ರವಿ ಹಿಸ್ಟರಿ … ಇದು ಡಿ.ಕೆ. ರವಿ ಅವರ ಹಿಸ್ಟರಿನಾ, ರವಿ ಬೆಳಗೆರೆ ಅವರ ಹಿಸ್ಟರಿನಾ, ರವಿಚಂದ್ರನ್ ಹಿಸ್ಟರಿನಾ ಅಥವಾ … ರವಿಪೂಜಾರಿ ಹಿಸ್ಟರಿನಾ? ಶೀರ್ಷಿಕೆ ನೋಡಿದಾಗ ಸಹಜವಾಗಿ ಮೂಡುವ ಪ್ರಶ್ನೆಗಳಿವು. ಆದರೆ, ಇಲ್ಲೀಗ ಹೇಳ ಹೊರಟಿರುವ ಇದು ಯಾರ “ಹಿಸ್ಟರಿ’ ಅಲ್ಲ, ಒಬ್ಬ ಸಾಮಾನ್ಯ ಹುಡುಗನ ಸಾಧನೆ ಹಿಂದಿರುವ ಇತಿಹಾಸ. ಇಂಥದ್ದೊಂದು ಇತಿಹಾಸ ಸಾರುವ ಕಥೆ ಇಟ್ಟುಕೊಂಡು ಹೀಗೊಂದು ಸಿನಿಮಾ ಮಾಡಿದ್ದಾರೆ ನಿರ್ದೇಶಕ ಮಧುಚಂದ್ರ.
“ಸೈಬರ್ ಯುಗದೊಳ್ ನವಯುವ ಮಧುರ ಪ್ರೇಮ ಕಾವ್ಯಂ’ ಮತ್ತು “ವಾಸ್ಕೋಡಿಗಾಮ’ ನಿರ್ದೇಶಿಸಿದ್ದ ಮಧುಚಂದ್ರ ಅವರ ಮೂರನೇ ಚಿತ್ರವಿದು. ರವಿ ಎಂಬ ಹುಡುಗನೊಬ್ಬ ತನ್ನ ಕನಸು ನನಸಸಾಗಿಸಿಕೊಳ್ಳಲು ಹೊರಡುವ ಜರ್ನಿ ಸುತ್ತ ನಡೆಯುವ ಕಥೆ ಇದು. ಆ ಜರ್ನಿಯಲ್ಲಿ ಏನೆಲ್ಲಾ ಆಗುತ್ತೆ ಅನ್ನೋದು ಕಥೆ. ಒಂದೇ ಕಥೆ ಇಲ್ಲಿದ್ದರೂ ನಾಲ್ಕು ಆಯಾಮಗಳು ಇಲ್ಲಿವೆ. ರವಿ ಎಂಬ ಹುಡುಗನೊಬ್ಬನ ಬಯೋಗ್ರಫಿ ಇಲ್ಲಿದೆ.
ಅಂದಹಾಗೆ, ನಿರ್ದೇಶಕರು ಈ ಚಿತ್ರ ಶುರುವಿಗೆ ಮುನ್ನ, ಎಲ್ಲಾ ಕಲಾವಿದರನ್ನು ಒಂದೆಡೆ ಸೇರಿಸಿ, ಮೂರು ತಿಂಗಳ ಕಾಲ ವರ್ಕ್‌ಶಾಪ್ ಮಾಡಿಸಿದ್ದಾರೆ. ನೀನಾಸಂ, ರಂಗಾಯಣ ಪ್ರತಿಭೆಗಳಿಗೂ ಇಲ್ಲಿ ಜಾಗ ಕೊಟ್ಟಿದ್ದಾರೆ. ಇದು ನೈಜ ಘಟನೆಯೇನಲ್ಲ. ಬೆಂಗಳೂರಲ್ಲೇ ಬಹುತೇಕ ಚಿತ್ರೀಕರಿಸಿದ್ದಾರೆ ಮಧುಚಂದ್ರ. ಕಾರ್ತಿಕ್ ಈ ಚಿತ್ರದ ಹೀರೋ. ಅಷ್ಟೇ ಅಲ್ಲ, ಹಣ ಹಾಕಿ ನಿರ್ಮಾಪಕರೂ ಆಗಿದ್ದಾರೆ.
ಅಭಿನಯ ತರಂಗ ಮತ್ತು ಮುಂಬೈನ ಅನುಪಮ್‌ಖೇರ್ ನಟನಾ ಶಾಲೆಯಲ್ಲಿ ಕಲಿತು ಸಿನಿಮಾ ಮಾಡುವ ಕನಸು ಕಂಡಿದ್ದರು. ಆ ಕನಸಿಗೆ ಜೊತೆಯಾದವರು ಮಧುಚಂದ್ರ. ಕಥೆ ಕೇಳಿದ ಕಾರ್ತಿಕ್ ಇಷ್ಟಪಟ್ಟು, ಸಿನಿಮಾ ಮಾಡಿದ್ದಾರೆ. ಒಂದುವರೆ ವರ್ಷದ ಈ ಜರ್ನಿಯಲ್ಲಿ ಒಳ್ಳೆಯ ಅನುಭವ ಪಡೆದು, ಹೊಸ ತಂಡ ಕಟ್ಟಿಕೊಂಡು ಹೊಸಬಗೆಯ ಚಿತ್ರ ಕೊಡುವ ಉತ್ಸಾಹ ಅವರದು.
ಪಲ್ಲವಿ ರಾಜ್ ಚಿತ್ರದ ನಾಯಕಿ ಅವರಿಗೆ ಇಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಸಿಕ್ಕಿದೆ. ಐಶ್ವರ್ಯರಾವ್ ಎಂಬ ಮೈಸೂರಿನ ಇನ್ನೊಬ್ಬ ಬೆಡಗಿಯೂ ಇಲ್ಲಿ ನಾಯಕಿ. ಮೂಲತಃ ಡ್ಯಾನ್ಸರ್ ಆಗಿರುವ ಐಶ್ವರ್ಯರಾವ್, ಒಳ್ಳೇ ತಂಡದಲ್ಲಿ ಕೆಲಸ ಮಾಡಿದ ಬಗ್ಗೆ ಖುಷಿಗೊಂಡಿದ್ದಾರೆ. ಚಿತ್ರಕ್ಕೆ ಸೂರಜ್ ಸರ್ಜಾ ಮತ್ತು ವಿಜೇತ್ ಕೃಷ್ಣ ಸಂಗೀತ ನೀಡಿದ್ದಾರೆ. ಇವರಿಬ್ಬರೂ ಅರ್ಜುನ್ ಸರ್ಜಾ ಅವರ ಕುಟುಂಬದವರು ಎಂಬುದು ವಿಶೇಷ.
ಚಿತ್ರದಲ್ಲಿ ಮೂರು ಹಾಡುಗಳಿಗೆ ರಾಗ ಸಂಯೋಜಿಸಿದ್ದು, ಇಲ್ಲಿ ಮೆಲೋಡಿ, ರ್ಯಾಪ್ ಕಲ್ಚರ್ ಮೇಲಿನ ಹಾಡು ಹಾಗೂ ಗ್ಯಾಂಗ್‌ಸ್ಟರ್ ಕುರಿತ ಟಪ್ಪಾಂಗುಚ್ಚಿ ಹಾಡು ಕೊಟ್ಟಿದ್ದಾರೆ ಸೂರಜ್ ಸರ್ಜಾ ಮತ್ತು ವಿಜೇತ್ ಕೃಷ್ಣ. ಚಿತ್ರದ ಆಡಿಯೋ ಹಕ್ಕನ್ನು ಡಿಬೀಟ್ಸ್ ಸಂಸ್ಥೆ ಪಡೆದಿದೆ. ಶೈಲಜಾನಾಗ್ ಅವರು ಹಾಡುಗಳನ್ನು ಕೇಳಿ, ಯಾವುದೇ ವ್ಯಾಪಾರ ದೃಷ್ಟಿಯಿಂದ ಮಾತನಾಡದೆ, ಹೊಸಬರ ಪ್ರಯತ್ನಕ್ಕೆ ಸಾಥ್ ಕೊಟ್ಟಿದ್ದಾರೆ. ಅನಂತ್ ಅರಸ್ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ಅಬ್ದುಲ್ ಕರೀಂ ಸಂಕಲನ ಮಾಡಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಹೊರಬಂದಿವೆ.