Advertisement

ಆರ್ಥಿಕ ಬಡತನವಿದ್ದರೂ ಆಚಾರದಲ್ಲಿ ಶ್ರೀಮಂತಿಕೆ ಅಗತ್ಯ: ರವಿ ಡಿ. ಚನ್ನಣ್ಣನವರ್‌ 

12:09 AM Dec 17, 2021 | Team Udayavani |

ಉಡುಪಿ: ಆರ್ಥಿಕ ಬಡತನವಿದ್ದರೂ ಆಲೋಚನೆ, ಆಚಾರದಲ್ಲಿ ಶ್ರೀಮಂತಿಕೆ ಇರಬೇಕು ಎಂದು ಹಿರಿಯ ಐಪಿಎಸ್‌ ಅಧಿಕಾರಿ ರವಿ ಡಿ. ಚನ್ನಣ್ಣನವರ್‌ ಕಿವಿಮಾತು ನುಡಿದರು.

Advertisement

ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಗುರುವಾರ ನಡೆದ ವಿಶ್ವಾರ್ಪಣಮ್‌ ಸಭೆಯಲ್ಲಿ “ಪ್ರಜ್ಞಾವಂತ ಸಮಾಜ’ ಎಂಬ ವಿಷಯ ಕುರಿತು ಅವರು ಮಾತನಾಡಿದರು.

ಧರ್ಮ, ಮಾನವೀಯತೆ, ಕಾನೂನು…

ನಮ್ಮಲ್ಲಿ ಹಣವಿಲ್ಲದೆ ಇರಬಹುದು. ಆದರೆ ನನ್ನಿಂದಾಗದು ಎಂಬ ಕೀಳರಿಮೆ ಬೇಡ. ಮಾಡಲೇಬೇಕೆಂಬ ಪ್ರಬಲ ಇಚ್ಛೆ ಇರಬೇಕು. ಪ್ರತಿಯೊಬ್ಬರಿಗೂ ನಾನು ಯಾರು? ನನ್ನ ಜವಾಬ್ದಾರಿ ಏನು ಎಂಬ ಭಾವ ಬೇಕು. ಪೊಲೀಸ್‌ ಅಧಿಕಾರಿಯಾಗಿ ನಾನು ಏನು ಒಳಿತನ್ನು ಮಾಡಲು ಸಾಧ್ಯ ಎಂದು ಯೋಚಿಸಬೇಕು. ನಮ್ಮ ವ್ಯಾಪ್ತಿಯಲ್ಲಿ ಒಳಿತನ್ನೇ ಮಾಡಬೇಕು. ಧರ್ಮ, ಮಾನವೀಯತೆ ಕಾನೂನಿಗಿಂತ ದೊಡ್ಡದು ಎಂಬುದನ್ನು ಅರಿತಿರಬೇಕು ಎಂದು ಹೇಳಿದರು.

ಮಕ್ಕಳಿಗೆ ಪಂಚತಂತ್ರ ಪಾಠ:

Advertisement

ನಾನು ನಿತ್ಯವೂ ಮನೆಯಲ್ಲಿ ರಾತ್ರಿ ಮಕ್ಕಳಿಗೆ ಪಂಚತಂತ್ರದ ಕಥೆ ಹೇಳುತ್ತೇನೆ. ಪೆನ್ಸಿಲ್‌, ರೊಟ್ಟಿಯನ್ನು ಯಾರಿಗಾದರೂ ಕೊಟ್ಟು ಬಾ ಎನ್ನುತ್ತೇನೆ. ಚಿಕ್ಕಪ್ರಾಯದಿಂದಲೇ ಒಳ್ಳೆಯದನ್ನು ನಾವು ಮಕ್ಕಳಿಗೆ ಕಲಿಸಬೇಕು ಎಂದರು.

ಯಶಸ್ಸು, ಸಾಮರ್ಥ್ಯ:

ಸಾಮಾನ್ಯ ವ್ಯಕ್ತಿಯೂ ಅಸಾಮಾನ್ಯನಾಗಲು ಜ್ಞಾನ, ಶಿಕ್ಷಣ ಬೇಕು. ಇಂದಿನ ಬಹುತೇಕ ಸಮಸ್ಯೆಗಳಿಗೆ ಕರ್ತವ್ಯ ವಿಮುಖತೆಯೇ ಕಾರಣ. ಯಾವುದೇ ಕೆಲಸವಿರಲಿ ಅದರಲ್ಲಿ ಶ್ರದ್ಧೆ ವಹಿಸಿ ಮಾಡಬೇಕು. ಪರರಿಗಾಗಿ ಬದುಕುವ ಸಮಾಜಪ್ರಜ್ಞೆ ಇರಬೇಕು. ಯಶಸ್ಸಿಗೆ ಸಾಮರ್ಥ್ಯ ಬೇಕು. ಇತರರು ಸಹಾಯ ಮಾಡಬಹುದು. ಮಳೆ ಎಲ್ಲ ಕಡೆಯೂ ಬರಬಹುದು, ಆದರೆ ಎಲ್ಲ ಕಡೆ ಫ‌ಲ ಸಿಗುವುದಿಲ್ಲ, ಪ್ರಯತ್ನಪಟ್ಟಲ್ಲಿ ಮಾತ್ರ ಫ‌ಲ ಸಿಗುತ್ತದೆ ಎಂದರು.

ಸ್ವಾವಲಂಬಿ ಭಾರತ:

ಅರ್ಥಶಾಸ್ತ್ರಜ್ಞ ಬೆಂಗಳೂರಿನ ಎಸ್‌. ವಿಶ್ವನಾಥ ಭಟ್‌ ಅವರು, ಕೊರೊನಾ ಸೋಂಕಿಗೆ ಅಮೆರಿಕ ಮತ್ತು ಭಾರತದಲ್ಲಿ ಏಕಕಾಲದಲ್ಲಿ ಲಸಿಕೆಯನ್ನು ವಿತರಿಸಲಾಯಿತು. ಇದರಿಂದ ಕ್ಷಿಪ್ರವಾಗಿ ಆರ್ಥಿಕ ಪ್ರಗತಿ ಸಾಧಿಸಲು ಕಾರಣವಾಗಿದೆ.

ಹಿಂದೆ ಈ ಸ್ಥಿತಿ ಇರಲಿಲ್ಲ. ಈಗಿನ ಯುವಕರೆಲ್ಲ ಸ್ವಾವಲಂಬಿ ಭಾರತದ ಕನಸನ್ನು ನನಸು ಮಾಡಬೇಕು ಎಂದು ಕರೆ ನೀಡಿದರು.

ಮೂಡುಬಿದಿರೆ ಶ್ರೀ ಕರಿಂಜೆ ಮಠದ ಶ್ರೀ ಮುಕ್ತಾನಂದ ಸ್ವಾಮೀಜಿ, ಪರ್ಯಾಯ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಹಿರಿಯ ನಟ ರಮೇಶ ಭಟ್‌, ಮೂಲ್ಕಿಯ ಕುಮಾರ ಪಂಬದ ಗೌರವ ಅತಿಥಿಗಳಾಗಿದ್ದರು.

ಸಮ್ಮಾನ:

ಉಡುಪಿಯ ರಿಕ್ಷಾ ಚಾಲಕ ವೆಂಕಟೇಶ ಪೈ, ನಗರಸಭೆ ಕಾರ್ಮಿಕ ರಾದ ದಂಡ್ಯಮ್ಮ, ವಿಜಯ ಅವರನ್ನು ಸಮ್ಮಾನಿಸಲಾಯಿತು.

ಮಠದ ವ್ಯವಸ್ಥಾಪಕ ಗೋವಿಂದ ರಾಜ್‌ ಸ್ವಾಗತಿಸಿದರು.

ಸರಕಾರಿ ನೌಕರಿಯಲ್ಲ, ಸೇವೆ :

ಕರಾವಳಿಯವರು ಪೊಲೀಸ್‌ ಇಲಾಖೆ, ನಾಗರಿಕ ಸೇವೆಗಳ ಇಲಾಖೆಗೆ ಸೇರುವುದು ಬಹಳ ಕಡಿಮೆ. ಹೆಚ್ಚು ಅಂಕ ಬಂದರೂ ಸರಕಾರದ ಆಡಳಿತ ಸೇವೆಗಳ ಪಟ್ಟಿಯಲ್ಲಿ ಕರಾವಳಿಯವರು ಇರುವುದಿಲ್ಲ. ಇದು ಸರಿಯಲ್ಲ. ನೀವೂ ಕೂಡ ಆಡಳಿತ ಸೇವೆಗಳ ಪರೀಕ್ಷೆಯಲ್ಲಿ ಬರೆದು ಉತ್ತೀರ್ಣರಾಗಿ ಸೇವೆ ಸಲ್ಲಿಸಬೇಕು. ಇದು ಸರಕಾರಿ ನೌಕರಿಯಲ್ಲ. ಪೊಲೀಸ್‌ ಸೇವೆ, ಆಡಳಿತ ಸೇವೆ. ಸೇವೆಯನ್ನು ಕ್ಲಪ್ತ ಸಮಯದಲ್ಲಿ ನೀಡಲು ವಾಹನ ಮೊದಲಾದ ಸೌಲಭ್ಯ ನೀಡುವುದು. ದೊಡ್ಡ ಮನೆ ಕೊಡುವುದು ಅಗತ್ಯವಿದ್ದವರನ್ನು ಇರಿಸಿಕೊಂಡು ಓದಲು. ಪೊಲೀಸ್‌ ಇಲಾಖೆಗೆ ದೊಡ್ಡ ಅಧಿಕಾರವಿದೆ. ಅಧಿಕಾರವನ್ನು ಯಾವುದಕ್ಕೆ ಉಪಯೋಗಿಸುತ್ತಿದ್ದೇವೆ ಎಂದು ಯೋಚಿಸಿ ಕಾರ್ಯೋನ್ಮುಖರಾಗಬೇಕು ಎಂದು ರವಿ ಚನ್ನಣ್ಣನವರ್‌ ತಿಳಿಸಿದರು.

ಪರಶುರಾಮನ ತಾಯಿಯ ಭಕ್ತ:

ನಾನು ಸೌಂದತ್ತಿ ಯಲ್ಲಮ್ಮನ ಭಕ್ತ. ನಾನು ಮತ್ತು ನನ್ನ ಹೆಂಡತಿ ಪ್ರತೀ ವರ್ಷ ಅಲ್ಲಿ ದೀಡ್‌ ನಮಸ್ಕಾರ (ಉರುಳು ಸೇವೆ ರೀತಿ) ಮಾಡುತ್ತೇವೆ. ಇದು ನನ್ನ ನಂಬಿಕೆ. ಇದು ಪರಶುರಾಮನ ನಾಡು. ಪರಶುರಾಮನ ತಂದೆ ಜಮದಗ್ನಿ, ಯಲ್ಲಮ್ಮ ತಾಯಿ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next