Advertisement
ಆ ಮೂಲಕ ರವಿ ಪೂಜಾರಿಯನ್ನು ಆದಷ್ಟು ಬೇಗ ಭಾರತಕ್ಕೆ ಗಡಿಪಾರು ಮಾಡಿಸಿಕೊಳ್ಳುವುದಕ್ಕೆ ಬೇಕಾದ ದಾಖಲೆಗಳನ್ನು ಇಂಟರ್ ಪೋಲ್ ಹಾಗೂ ಸೆನಗಲ್‌ನ ಡಕಾರ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳ ನೆರವಿನೊಂದಿಗೆ ಸೆನಗಲ್‌ನ ಪೊಲೀಸರಿಗೆ ಸಲ್ಲಿಸುವುದಕ್ಕೆ ತಯಾರಿ ನಡೆಯುತ್ತಿದೆ. ಈ ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಮುಗಿಸುವುದಕ್ಕೆ ಕೆಲವು ದಿನಗಳ ಕಾಲಾವಕಾಶ ಬೇಕಿದೆ. ಹೀಗಾಗಿ ರವಿ ಪೂಜಾರಿಯನ್ನು ಭಾರತಕ್ಕೆ ಕರೆತರುವುದಕ್ಕೆ ಮತ್ತಷ್ಟು ದಿನಗಳು ತಗಲುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ರವಿ ಪೂಜಾರಿಗೆ ಮಂಡ್ಯ ಜಿಲ್ಲೆಯಿಂದ ನಕಲಿ ಪಾಸ್‌ಪೋರ್ಟ್ ಮಾಡಿಸಿಕೊಟ್ಟದ್ದರ ಹಿಂದೆ ರಾಜ್ಯದ ಮಾಜಿ ಭೂಗತ ಪಾತಕಿಯ ಕೈವಾಡವಿದೆ ಎನ್ನುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ ಎನ್ನಲಾಗಿದೆ. ನಕಲಿ ಪಾಸ್‌ಪೋರ್ಟ್ ಮಾಡಿಸುವುದಕ್ಕೆ ರವಿ ಪೂಜಾರಿ ಬರ್ಕಿನಾ ಫಾಸೊ ದೇಶದ ಗುರುತಿನ ಚೀಟಿ ಮಾಡಿಸಿಕೊಂಡಿದ್ದ. ಇದರಲ್ಲಿಯೂ ಮೈಸೂರು ಎಂದು ನಮೂದಿಸಲಾಗಿದೆ. ರವಿ ಪೂಜಾರಿ ಹತ್ತಾರು ವರ್ಷ ಕಾಲ ಆಫ್ರಿಕಾದ ವಿವಿಧ ದೇಶಗಳಲ್ಲಿ ನೆಲೆ
ನಿಲ್ಲಲು ಬೇಕಾದ ಸ್ಥಳೀಯ ದಾಖಲೆಗಳನ್ನು ಮಾಡಿಸಿ ಕೊಂಡಿದ್ದ ಎನ್ನುವುದು ಈಗ ಬೆಳಕಿಗೆ ಬಂದಿದೆ. ರವಿ ಪೂಜಾರಿಯ ಬಂಧನದ ಸುದ್ದಿ ಸೆನಗಲ್‌ನ ಕೆಲವು ಪತ್ರಿಕೆಗಳ ಮುಖಪುಟದಲ್ಲಿ ಪ್ರಕಟಗೊಂಡಿದೆ. ಭಾರತದಲ್ಲಿ ಬಾಲಿವುಡ್ ತಾರೆಯರ ಸಹಿತ ನೂರಾರು ಮಂದಿಗೆ ಬೆದರಿಕೆ ಕರೆ ಮಾಡಿ ಹಫ್ತಾ ವಸೂಲಿ ಮಾಡುತ್ತಿದ್ದ ಕುಖ್ಯಾತನನ್ನು ಅಪರಾಧ ತನಿಖಾ ವಿಭಾಗವು ಇಂಟರ್‌ಪೋಲ್ ನೆರವಿನೊಂದಿಗೆ ಬಂಧಿಸಿದೆ ಎಂಬುದಾಗಿ ಅಲ್ಲಿನ ಕೆಲವು ಪತ್ರಿಕೆಗಳು ವರದಿ ಮಾಡಿವೆ.
Related Articles
ರವಿ ಪೂಜಾರಿಯ ಅಕ್ರಮ-ಮೋಸದ ಆಟಗಳು ಬಯಲಾಗುತ್ತಿದ್ದಂತೆ ಸೆನಗಲ್ ಪೊಲೀಸರಿಂದಲೂ ಲಾಠಿ ಏಟುಗಳು ಬಿದ್ದಿವೆ. ಸದ್ಯ ಆತ ಜ್ವರದಿಂದ ಬಳಲುತ್ತಿದ್ದು, ಚಿಕಿತ್ಸೆ ಕೂಡ ನೀಡಲಾಗುತ್ತಿದೆ ಎನ್ನಲಾಗುತ್ತಿದೆ. ಈ ನಡುವೆ ಸೆನಗಲ್‌ನ ಪೊಲೀಸರು ಆಫ್ರಿಕದ ದೇಶವೊಂದರಲ್ಲಿಯೇ ತಲೆಮರೆಸಿಕೊಂಡಿರುವ ಆತನ ಪತ್ನಿಯನ್ನು ಕೂಡ ಸಂಪರ್ಕಿಸಿ ಮಾಹಿತಿ ಕಲೆ ಹಾಕುವ ಪ್ರಯತ್ನ ನಡೆಸಿದ್ದಾರೆ. ಆದರೆ ಆಕೆ ತನಗೂ ರವಿ ಪೂಜಾರಿಗೂ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ.
Advertisement