Advertisement

ರಾಣೆಬೆನ್ನೂರು: ಈ ಬಾರಿಯೂ ನಗಲಿಲ್ಲ ಮನ್ಮಥ-ರತಿ ಜೋಡಿ

12:01 AM Mar 09, 2023 | Team Udayavani |

ರಾಣೆಬೆನ್ನೂರು: ಇಲ್ಲಿನ ದೊಡ್ಡಪೇಟೆಯ ರಾಮಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ದೇವಸ್ಥಾನ ಸಮಿತಿ, ಶ್ರೀ ಶಕ್ತಿ ಯುವಕ ಸಂಘ ಹಾಗೂ ಜೆಬಿಸಿಸಿ ಆಶ್ರಯದಲ್ಲಿ ಮಂಗಳವಾರ ರಾತ್ರಿ ಹೋಳಿ ಹುಣ್ಣಿಮೆ ಅಂಗವಾಗಿ 64ನೇ ವರ್ಷದ ಜೀವಂತ ಕಾಮ-ರತಿಯರನ್ನು ಕೂಡ್ರಿಸಲಾಗಿತ್ತು. ಕಾಮನ ವೇಷದಲ್ಲಿ ಗದಿಗೆಪ್ಪ ರೊಡ್ಡನವರ ಹಾಗೂ ರತಿ ವೇಷದಲ್ಲಿ ಕುಮಾರ ಹಡಪದ ಸಂಜೆ 7.30ರಿಂದ ರಾತ್ರಿ 1 ಗಂಟೆವರೆಗೆ ಕುಳಿತಿದ್ದರು.

Advertisement

ಈ ವರ್ಷ ರಾತ್ರಿ 12.30ರವರೆಗೂ ನಗಿಸಲು ಬಂದ ಪ್ರೇಕ್ಷಕರು ಏನ್‌ ಕಾಮಣ್ಣ ಸ್ವಲ್ಪ ನಗಪಾ, ಏ ಕಾಮಣ್ಣ ನಿನ್ನ ರತಿಗೆ ಪಪ್ಪಿ ಕೊಡಲಾ, ಇಂಥ ಗಂಟು ಮಾರಿ ಹೆಣ್ಣ ಕಟಗೊಂಡು ಹೆಂಗಾರ ಸಂಸಾರ ಮಾಡತೀಯಪಾ ಮುಂತಾದ ಅಂಗಚೇಷ್ಟೆಗಳು, ಪೋಲಿ ಮಾತುಗಳು, ಬೈಗುಳ ಹಾಗೂ ಹಾಸ್ಯ ಚಟಾಕಿಗಳ ಮೂಲಕ ನಗಿಸಲು ಪ್ರಯತ್ನಿಸಿದರೂ ತುಟಿ ಬಿಚ್ಚಲಿಲ್ಲ. ನಗಿಸಲು ಬಂದವರೇ ನಕ್ಕು ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್‌ ಆದರು.

ಪುರುಷರು, ಮಹಿಳೆಯರು, ಮಕ್ಕಳು, ವಯೋವೃದ್ಧರು ರತಿ-ಕಾಮಣ್ಣರನ್ನು ವೀಕ್ಷಿಸಿ, ಹೊಟ್ಟೆ ಹುಣ್ಣಾಗುವಂತೆ ನಕ್ಕು, ಜಿದ್ದು ಕಟ್ಟಿ ಸೋತು ನಗಿಸಲಾಗದೆ ಗೊಣಗುತ್ತ ವಾಪಸ್‌ ಹೋದರು. ಜಾತಿ ಬೇಧಭಾವ, ಹಿಂದೂ ಮುಸ್ಲಿಂ, ಕ್ರೆ„ಸ್ತ ಎನ್ನದೇ ಎಲ್ಲರೂ ನಗಿಸಲು ಪ್ರಯತ್ನಿಸಿದರು.

ಮತ್ತೆ ಅಚ್ಚರಿ:
ಕಳೆದ 24 ವರ್ಷಗಳಿಂದ ಕಾಮನ ವೇಷವನ್ನು 44ರ ಹರೆಯದ ಗದಿಗೆಪ್ಪ ರೊಡ್ಡನವರ ಹಾಗೂ ರತಿ ವೇಷದಲ್ಲಿ 34ರ ಹರೆಯದ ಕುಮಾರ ಹಡಪದ ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿದ್ದಾರೆ. ಉಳಿದ ದಿನಗಳಲ್ಲೂ ಸಹ ಸಾಕಷ್ಟು ಹಾಸ್ಯಪ್ರಜ್ಞೆ ಹೊಂದಿರುವ ಇವರಿಬ್ಬರೂ, ರತಿ-ಮನ್ಮಥರಾದಾಗ ಪರಕಾಯ ಪ್ರವೇಶ ಮಾಡಿದಂತೆ ಗಂಭೀರವದನರಾಗಿ ಕುಳಿತುಕೊಳ್ಳುವ ಪರಿ ಸಾರ್ವಜನಿಕರಿಗೆ ಕುತೂಹಲ ಹಾಗೂ ಅಚ್ಚರಿಯುಂಟು ಮಾಡುತ್ತದೆ.

ಇಲ್ಲಿಯವರೆಗೆ ಯಾರೂ ಕೂಡ ಇವರನ್ನು ನಗಿಸಿದ ಹಾಗೂ ಬಹುಮಾನ ಪಡೆದ ಉದಾಹರಣೆಗಳಿಲ್ಲ. ಇದರ ನಿಗೂಢತೆ 64 ವರ್ಷಗಳಿಂದ ರಹಸ್ಯವಾಗಿಯೇ ಉಳಿದಿದೆ. ಈ ವರ್ಷವೂ ಅದು ಮುಂದುವರಿದು ಬಹುಮಾನ ಘೋಷಿಸಿದವರ ಬಳಿ ಹಣ ಉಳಿಯುಂತಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next