Advertisement

ಇಲಿ ಉಪಟಳ: ರೈತರಲ್ಲಿ  ತಳಮಳ 

04:34 PM Jun 20, 2018 | Team Udayavani |

ಕುಂದಗೋಳ: ಪ್ರಸಕ್ತ ಸಾಲಿನ ಮುಂಗಾರು ಚುರುಕಾಗಿದ್ದು, ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರಿಂದ ರೈತರು ಸಂತಸಗೊಂಡಿದ್ದರು. ಭೂಮಿ ಒಡಲಿಗೆ ಬೀಜ ಭಿತ್ತಿ ಸಮೃದ್ಧ ಬೆಳೆ ಬರುವ ಕನಸಿನಲ್ಲಿದ್ದ ರೈತರಿಗೆ ಇಲಿ ಹಾಗೂ ಮಿಡಿತೆ ಕಾಟ ದೊಡ್ಡ ತಲೆ ನೋವಾಗಿದೆ.

Advertisement

ಕಳೆದ 4-5 ವರ್ಷಗಳ ಬರದಿಂದ ಸಮರ್ಪಕ ಬೆಳೆ ಕಾಣದ ರೈತರು ಈ ವರ್ಷವಾದರೂ ಉತ್ತಮ ಬೆಳೆ ಬರಬಹುದೆಂದು ಆಶಿಸಿದ್ದರು. ಆದರೆ ಇಲಿಗಳು ಹೊಲದಲ್ಲಿ ಹಾಕಿದ ಹತ್ತಿ ಬೀಜಗಳನ್ನು ಹಾಳು ಮಾಡುತ್ತಿವೆ. ಮೊಳಕೆ ಮುನ್ನವೇ ಬೀಜ ಇಲಿಗಳ ಪಾಲಾಗುತ್ತಿದೆ. ಇಲಿ ಹತೋಟಿಗಾಗಿ ರೈತರು ಹರಸಾಹಸ ಪಡುತ್ತಿದ್ದಾರೆ. ಹೊಲದಲ್ಲಿ ಹಾಕಿದ ಬೀಜವನ್ನು ಎರಡು ಬಾರಿ ಇಲಿಗಳು ತಿಂದಿದ್ದರಿಂದ ಸತತ 3ನೇ ಬಾರಿ ಹತ್ತಿ ಬೀಜ ಹಾಕಲು ಮುಂದಾಗಿದ್ದಾರೆ.

ಚುರುಮರಿ ಹಾಗೂ ಕುಸುಬೆ ಮುಂತಾದ ಇಲಿಗೆ ಪ್ರಿಯವಾದ ವಸ್ತುಗಳೊಂದಿಗೆ ಪಾಷಾಣವನ್ನು ಬೆರೆಸಿ ಹೊಲದಲ್ಲಿಟ್ಟು ಇಲಿಗಳನ್ನು ಹತೋಟಿ ಮಾಡುತ್ತಿದ್ದಾರೆ. ಈ ಕುರಿತಂತೆ ಕೃಷಿ ಇಲಾಖಾಧಿಕಾರಿ ಸಿ.ಜೆ. ಮೈತ್ರಿ ಅವರನ್ನು ಮಾತನಾಡಿಸಿದಾಗ, ನಮ್ಮ ಇಲಾಖೆಯಲ್ಲಿ ಈ ಮೊದಲು ಇಲಿ ಹತೋಟಿಗಾಗಿ ಝಿಂಕ್‌, ಪಾಸ್ಪೇಟ್‌ ಔಷ ಧಿ ಇತ್ತು. ಆದರೀಗ ಅದನ್ನು ತಡೆಯಲಾಗಿದ್ದು, ಇಲಿ ಪಾಷಾಣವನ್ನೇ ರೈತರು ಬಳಸಬೇಕು ಎಂದು ಸಲಹೆ ನೀಡಿದರು.

ಹರಸಾಹಸದ ಮಧ್ಯೆ ಇಲಿಗಳನ್ನು ಹತೋಟಿ ಮಾಡಿದಾಗಲೂ ಹತ್ತಿ ಬೀಜ ಮೊಳಕೆಯೊಡೆದಾಗ ಮಿಡತೆ ಅದನ್ನು ಕಚ್ಚುತ್ತಿರುವುದರಿಂದ ಹತ್ತಿ ಬೆಳೆ ನಾಶವಾಗುತ್ತಿದೆ. ಇಲಿ ಹಾಗೂ ಕೀಟ ಬಾಧೆಯಿಂದ ರೈತರು ತತ್ತರಿಸುತ್ತಿದ್ದಾರೆ. ಮಿಡತೆ ಹತೋಟಿಗೆ ಪ್ಯಾರೇಟ್‌ ಹಾಗೂ ಮಿಡತೆ ಪಾಷಾಣಗಳನ್ನು ಬಳಸುತ್ತಿದ್ದಾರೆ.ಕುಂದಗೋಳ: ಹೊಲದಲ್ಲಿ ಇಲಿ ತಿಂದಿರುವ ಹತ್ತಿ ಬೀಜ.

Advertisement

Udayavani is now on Telegram. Click here to join our channel and stay updated with the latest news.

Next