ಕನ್ನಡ ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಯಾದ ನಟಿ ರಶ್ಮಿಕಾ ಮಂದಣ್ಣ ಈಗ ಕನ್ನಡಕ್ಕಿಂತ ಪರಭಾಷೆಯಲ್ಲೇ ಹೆಚ್ಚು ಬಿಝಿಯಾಗಿರುವ ನಟಿ. ಸದ್ಯ ತೆಲುಗಿನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿರುವ ರಶ್ಮಿಕಾ ಮಂದಣ್ಣ, ಇದರ ನಡುವೆಯೇ ಬಾಲಿವುಡ್‌ಗೂ ಅಡಿಯಿಟ್ಟಿದ್ದಾರೆ.
ಇನ್ನು ತೆಲುಗು, ತಮಿಳು, ಹಿಂದಿ ಹೀಗೆ ಬೇರೆ ಬೇರೆ ಭಾಷೆಗಳಲ್ಲಿ ರಶ್ಮಿಕಾ ಅಭಿನಯಿಸುತ್ತಿರುವ ಸಿನಿಮಾಗಳು ಒಂದರ ಹಿಂದೊಂದು ಅನೌನ್ಸ್ ಆಗುತ್ತಿದ್ದರೂ, ಕನ್ನಡದಲ್ಲಿ ಮಾತ್ರ ರಶ್ಮಿಕಾ ಅಭಿನಯಿಸಲಿರುವ ಸಿನಿಮಾಗಳ ಬಗ್ಗೆ ಯಾವುದೇ ಸುದ್ದಿ ಇಲ್ಲ. ಹಾಗಾದ್ರೆ ರಶ್ಮಿಕಾ ಮಂದಣ್ಣ ಕನ್ನಡದಲ್ಲಿ ಸಿನಿಮಾ ಮಾಡೋದಿಲ್ವ? ಎಂಬ ಅಭಿಮಾನಿಗಳ ಪ್ರಶ್ನೆಗಳಿಗೆ ಈಗ ಅವರೇ ಉತ್ತರಿಸಿದ್ದಾರೆ.
ಹೌದು, ಇತ್ತೀಚೆಗಷ್ಟೇ “ಮಿಷನ್ ಮಜು°’ ಹಿಂದಿ ಸಿನಿಮಾದ ಶೂಟಿಂಗ್ ಮುಗಿಸಿದ ಖುಷಿಯಲ್ಲಿದ್ದ ರಶ್ಮಿಕಾ ಮಂದಣ್ಣ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕನ್ನಡ ಚಿತ್ರರಂಗದಿಂದ ದೂರ ಸರಿದಿರುವ ಕಾರಣದ ಬಗ್ಗೆ ಮಾತನಾಡಿದ್ದಾರೆ. “ಈಗಾಗಲೇ ತೆಲುಗು ಮತ್ತು ಹಿಂದಿಯಲ್ಲಿ ಸಿನಿಮಾಗಳನ್ನು ಮಾಡುತ್ತಿರುವುದರಿಂದ, ಟ್ರಾವೆಲ್ ಮಾಡೋದಕ್ಕೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದೆ.
ತೆಲುಗು, ಹಿಂದಿ, ತಮಿಳು ಸಿನಿಮಾ ಮಾಡುತ್ತಿರುವುದರಿಂದ, ಎಲ್ಲದರ ನಡುವೆ ಹೊಂದಾಣಿಕೆ ಮಾಡಿಕೊಳ್ಳುವುದು ದೊಡ್ಡ ಸವಾಲು. ಇದೆಲ್ಲರ ಜೊತೆಗೆ ಕನ್ನಡ ಸಿನಿಮಾ ಮಾಡಬೇಕೆಂದ್ರೆ, ಇನ್ನಷ್ಟು ಎನರ್ಜಿ ಬೇಕಾಗುತ್ತದೆ. 365 ದಿನಗಳು ಕೂಡ ನನಗೆ ಸಾಕಾಗುವುದಿಲ್ಲ’ ಎಂದಿ¨ªಾರೆ. ಇನ್ನು ತಮ್ಮ ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆಯೂ ಮಾತನಾಡಿರುವ ರಶ್ಮಿಕಾ, “ಸದ್ಯಕ್ಕೆ ನಾನು ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದರಿಂದ, ಅದು ಎಲ್ಲಾ ಭಾಷೆಗಳಲ್ಲೂ ರಿಲೀಸ್ ಆಗುತ್ತಿದೆ. ಸೌಥ್ ಇಂಡಿಯಾದ ಎಲ್ಲ 5 ಭಾಷೆಗಳಲ್ಲಿ ಮತ್ತು ಬಾಲಿವುಡ್ ನಲ್ಲೂ ಕೆಲಸ ಮಾಡುವುದಾದ್ರೆ, ನನಗೆ 565 ದಿನಗಳು ಬೇಕಾಗುತ್ತದೆ’ ಎಂದಿದ್ದಾರೆ.
ಒಟ್ಟಾರೆ, ಧ್ರುವ ಸರ್ಜಾ ಅಭಿನಯದ “ಪೊಗರು’ ಸಿನಿಮಾದ ಬಳಿಕ ಕನ್ನಡದಲ್ಲಿ ರಶ್ಮಿಕಾ ಅಭಿನಯದ ಯಾವ ಸಿನಿಮಾಗಳೂ ಅನೌನ್ಸ್ ಆಗಿಲ್ಲ. ಒಂದೆರಡು ಬಿಗ್ ಸ್ಟಾರ್ ಸಿನಿಮಾಗಳಲ್ಲಿ ರಶ್ಮಿಕಾ ಹೆಸರು ಕೇಳಿಬಂದರೂ, ಅದ್ಯಾವುದು ಅಧಿಕೃತವಾಗಿರಲಿಲ್ಲ. ಇದೀಗ ರಶ್ಮಿಕಾ ಆಡಿರುವ ಮಾತುಗಳನ್ನು ಕೇಳಿದರೆ, ಇನ್ಮುಂದೆ ಕನ್ನಡ ಸಿನಿಮಾಗಳಲ್ಲಿ ರಶ್ಮಿಕಾ ಮುಖ ದರ್ಶನ ಬಹುತೇಕ ಡೌಟ್ ಎನ್ನುತ್ತಿದ್ದಾರೆ ಸ್ಯಾಂಡಲ್‌ವುಡ್ ಮಂದಿ.