ ಸೂಚಿಸಿದ ಅರಣ್‌, ವಿನಯ್‌ ನಂಬರ್‌ ಕೊಟ್ಟಿದ್ದಾರೆ.

ಆದರೆ, ಮೊಬೈಲ್‌ಗೆ ಯಾವುದೇ ಕರೆಗಳು ಬಂದಿಲ್ಲ. ಸ್ಥಿರ ದೂರವಾಣಿಗೆ ಬಂದಿರುವ ಕರೆಯಲ್ಲಿ 14 ಸಂಖ್ಯೆಯ ಒಂದು ನಂಬರ್‌ ದಾಖಲಾಗಿದೆ. ಅದು ಕಂಪ್ಯೂಟರ್‌ ಕರೆ ಎನ್ನಲಾಗಿದೆ. ಆದರೆ, ಕರೆ ಮಾಡಿದ ವ್ಯಕ್ತಿ ಯಾರು? ಎಲ್ಲಿಂದ ಕರೆ ಮಾಡಿದ್ದ ಎನ್ನುವುದು ಗೊತ್ತಾಗಿಲ್ಲ. ಅದು ಹುಸಿ ಕರೆ ಇರಬಹುದು.

ಆದರೆ, ಕರೆ ಮಾಡಿದ ವ್ಯಕ್ತಿ ರವಿಪೂಜಾರಿ ಎಂದು ಹೇಳಿಕೊಂಡಿದ್ದರಿಂದ ಸದ್ಯ ರವಿಪೂಜಾರಿ ವಿರುದ್ಧವೇ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದರು. ಘಟನೆ ಕುರಿತು ಸುರೇಶ್‌ ಕಚೇರಿ ಸಿಬ್ಬಂದಿ ಅರುಣ್‌ದೇವ್‌ ದೂರು ನೀಡಿದ್ದು, ಎಫ್ಐಆರ್‌ ದಾಖಲಾಗಿದೆ ಎಂದು ಸದಾಶಿವನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next