ಕ್ರೇಜಿಸ್ಟಾರ್ ರವಿಚಂದ್ರನ್ ಅಂದ್ರೆ ಸ್ಯಾಂಡಲ್‌ವುಡ್‌ನ “ಕನಸುಗಾರ’. ತನ್ನ ಕಲ್ಪನೆಗೆ “ದೃಶ್ಯ’ ರೂಪ ಕೊಟ್ಟು ಅದನ್ನು ತೆರೆಮೇಲೆ ಸಾಕಾರಗೊಳಿಸುವ ಸಿನಿಮಾಂತ್ರಿಕ. ಸಿನಿಮಾದ ಪ್ರತಿ ಫ್ರೇಮ್ ಅನ್ನು ಕೂಡ ಕಲರ್‌ಫುಲ್ ಆಗಿಸುವ “ಜಾಣ’. ಹೂವು, ಹಣ್ಣು, ಹೆಣ್ಣು, ಪ್ರಕೃತಿ ಎಲ್ಲದರ ಸೌಂದರ್ಯವನ್ನು ಬೆರಗು ಹುಟ್ಟಿಸುವಂತೆ ಚಿತ್ರಿಸುವ ಅಪರೂಪದ “ಕಲಾವಿದ’. ಆರಂಭದಿಂದಲೂ ರವಿಚಂದ್ರನ್ ತಮ್ಮ ಪ್ರತಿ ಸಿನಿಮಾದಲ್ಲೂ ಅದನ್ನು ನಿರೂಪಿಸಿದ್ದಾರೆ. ಕನ್ನಡ ಸಿನಿಪ್ರಿಯರು ಕೂಡ ಅದನ್ನು ನಿಸ್ಸಂಶಯವಾಗಿ ಒಪ್ಪಿಕೊಂಡಿದ್ದಾರೆ, ಅಪ್ಪಿಕೊಂಡಿದ್ದಾರೆ, ಕೊಂಡಾಡಿದ್ದಾರೆ. ಆದರೆ, ಇದೆಲ್ಲವನ್ನೂ ಮತ್ತೂಮ್ಮೆ ಪ್ರೇಕ್ಷಕರ ಮುಂದೆ ಸಾಬೀತು ಮಾಡುವಂತಿದೆ, ಈ ವಾರ ತೆರೆಗೆ ಬಂದಿರುವ “ರವಿ ಬೋಪಣ್ಣ’ ಸಿನಿಮಾ.
ಮಲಯಾಳಂನ ಸೂಪರ್ ಹಿಟ್ ಸಸ್ಪೆನ್ಸ್ , ಕ್ರೈಂ-ಥ್ರಿಲ್ಲರ್ “ಜೋಸೆಫ್’ ಸಿನಿಮಾದ ರೀಮೇಕ್ “ರವಿ ಬೋಪಣ್ಣ’. ಈ ಸಿನಿಮಾವನ್ನು ತಮ್ಮದೇ ಶೈಲಿಯಲ್ಲಿ ತೆರೆಮೇಲೆ ತಂದಿದ್ದಾರೆ ನಟ ಕಂ ನಿರ್ದೇಶಕ ವಿ. ರವಿಚಂದ್ರನ್. ಮೂಲಕಥೆಯ ಎಳೆ ಔಟ್ ಆ್ಯಂಡ್ ಔಟ್ ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಶೈಲಿಯಲ್ಲಿದ್ದರೂ, “ರವಿ ಬೋಪಣ್ಣ’ ಸಿನಿಮಾದಲ್ಲಿ ಅದ್ಯಾವು ದನ್ನೂ ನಿರೀಕ್ಷಿಸುವಂತಿಲ್ಲ. ಸಿನಿಮಾದ ಪ್ರತಿ ದೃಶ್ಯಗಳಲ್ಲೂ ರವಿಚಂದ್ರನ್ ಶೈಲಿಯೇ ಎದ್ದು ಕಾಣು ವುದರಿಂದ, ಇದು ಯಾವ ಶೈಲಿಗೂ ಸಿಲುಕದ- ನಿಲುಕದ ಕಾರಣ “ಟಿಪಿಕಲ್ ರವಿಚಂದ್ರನ್ ಸ್ಟೈಲ್’ ಸಿನಿಮಾ ಎಂದಷ್ಟೇ ಹೇಳಬಹುದು.
ಇನ್ನು ಮೊದಲಿನಿಂದಲೂ ಕನ್ನಡ ಚಿತ್ರರಂಗದಲ್ಲಿ ನಾಯಕಿರನ್ನು ಗ್ಲಾಮರಸ್ ಆಗಿ ತೆರೆಮೇಲೆ ತೋರಿಸುವ ವಿಚಾರದಲ್ಲಿ ರವಿಚಂದ್ರನ್ ಸಿದ್ಧಹಸ್ತರು. ಅದು “ರವಿ ಬೋಪಣ್ಣ’ನಲ್ಲೂ ಮುಂದುವರೆದಿದೆ. ನಾಯಕಿಯರನ್ನೂ ಗ್ಲಾಮರಸ್ ಆಗಿ ತೋರಿಸುವ ಭರ ದಲ್ಲಿ, ಸಿನಿಮಾದ ಚಿತ್ರಕಥೆಯೇ ಮಂಕಾಗಿರುವಂತೆ ತೋರುತ್ತದೆ. ಅದರಲ್ಲೂ ಸಿನಿಮಾದಲ್ಲಿ ಬರುವ “ಅತಿ’ಯಾದ ಹಾಡುಗಳು, ಕಥೆಯ ವೇಗಕ್ಕೆ ಅಲ್ಲಲ್ಲಿ ಬ್ರೇಕ್ ಹಾಕುವಂತಿದೆ. ರವಿಚಂದ್ರನ್ “ಕಂಫರ್ಟ್ ಜೋನ್’ನಿಂದ ಹೊರಗೆ ಬಂದು ಬರೆದಂತಿರುವ ಹಾಡುಗಳು, ನೋಡು ಗರಿಗೂ ಅಷ್ಟಾಗಿ “ಕಂಫರ್ಟ್’ ಅನಿಸಲಾರದು. ರವಿಚಂದ್ರನ್ ಅವರ ಹಿಂದಿನ ಯಶಸ್ವಿ ಸಿನಿಮಾಗಳ ಹತ್ತಾರು ಟ್ಯೂನ್ಸ್ “ರವಿ ಬೋಣ್ಣನ’ನ ಹಿನ್ನೆಲೆ ಸಂಗೀತದಲ್ಲೂ ಮರುಕಳಿಸುತ್ತವೆ.
ಹೂವು, ಹಣ್ಣು, ಹೆಣ್ಣು, ವೈನು, ಗ್ಲಾಸು, ಗಿಟಾರ್, ತೂಗುಯ್ನಾಲೆ, ಹೆಜ್ಜೆ-ಗೆಜ್ಜೆ ಹೀಗೆ ಅಪ್ಪಟ ರೊಮ್ಯಾಂಟಿಕ್ ಸಿನಿಮಾದ ಫ್ರೇಮ್ ಗಳು ಕಂಡರೂ, ಇದನ್ನು ಸಸ್ಪೆನ್ಸ್, ಕ್ರೈಂ-ಥ್ರಿಲ್ಲರ್ ಸಿನಿಮಾ ಎಂದು ಬಲವಂತವಾಗಿ ಅಂದುಕೊಳ್ಳಬೇಕು. ಹೀಗಾಗಿ ಇದೊಂದು ಹೊಸ ಥರದ ಪ್ರಯತ್ನ ಎಂದು ರವಿಚಂದ್ರನ್ ಹೇಳಿಕೊಂಡರೂ, ಅದನ್ನು ತಕ್ಷಣಕ್ಕೆ ಅರಗಿಸಿಕೊಳ್ಳುವುದು ಅವರ ಅಭಿಮಾನಿಗಳಿಗೆ ಕಷ್ಟ. ಸಿನಿಮಾದ ಗಂಭೀರ ದೃಶ್ಯಗಳ ಸಂದರ್ಭಗಳಲ್ಲೂ ರವಿಚಂದ್ರನ್ ತಮ್ಮ “ಬ್ರಾಂಡ್’ ಆದ ರೊಮ್ಯಾಂಟಿಕ್ ಸಾಂಗ್, ಕಲರ್‌ಫುಲ್ ಫ್ರೇಮ್‌ಗಳನ್ನು ಬಲವಂತವಾಗಿ ತುರುಕಿರುವುದರಿಂದ ಸಿನಿಮಾದ ಮೂಲ ಆಶಯ ಹಾಗೂ ಓಘ ಎರಡೂ ಕಾಣೆಯಾಗಿದೆ.
ಇದನ್ನೂ ಓದಿ:ಜಿಂಬಾಬ್ವೆ ಸರಣಿಯಿಂದ ಬ್ರೇಕ್ ತೆಗೆದುಕೊಂಡ ಕೋಚ್ ದ್ರಾವಿಡ್: ಲಕ್ಷ್ಮಣ್ ಗೆ ಜವಾಬ್ದಾರಿ
ಇನ್ನು “ರವಿ ಬೋಪಣ್ಣ’ ಸಿನಿಮಾದಲ್ಲಿ ರವಿಚಂದ್ರನ್ ತನಿಖಾಧಿಕಾರಿಯಾಗಿ, ಭಗ್ನ ಪ್ರೇಮಿಯಾಗಿ ಎರಡು ಶೇಡ್‌ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯರಾದ ರಾಧಿಕಾ ಕುಮಾರಸ್ವಾಮಿ ಮತ್ತು ಕಾವ್ಯಾ ಶೆಟ್ಟಿ ಇಬ್ಬರೂ ಪಾತ್ರಕ್ಕಾಗಿ ತಮ್ಮ ಅರ್ಪಿಸಿಕೊಂಡಿರುವುದು ತೆರೆಮೇಲೆ ಕಾಣುತ್ತದೆ. ಸುದೀಪ್ ಲಾಯರ್ ಆಗಿ ನಟಿಸಿದ್ದಾರೆ.
ಸಿನಿಮಾ ಬಿಡುಗಡೆಗೂ ಮೊದಲೇ ಸ್ವತಃ ರವಿಚಂದ್ರನ್ ಅವರೇ ಹೇಳಿರುವಂತೆ, ಈ ಸಿನಿಮಾ ಗ್ಲಾಮರಸ್ ಆಗಿರುವುದರಿಂದ, ಇದರಲ್ಲಿ ಗ್ರಾಮರ್ ಹುಡುಕುವಂತಿಲ್ಲ. ರವಿಚಂದ್ರನ್ ಪ್ರಕಾರ, ಸಿನಿಮಾ ಅನ್ನೋದೇ ಒಂದು ಮ್ಯಾಜಿಕ್ ಆಗಿರುವುದರಿಂದ, “ರವಿ ಬೋಪಣ್ಣ’ನಲ್ಲೂ ಲಾಜಿಕ್ ಹುಡುಕುವಂತಿಲ್ಲ! ರವಿಚಂದ್ರನ್ ಅವರ ಕಲರ್‌ಫುಲ್ ಫ್ರೇಮ್, ರೊಮ್ಯಾಂಟಿಕ್ ಸಾಂಗ್ ಗಳನ್ನು ನೋಡಲು ಬಯಸುವವರು “ರವಿ ಬೋಪಣ್ಣ’ದತ್ತ ಮುಖ ಮಾಡಬಹುದು.
ಜಿ.ಎಸ್.ಕಾರ್ತಿಕ ಸುಧನ್