ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಟ್ರೋಲ್‌ಗೆ ಒಳಗಾಗುವ ನಟಿಯರ ಪೈಕಿ ರಶ್ಮಿಕಾ ಮಂದಣ್ಣ ಕೂಡ ಒಬ್ಬರು. ಬಹುಭಾಷಾ ನಟಿಯಾಗಿ ಕನ್ನಡದ ಜೊತೆ ಅಕ್ಕ ಪಕ್ಕದ ಭಾಷೆಗಳಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ, ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ನಟಿ. ಆದರೆ ಅದೇನೋ ಗೊತ್ತಿಲ್ಲ, ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯಾಗಳಲ್ಲಿ ಏನೇ ಪೋಸ್ಟ್ ಮಾಡಿದ್ರೂ, ಅದು ಸಿಕ್ಕಾಪಟ್ಟೆ ಟ್ರೋಲ್ ಆಗೋದು ಮಾತ್ರ ನಿಂತಿಲ್ಲ. ಈಗ ಇದೇ ವಿಷಯದ ಬಗ್ಗೆ ರಶ್ಮಿಕಾ ಮಾತಾಡಿದ್ದಾರೆ. ಏನೇ ಆದರೂ, ಎಷ್ಟೇ ಟ್ರೋಲ್ ಮಾಡಿದ್ರೂ ಪೋಸ್ಟ್ ಮಾಡುವುದನ್ನು ನಿಲ್ಲಿಸಲ್ಲ ಅಂಥ ರಶ್ಮಿಕಾ ಖಡಕ್ ಆಗಿ ಉತ್ತರಿಸಿದ್ದಾರೆ.
ತಮ್ಮ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ರಶ್ಮಿಕಾ ಮಂದಣ್ಣ, ಸೋಶಿಯಲ್ ಮೀಡಿಯಾದಲ್ಲಿ ನಾನು ತುಂಬಾ ಟ್ರೋಲ್ ಆಗಿದ್ದೀನಿ, ನನ್ನನ್ನು ಕೆಟ್ಟದಾಗಿ ಬಿಂಬಿಸಿದ್ದಾರೆ. ಹಾಗಂತ ನಾನು ಸೋಶಿಯಲ್ ಮೀಡಿಯಾದಿಂದ ದೂರ ಹೋಗೋದಿಲ್ಲ. ನನಗೆ ಯಾವ ವಿಚಾರ ಸಂತೋಷ ಕೊಡುತ್ತದೋ, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತೇನೆ. ಜನ ಎಷ್ಟೇ ಟ್ರೋಲ್ ಮಾಡಿದರೂ, ನನಗೆ ಅನಿಸಿದ್ದನ್ನು ನಾನು ಹಂಚಿಕೊಳ್ಳುತ್ತಲೇ ಇರುತ್ತೇನೆ’ ಎಂದು ಖಡಕ್ ಆಗಿ ಹೇಳಿದ್ದಾರೆ. ಇವರ ಈ ಮಾತಿಗೆ ಅನೇಕಕರು ಬೆಂಬಲ ಸೂಚಿಸಿದ್ದಾರೆ.
ಸದ್ಯ ರಶ್ಮಿಕಾ ಮಂದಣ್ಣ ಕನ್ನಡದಲ್ಲಿ ನಟಿಸಿರುವ “ಪೊಗರು’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಈ ಚಿತ್ರದಲ್ಲಿ ಇವರ ಪಾತ್ರ ವಿಭಿನ್ನವಾಗಿದೆಯಂತೆ.