Advertisement

ಕ್ರೀಡಾಳುಗಳ ಸ್ಪರ್ಧೆಗೆ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣ ಸಜ್ಜು

10:12 AM Oct 22, 2018 | Team Udayavani |

ಬೆಳ್ತಂಗಡಿ : ದ.ಕ. ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಬಾಲಕ – ಬಾಲಕಿಯರ ಆ್ಯತ್ಲೆಟಿಕ್ಸ್‌ ಕ್ರೀಡಾಕೂಟ 2018-19 ಅನ್ನು ನಿರ್ವಹಿಸುವ ಜವಾಬ್ದಾರಿ ಈ ಬಾರಿ ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಹೆಗಲೇರಿದ್ದು, ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ಅ. 22 ಮತ್ತು 23ರಂದು ಉಜಿರೆ ಡಿ. ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.

Advertisement

ಕ್ರೀಡಾಕೂಟವನ್ನು ಅ. 22ರಂದು ಬೆಳಗ್ಗೆ 10ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಉದ್ಘಾಟಿಸಲಿದ್ದು, ಶಾಸಕ ಹರೀಶ್‌ ಪೂಂಜ ಅಧ್ಯಕ್ಷತೆ ವಹಿಸಲಿದ್ದಾರೆ. ವಿ. ಪರಿಷತ್‌ ಸದಸ್ಯ ಕೆ. ಹರೀಶ್‌ ಕುಮಾರ್‌ ಕ್ರೀಡಾಳುಗಳ ವಂದನೆ ಸ್ವೀಕಾರ ಮಾಡಲಿದ್ದು, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ.ಯಶೋವರ್ಮ ಧ್ವಜಾರೋಹಣ ಮಾಡಲಿದ್ದಾರೆ.

ಅ. 23ರಂದು ಅಪರಾಹ್ನ 3ಕ್ಕೆ ನಡೆಯುವ ಸಮಾರೋಪದಲ್ಲಿ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ| ಎಸ್‌. ಪ್ರಭಾಕರ್‌ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಶಾಸಕ ವಸಂತ ಬಂಗೇರ, ಯು. ವಿಜಯರಾಘವ ಪಡ್ವೆಟ್ನಾಯ, ಪೀತಾಂಬರ ಹೇರಾಜೆ, ಡಾ| ಅರುಣ್‌ ಹೊಸಕೊಪ್ಪ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಸಹಕಾರದೊಂದಿಗೆ ಕ್ರೀಡಾಕೂಟ ಜರಗಲಿದ್ದು, ಕ್ಷೇತ್ರದ ವತಿಯಿಂದ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ.

1,500 ಕ್ರೀಡಾಳುಗಳು
ದ.ಕ. ಜಿಲ್ಲೆಯ 5 ತಾಲೂಕುಗಳ 7 ಶೈಕ್ಷಣಿಕ ಬ್ಲಾಕ್‌ಗಳಿಂದ 1,500ಕ್ಕೂ ಅಧಿಕ ಕ್ರೀಡಾಪಟುಗಳು ಇಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ಪ್ರಾಥಮಿಕ (6-7ನೇ ತರಗತಿ), 14ರ ವಯೋಮಾನ (8ನೇ ತರಗತಿ) ಹಾಗೂ 17ರ ವಯೋಮಾನ (9-10ನೇ ತರಗತಿ) ಹೀಗೆ ಮೂರು ವಿಧಗಳಲ್ಲಿ ಸ್ಪರ್ಧೆಗಳು ಆಯೋಜನೆಗೊಂಡಿವೆ. ಡಿ. ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದ 400 ಮೀ. ಉದ್ದದ ಸ್ಯಾಂಡರ್ಡ್‌ ಟ್ರ್ಯಾಕ್‌ನಲ್ಲಿ ಒಟ್ಟು 74 ಬಗೆಗಳ ಸ್ಪರ್ಧೆಗಳು ನಡೆಯಲಿದ್ದು, 150ರಿಂದ 200 ಮಂದಿ ತೀರ್ಪುಗಾರರು ಸ್ಪರ್ಧೆಗಳನ್ನು ನಿರ್ವಹಿಸಲಿದ್ದಾರೆ. 50 ಮಂದಿ ತಂಡ ವ್ಯವಸ್ಥಾಪಕರು, 50 ಮಂದಿ ಸ್ವಯಂಸೇವಕರು, 78 ಮಂದಿ ವಿವಿಧ ಸಮಿತಿಗಳ ಮುಖ್ಯಸ್ಥರು, ಸದಸ್ಯರು ಕ್ರೀಡಾಕೂಟದ ಯಶಸ್ಸಿಗೆ ಶ್ರಮಿಸಲಿದ್ದಾರೆ.

ಮಳೆ ಆತಂಕ
ಸುಮಾರು 1,500 ಕ್ರೀಡಾಪಟುಗಳು ಭಾಗವಹಿಸಲಿದ್ದು, ಇದರ ಯಶಸ್ಸಿಗೆ ಸರ್ವ ಸಿದ್ಧತೆ ಮಾಡಲಾಗಿದೆ. ಮಳೆಯ ಭಯವೂ ಕಾಡುತ್ತಿದ್ದು, ನಿಗದಿತ ವೇಳೆಯಲ್ಲೇ ಸ್ಪರ್ಧೆಗಳನ್ನು ಮುಗಿಸಬೇಕಾಗುತ್ತಿದೆ. ಈ ಹಿಂದೆಯೂ ಕ್ರೀಡಾಕೂಟ ಮಳೆಯ ಕಾರಣದಿಂದಲೇ ಮುಂದೂಡಲ್ಪಟ್ಟಿತ್ತು.
ಯಶೋಧರ ಸುವರ್ಣ
  ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ,ಬೆಳ್ತಂಗಡಿ

Advertisement
Advertisement

Udayavani is now on Telegram. Click here to join our channel and stay updated with the latest news.

Next