Advertisement

ಎಪಿಎಲ್‌ ಪಡಿತರ ಚೀಟಿ-50,000 ಅರ್ಜಿ ಸಲ್ಲಿಕೆ: ಖಾದರ್‌

03:45 AM Feb 03, 2017 | Team Udayavani |

ಮಂಗಳೂರು: ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ವ್ಯವಸ್ಥೆ ಜಾರಿಗೆ ಬಂದ ಬಳಿಕ ಕಳೆದ 2 ತಿಂಗಳಲ್ಲಿ ರಾಜ್ಯಾದ್ಯಂತ ಎಪಿಎಲ್‌ ಪಡಿತರ ಚೀಟಿಗೆ 50,000 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ಹೇಳಿದರು.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅರ್ಜಿ ಹಾಕಿದ 15 ದಿನಗಳಲ್ಲಿ ಪಡಿತರ ಚೀಟಿ ಅರ್ಜಿದಾರರ ಮನೆಬಾಗಿಲಿಗೆ ಬರುತ್ತದೆ. ಬಿಪಿಎಲ್‌ ಪಡಿತರ ಚೀಟಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು ಗ್ರಾ.ಪಂ.ಗಳು, ಫ್ರಾಂಚೈಸಿಗಳು, ನೆಮ್ಮದಿ ಕೇಂದ್ರ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. 

ಮೊದಲು ಅರ್ಜಿ ಹಾಕಿದವರು ಕೂಡ ಮತ್ತೆ ಅರ್ಜಿ ಸಲ್ಲಿಸಬೇಕು. ಈ ಹಿಂದಿನ ಅರ್ಜಿಯಲ್ಲಿ ಆಧಾರ್‌ ನಂಬರ್‌ ಕಡ್ಡಾಯವಿರಲಿಲ್ಲ. ಹೊಸ ಅರ್ಜಿ ವಿಧಾನದಲ್ಲಿ ಆಧಾರ್‌ ನಂಬರ್‌ ನಮೂದಿಸುವುದು ಕಡ್ಡಾಯವಾಗಿರುತ್ತದೆ. ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ 70 ರೂ. ಹಾಗೂ ಈ ಹಿಂದೆ ಅರ್ಜಿ ಸಲ್ಲಿಸಿದವರು ಹೊಸ ಅರ್ಜಿ ಸಂದರ್ಭ 20 ರೂ. ಶುಲ್ಕ ಪಾವತಿಸಿದರೆ ಸಾಕಾಗುತ್ತದೆ ಎಂದವರು ಹೇಳಿದರು.

ಉಪ್ಪು : ಗೊಂದಲ ಬೇಡ
ಕಬ್ಬಿಣದಂಶ ಕೊರತೆಗೆ ಪರಿಹಾರವಾಗಿ ರಾಜ್ಯ ಸರಕಾರ ಹೆಚ್ಚು ಆಯೋಡಿನ್‌ ಇರುವ ಉಪ್ಪನ್ನು ಪಡಿತರ ವ್ಯವಸ್ಥೆಯಲ್ಲಿ ನೀಡುತ್ತಿದೆ. ಇದು ನೀರಿನಲ್ಲಿ ಹಾಕಿದಾಗ ನೀರಿನ ಬಣ್ಣ ಬದಲಾಗುತ್ತದೆ ಎಂಬ ನಿಟ್ಟಿನಲ್ಲಿ ಉಪ್ಪಿನ ಬಗ್ಗೆ ಗೊಂದಲ ನಿರ್ಮಾಣವಾಗಿದೆ. ಇದನ್ನು ಆಹಾರ ಖಾದ್ಯಗಳಿಗೆ ಹಾಕಿದಾಗ ಬಣ್ಣ ಅಥವಾ ರುಚಿಯಲ್ಲಿ ವ್ಯತ್ಯಾಸವಾಗುವುದಿಲ್ಲ. ಉಪ್ಪಿನ ಬಣ್ಣ ಬಿಳಿಯಾಗಿಯೇ ಇರಬೇಕೆಂದೇನೂ ಇಲ್ಲ. ಉಪ್ಪಿನ ಬಗ್ಗೆ ಜನರು ಗೊಂದಲಕ್ಕೊಳಗಾಗಬಾರದು ಎಂದು ಸಚಿವ ಖಾದರ್‌ ತಿಳಿಸಿದರು.

ಕ್ಯಾಶ್‌ ಕೂಪನ್‌ ಪರಿಕಲ್ಪನೆಗೆ ಮುಖ್ಯಮಂತ್ರಿಯವರು ತಡೆಯೊಡ್ಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಪಡಿತರ ವಿತರಣೆ ವ್ಯವಸ್ಥೆಯಲ್ಲಿ ಆಧುನಿಕತೆ ಹಾಗೂ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ಆನ್‌ಲೈನ್‌ ಅರ್ಜಿ ಸೇರಿದಂತೆ ವಿವಿಧ ಕ್ರಮಗಳನ್ನು ನಾನು ಸಚಿವಧಿನಾಗಿ ಇಲಾಖೆಯ ಅಧಿಕಾರ ಸ್ವೀಕರಿಸಿದ ಬಳಿಕ ಅನುಷ್ಠಾನಗೊಳಿಸಿದ್ದೇನೆ. 

Advertisement

ಇದೇ ರೀತಿಯಲ್ಲಿ ಕ್ಯಾಶ್‌ಕೂಪನ್‌ ವ್ಯವಸ್ಥೆಯಲ್ಲಿ ಮೂರು ಕಡೆಗಳಲ್ಲಿ ಪೈಲಟ್‌ ಆಗಿ ಜಾರಿಗೊಳಿಸಲು ನಿರ್ಧರಿಸಿ ಇದಕ್ಕೆ ಸಾಫ್ಟ್‌ವೇರ್‌ ಸಿದ್ಧಪಡಿಸಲಾಗಿತ್ತು. ಆದರೆ ಇದರಿಂದ ಪಡಿತರ ಸಾಮಗ್ರಿಗಳು ಫಲಾನುಭವಿಗಳಿಗೆ ಪರಿಣಾಮಕಾರಿಯಾಗಿ ತಲುಪಲು ಸಮಸ್ಯೆಗಳು ಆಗಬಹುದು ಎಂಬ ನೆಲೆಯಲ್ಲಿ ಇದನ್ನು ಸ್ಥಗಿತಗೊಳಿಸಲಾಗಿದೆ ಎಂದರು.

ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಜನರು ಕೂಡಲೇ ಸ್ಪಂದಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಮಾನವೀಯತೆ ಮೆರೆದರೆ ಅವರ ಜೀವ ಉಳಿಯಲು ಸಾಧ್ಯವಾಗುತ್ತದೆ. ಹರೀಶ್‌ ಸಾಂತ್ವನ ಯೋಜನೆಯಡಿ ತುರ್ತು ಚಿಕಿತ್ಸೆ ಕೂಡ ಲಭಿಸುತ್ತದೆ. ಪೊಲೀಸರಿಂದ ಕಿರಿಕಿರಿಯಾಗದಂತೆ ನಿಯಮಾವಳಿಗಳಲ್ಲೂ  ಪರಿವರ್ತನೆ ಮಾಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next