ರಶ್ಮಿಕಾ ಮಂದಣ್ಣ ಕನ್ನಡಕ್ಕಿಂತ ಹೆಚ್ಚಾಗಿ ತೆಲುಗು ಸಿನಿಮಾಗಳಲ್ಲೇ ಬಿಝಿಯಾಗುತ್ತಿದ್ದಾರೆಂಬ ಮಾತು ಕೇಳಿಬರುತ್ತಲೇ ಇತ್ತು. ಅದಕ್ಕೆ ಸರಿಯಾಗಿ “ಯಜಮಾನ’ ಬಿಟ್ಟರೆ ಬೇರೆ ಯಾವ ಸಿನಿಮಾವನ್ನು ರಶ್ಮಿಕಾ ಒಪ್ಪಿಕೊಂಡಿರಲಿಲ್ಲ. ಈಗ ರಶ್ಮಿಕಾ ಸದ್ದಿಲ್ಲದೇ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಅದು “ವೃತ್ರ’. ಗೌತಮ್ ಅಯ್ಯರ್ ಎನ್ನುವವರು ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.
ಗೌತಮ್ ಅವರಿಗೆ ಇದು ಚೊಚ್ಚಲ ಸಿನಿಮಾ. ಚೆನ್ನೈನಲ್ಲಿ ಕಾಲೇಜು ಮುಗಿಸಿಕೊಂಡು ನೇರವಾಗಿ ಪರಂವಾ ಸ್ಟುಡಿಯೋ ಸೇರಿದ ಗೌತಮ್, “777 ಚಾರ್ಲಿ’ ನಿರ್ದೇಶಕ ಕಿರಣ್ ರಾಜ್ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಈ ಸಂದರ್ಭದಲ್ಲೇ ಅವರೊಂದು ಕಥೆ ಕೂಡಾ ಮಾಡಿಟ್ಟುಕೊಂಡಿದ್ದರಂತೆ. ಆ ಕಥೆಯನ್ನು ರಶ್ಮಿಕಾ ಅವರಿಗೆ ಹೇಳಿದಾಗ ಅವರು ಕಥೆ ಇಷ್ಟಪಟ್ಟು ನಟಿಸಲು ಒಪ್ಪಿದರಂತೆ.
ಈ ಮೂಲಕ ಗೌತಮ್ ಕನಸು ಬೇಗನೇ ಈಡೇರಿದೆ. ವೃತ್ತ ಎಂಬ ಪದವನ್ನು ನೀವು ಕೇಳಿರುತ್ತೀರಿ. ಆದರೆ, “ವೃತ್ರ’ ಎಂದರೇನು ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಈ ಬಗ್ಗೆ ಮಾತನಾಡುವ ನಿರ್ದೇಶಕ ಗೌತಮ್, “ಇದು ನಾವೇ ಸಿನಿಮಾಗಾಗಿ ಹುಟ್ಟುಹಾಕಿರುವ ಪದ. ಎರಡು ಪದಗಳನ್ನು ಸೇರಿಸಿ ನಾವು “ವೃತ್ರ’ ಮಾಡಿದ್ದೇವೆ. ಅದು ಯಾಕಾಗಿ ಎಂಬ ಪ್ರಶ್ನೆಗೆ ಸಿನಿಮಾದಲ್ಲಿ ಉತ್ತರ ಸಿಗಲಿದೆ.
ಇದೊಂದು ಕ್ರೈಂ ಹಿನ್ನೆಲೆಯಲ್ಲಿ ಸಾಗುವ ಸಿನಿಮಾವಾಗಿದ್ದು, ರಶ್ಮಿಕಾ ಅವರ ಗೆಟಪ್ ಕೂಡಾ ಭಿನ್ನವಾಗಿರುತ್ತದೆ’ ಎಂದು ಸಿನಿಮಾ ಬಗ್ಗೆ ಹೇಳುತ್ತಾರೆ. ಚಿತ್ರದಲ್ಲಿ ರಶ್ಮಿಕಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ತನಗೆ ಸಿಗುವ ಮೊದಲ ಕೇಸಿನ ತನಿಖೆಯನ್ನು ಹೇಗೆ ನಡೆಸುತ್ತಾರೆ. ಆ ಸಂದರ್ಭದಲ್ಲಿ ಎದುರಾಗುವ ಟ್ವಿಸ್ಟ್‌ಗಳೊಂದಿಗೆ ಸಿನಿಮಾ ಸಾಗುತ್ತದೆಯಂತೆ.
ಆಗಸ್ಟ್‌ನಿಂದ ಚಿತ್ರೀಕರಣ ಆರಂಭವಾಗಲಿದ್ದು, ಬಹುತೇಕ ಸಿನಿಮಾ ರಶ್ಮಿಕಾ ಸುತ್ತವೇ ಸುತ್ತಲಿದೆಯಂತೆ. ಉಳಿದಂತೆ ಒಂದಷ್ಟು ಹೊಸ ಮುಖಗಳಿಗೆ ಇಲ್ಲಿ ಅವಕಾಶ ಸಿಗಲಿದೆ. ಆಯ್ಕೆ ಪ್ರಕ್ರಿಯೆ ಕೂಡಾ ನಡೆಯುತ್ತಿದೆ. ಚಿತ್ರಕ್ಕೆ ಸಂಗೀತ, ಛಾಯಾಗ್ರಹಣ ಸೇರಿದಂತೆ ಇತರ ಅಂಶಗಳು ಇನ್ನಷ್ಟೇ ಅಂತಿಮವಾಗಬೇಕಿದೆ. ಈ ಚಿತ್ರವನ್ನು ಶಂಭುಲಿಂಗಸ್ವಾಮಿ ಹಾಗೂ ರಮಣಿ ಅಯ್ಯರ್ ನಿರ್ಮಿಸುತ್ತಿದ್ದಾರೆ.