ಸದ್ಯ ಕನ್ನಡಕ್ಕಿಂತ ತೆಲುಗಿನಲ್ಲೇ ಹೆಚ್ಚು ಬಿಝಿಯಾಗಿರುವ ನಟಿ ರಶ್ಮಿಕಾ ಮಂದಣ್ಣ, ಈ ವರ್ಷದ ಆರಂಭದಲ್ಲಿ “ಪೊಗರು’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದ್ದಾರೆ. ಕಳೆದ ಬಾರಿ “ಯಜಮಾನ’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದ ರಶ್ಮಿಕಾ ಮಂದಣ್ಣ ಈ ಬಾರಿ “ಪೊಗರು’ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಸದ್ಯ “ಪೊಗರು’ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ಮಾತಿಗೆ ಸಿಕ್ಕ ರಶ್ಮಿಕಾ ಮಂದಣ್ಣ, ಚಿತ್ರದ ಬಗ್ಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.
“ಪೊಗರು’ ಪಾತ್ರದ ಬಗ್ಗೆ ಏನಂತಾರೆ…
ಕನ್ನಡದಲ್ಲಿ ಇಲ್ಲಿಯವರೆ ನಾನು ಮಾಡಿದ ಪಾತ್ರಗಳಿಗಿಂತ ತುಂಬ ವಿಭಿನ್ನ ಪಾತ್ರ ಈ ಸಿನಿಮಾದಲ್ಲಿದೆ. ಈಗಾಗಲೇ ಹಾಡು, ಟೀಸರ್‌ನಲ್ಲಿ ನೋಡಿದವರಿಗೆ ನನ್ನ ಪಾತ್ರ ಏನಿರಬಹುದು ಅಂಥ ಸ್ವಲ್ಪ ಮಟ್ಟಿಗೆ ಗೊತ್ತಾಗಿರುತ್ತದೆ. ಬಹುತೇಕ ಅದೇ ಲುಕ್, ಗೆಟಪ್ ಸಿನಿಮಾದಲ್ಲೂ ಇರುತ್ತದೆ. ನನಗೆ ಈ ಪಾತ್ರ ತುಂಬ ಖುಷಿ ಕೊಟ್ಟಿದೆ. ಇದೊಂದು ಔಟ್ ಆ್ಯಂಡ್ ಔಟ್ ಕಮರ್ಶಿಯಲ್ ಎಂಟರ್‌ಟೈನ್ಮೆಂಟ್ ಸಿನಿಮಾ ಆಗಿದ್ದರಿಂದ, ಆಡಿಯನ್ಸ್‌ಗೆ ಕಂಪ್ಲೀಟ್ ಎಂಟರ್‌ಟೈನ್ಮೆಂಟ್ ಸಿಗೋದಂತೂ ಗ್ಯಾರಂಟಿ.
ಟಾಮ್ ಆ್ಯಂಡ್ ಜೆರ್ರಿ ಥರದ ಕ್ಯಾರೆಕ್ಟರ್!
“ಧ್ರುವ ಸರ್ಜಾ ಅವರನ್ನ ಈ ಥರದ ಲುಕ್‌ನಲ್ಲಿ ಮೊದಲು ಯಾವತ್ತೂ ನೋಡಿರಲಿಲ್ಲ. ಫಸ್ಟ್‌ಟೈಮ್ ಧ್ರುವ ಅವರನ್ನ ಈ ಥರ ರಗಡ್ ಲುಕ್‌ನಲ್ಲಿ ನೋಡಿ ನನಗೂ ಮೊದಲು ಆಶ್ವರ್ಯವಾಗಿತ್ತು. ಸಿನಿಮಾದಲ್ಲಿ ಧ್ರುವ ಅವರದ್ದು ಕಂಪ್ಲೀಟ್ ಮಾಸ್ ಲುಕ್ ಇರುವ ಕ್ಯಾರೆಕ್ಟರ್ ಆದ್ರೆ, ನನ್ನದು ಕಂಪ್ಲೀಟ್ ಅದಕ್ಕೆ ವಿರುದ್ಧ ವಾಗಿರುವಂಥ ಕ್ಯಾರೆಕ್ಟರ್. ನಮ್ಮಿಬ್ಬರದ್ದೂ ಒಂಥರಾ ಟಾಮ್ ಆ್ಯಂಡ್ ಜೆರ್ರಿ ಥರದ ಕ್ಯಾರೆಕ್ಟರ್. ಸ್ಕ್ರೀನ್ ಮೇಲೆ ಇಬ್ಬರ ಕೆಮಿಸ್ಟ್ರಿ ತುಂಬ ಚೆನ್ನಾಗಿ ಮ್ಯಾಚ್ ಆಗಿದೆ. ಆಡಿಯನ್ಸ್‌ಗೆ ಈ ಕೆಮಿಸ್ಟ್ರಿ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ.
ರಿಲೀಸ್‌ಗೂ ಮೊದಲೇ “ಪೊಗರು’ ನಿರೀಕ್ಷೆ ಹುಟ್ಟಿಸಿದೆ
ಈಗಾಗಲೇ “ಪೊಗರು’ ಸಿನಿಮಾದ ಟ್ರೇಲರ್, ಹಾಡುಗಳು ಕನ್ನಡ ಮತ್ತು ತೆಲುಗಿನಲ್ಲಿ ದೊಡ್ಡಮಟ್ಟದಲ್ಲಿ ಹಿಟ್ ಆಗಿದೆ. ಸದ್ಯಕ್ಕೆ ನಾನು ಎಲ್ಲೇ ಹೋದ್ರು ಜನ “ಪೊಗರು’ ಸಿನಿಮಾದ ಬಗ್ಗೆಯೇ ಹೆಚ್ಚಾಗಿ ಕೇಳುತ್ತಾರೆ. ಇದನ್ನೆಲ್ಲ ಕೇಳಿದಾಗ ನನಗೂ ಖುಷಿಯಾಗುತ್ತದೆ. ಕೋವಿಡ್ ಭಯದ ನಡುವೆಯೂ, ರಿಲೀಸ್‌ಗೂ ಮೊದಲೇ “ಪೊಗರು’ ಸಿನಿಮಾದ ಮೇಲೆ ಆಡಿಯನ್ಸ್‌ಗೆ ನಿರೀಕ್ಷೆ ಮೂಡಿದೆ. ಖಂಡಿತವಾಗಿಯೂ ರಿಲೀಸ್ ಆದಮೇಲೂ “ಪೊಗರು’ ಆಡಿಯನ್ಸ್‌ಗೆ ಇಷ್ಟವಾಗುತ್ತದೆ ಎಂಬ ಖಚಿತವಾದ ನಂಬಿಕೆ ಇದೆ.
ಕನ್ನಡ ಪ್ರೇಕ್ಷಕರ ಮುಂದೆ ಬರೋದಕ್ಕೆ ಖುಷಿ…
ಕಳೆದ ಒಂದು ವರ್ಷದಿಂದ ಎಲ್ಲರೂ ಕೋವಿಡ್ ಭಯದಿಂದಲೇ ಬದುಕುತ್ತಿದ್ದೇವೆ. ವ್ಯಾಕ್ಸಿನೇಶನ್ ಬಂದಿರುವುದರಿಂದ, ಈಗ ಸ್ವಲ್ಪ ಈ ಭಯ ಕಡಿಮೆಯಾಗುತ್ತಿದೆ. “ಯಜಮಾನ’ ಆದಮೇಲೆ ಸುಮಾರು ಎರಡು ವರ್ಷದ ನಂತರ ಮತ್ತೆ “ಪೊಗರು’ ಸಿನಿಮಾದ ಮೂಲಕ, ಕನ್ನಡ ಪ್ರೇಕ್ಷಕರ ಮುಂದೆ ಬರುತ್ತಿರುವುದಕ್ಕೆ ಖುಷಿಯಾಗುತ್ತಿದೆ. ನನಗೂ ಕನ್ನಡದಲ್ಲಿ ಸಿನಿಮಾಗಳನ್ನು ಮಾಡೋದಕ್ಕೆ ಇಷ್ಟ.
“ಪೊಗರು’ ಒಳ್ಳೆಯ ಅನುಭವ ಕೊಟ್ಟ ಸಿನಿಮಾ…
ಯಾವುದೇ ಸಿನಿಮಾವಾದ್ರೂ ಮೊದಲು ಅದರ ಟೀಮ್ ಚೆನ್ನಾಗಿರಬೇಕು. ಟೀಮ್ ಚೆನ್ನಾಗಿದ್ದರೆ ಸಿನಿಮಾ ಕೂಡ ಚೆನ್ನಾಗಿ ಬರುತ್ತದೆ. “ಪೊಗರು’ ಕೂಡ ಅಂಥದ್ದೇ ಒಳ್ಳೆಯ ಟೀಮ್ ವಕ್ ನಿಂದಾದ ಸಿನಿಮಾ. ಧ್ರುವ ಸರ್ಜಾ, ನಿರ್ದೇಶಕ ನಂದ ಕಿಶೋರ್, ಇತರ ಕಲಾವಿದರು, ತಂತ್ರಜ್ಞರು, ನಿರ್ಮಾಪಕರು ಎಲ್ಲರೂ ತುಂಬ ಶ್ರಮಪಟ್ಟು ಸಿನಿಮಾ ಮಾಡಿದ್ದಾರೆ. ಸಿನಿಮಾದ ಶೂಟಿಂಗ್, ನನ್ನ ಕ್ಯಾರೆಕ್ಟರ್ ಎಲ್ಲವೂ ನನಗೆ ಖುಷಿ ಕೊಟ್ಟಿದೆ. ಸಿನಿಮಾದಲ್ಲಿ ಎಲ್ಲರ ಎಫರ್ಟ್ ಎದ್ದು ಕಾಣುತ್ತದೆ. “ಪೊಗರು’ ನಿಜಕ್ಕೂ ನನಗೆ ಒಳ್ಳೆಯ ಅನುಭವ ಕೊಟ್ಟ ಸಿನಿಮಾ.
ಒಳ್ಳೆ ಸಬ್ಜೆಕ್ಟ್ ಸಿಕ್ಕರೆ ಕನ್ನಡದಲ್ಲೂ ಸಿನಿಮಾ ಮಾಡ್ತೀನಿ…
ಸದ್ಯಕ್ಕೆ ಕನ್ನಡಕ್ಕಿಂತ ತೆಲುಗಿನಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡುತ್ತಿರುವುದೇನೋ ನಿಜ. ಹಾಗಂತ ಕನ್ನಡದಲ್ಲಿ ಸಿನಿಮಾ ಮಾಡೋದೆ ಇಲ್ಲ ಅಂತೇನಿಲ್ಲ. ನನಗೆ ಇಷ್ಟವಾಗುವಂಥ ಒಳ್ಳೆಯ ಕಥೆ, ಸಬ್ಜೆಕ್ಟ್, ಟೀಮ್ ಸಿಕ್ಕರೆ ಕನ್ನಡದಲ್ಲೂ ಖಂಡಿತಾ ಸಿನಿಮಾಗಳನ್ನು ಮಾಡುತ್ತೇನೆ. ಸಿನಿಮಾಕ್ಕೆ ಯಾವುದೇ ಭಾಷೆಯ ಗಡಿ ಇರುವುದಿಲ್ಲ. ನಾನೊಬ್ಬಳು ನಟಿ ಅಷ್ಟೇ. ನನಗೆ ಯಾವುದೇ ಭಾಷೆಯ ಚೌಕಟ್ಟು ಇಲ್ಲ. ನಾನು ಯಾವುದೋ ಒಂದು ಭಾಷೆಗೆ ಸೀಮಿತವಾಗಿ ಗುರುತಿಸಿಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ. ಒಳ್ಳೆಯ ಸಬ್ಜೆಕ್ಟ್ ಸಿಕ್ಕರೆ ಇಂಗ್ಲಿಷ್, ಫ್ರೆಂಚ್, ಸ್ಪಾನಿಷ್ ಸಿನಿಮಾ ಬೇಕಾದ್ರೂ ಮಾಡ್ತೀನಿ.
ಅಷ್ಟೊಂದು ಸಂಭಾವನೆ ಸಿಕ್ಕರೆ ನಂಗೂ ಖುಷಿ. ಆದ್ರೆ…
ಯಾರೋ ನನ್ನ ಸಂಭಾವನೆ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಅಷ್ಟೇ. ನನ್ನ ಪ್ರಕಾರ ಅದೆಲ್ಲ ಸುಳ್ಳು. ವಾಸ್ತವದಲ್ಲಿ ಎರಡು ಕೋಟಿಯಷ್ಟು ಸಂಭಾವನೆ ಪಡೆಯುತ್ತಿರುವ ನಟಿ ನಾನಲ್ಲ. ಆದರೆ ಅಷ್ಟೊಂದು ದೊಡ್ಡ ಸಂಭಾವನೆ ಬೇಕೆಂದು ನಾವೇ ಡಿಮ್ಯಾಂಡ್ ಮಾಡಿದರೂ ಅಲ್ಲಿ ಕೊಡುವವರು ಯಾರೂ ಇಲ್ಲ. ಯಾರಿಗೆ ಎಷ್ಟು ಡಿಮ್ಯಾಂಡ್ ಇದೆ, ಎಷ್ಟು ಕೊಡಬೇಕು ಅಂತ ಎಲ್ಲರಿಗೂ ಗೊತ್ತಿರುತ್ತದೆ. ನಾವು ಹೆಚ್ಚು ಕೇಳಿದ್ರೆ, ಬೇರೆ ಹೀರೋಯಿನ್ಸ್‌ನ ತೋರಿಸಿ ಅವರೇ ಅಷ್ಟೊಂದು ಕಡಿಮೆ ಸಂಭಾವನೆ ಪಡೆಯುವಾಗ, ನೀವ್ಯಾಕೆ ಇಷ್ಟೊಂದು ಕೇಳ್ತೀರಾ ಅಂತಾರೆ. ಒಂದು ವೇಳೆ ಅಷ್ಟೊಂದು ಸಂಭಾವನೆ ಸಿಕ್ಕರೆ ನಂಗೂ ಖುಷಿ ಅಲ್ವೇ? ಆದ್ರೆ ಹಾಗೆ, ಹೇಳುತ್ತಿರುವವರು ಯಾರೋ ನಂಗೆ ಗೊತ್ತಿಲ್ಲ. ಇಂಥ ಅಪಪ್ರಚಾರದಿಂದಲೇ ಅಲ್ವೇ, ನಮ್ಮ ಮನೆ ಮೇಲೆ ಐಟಿ ದಾಳಿ ನಡೆದಿದ್ದು. ಇದೆಲ್ಲದ್ದಕ್ಕೂ ನಾನು ಹೇಗೆ ಪ್ರತಿಕ್ರಿಯಿಸಬೇಕೋ ಗೊತ್ತಿಲ್ಲ.
ಕಾಂಟ್ರವರ್ಸಿ ಇಲ್ಲ ಅಂದ್ರೆ ನನಗೆ ಬೇಸರವಾಗುತ್ತೆ…
“ಕಿರಿಕ್ ಪಾರ್ಟಿ’ ಸಿನಿಮಾದ ನಂತರ ನನ್ನ ಬಗ್ಗೆ ಕಾಂಟ್ರವರ್ಸಿಗಳು ಹೆಚ್ಚಾಯ್ತು. ಮೊದಲೆಲ್ಲ ಯಾವುದಾದರೂ ಕಾಂಟ್ರವರ್ಸಿ ವಿಷಯ ಕಿವಿ ಬಿದ್ದರೆ ತುಂಬ ಬೇಜಾರಾಗ್ತಿತ್ತು. ಜನ ಯಾಕೆ ಏನೇನು ಗಾಸಿಪ್ ಹಬ್ಬಿಸುತ್ತಿದ್ದಾರೆ, ಗಾಸಿಪ್ ಮಾಡೋರಿಗೆ ಬೇರೇನು ಕೆಲಸ ಇಲ್ಲವೇ ಅಂತೆಲ್ಲ ತಲೆಕೆಡಿಸಿಕೊಳ್ಳುತ್ತಿದ್ದೆ. ಎಷ್ಟೋ ಸಮಯ ಬೇರಸವಾಗಿ ಅತ್ತಿರುವುದೂ ಉಂಟು. ಆದ್ರೆ ಆಮೇಲೆ ಅದೆಲ್ಲವನ್ನು ಪಾಸಿಟಿವ್ ಆಗಿಯೇ ತೆಗೆದುಕೊಳ್ಳೋದಕ್ಕೆ ಶುರು ಮಾಡಿದ್ದೇನೆ. ಯಾವಾಗಲೂ ಸುದ್ದಿಯಲ್ಲಿರಬೇಕಾದ್ರೆ ಅಂತಹ ಕಾಂಟ್ರವರ್ಸಿ ಇರಬೇಕು ಅಂತ ಗೊತ್ತಾಯ್ತು. ಕಾಂಟ್ರವರ್ಸಿ ಇದ್ದಾಗಲೇ ನಾವು ಆ್ಯಕ್ಟೀವ್ ಆಗಿದ್ದೇವೆ ಅಂಥ ಅನಿಸುತ್ತದೆ. ಈಗಂತೂ ಕಾಂಟ್ರವರ್ಸಿ ಇಲ್ಲ ಅಂದ್ರೆ ನನಗೇ ಬೇಸರವಾಗುತ್ತದೆ…
ಜಿ. ಎಸ್. ಕಾರ್ತಿಕ ಸುಧನ್