ಬೆಂಗಳೂರು: ಭಾರತದ ವಿರುದ್ಧ ಐತಿಹಾಸಿಕ ಟೆಸ್ಟ್ ಆಡಲು ಬೆಂಗಳೂರಿಗೆ ಆಗಮಿಸಿರುವ ಅಫ್ಘಾನಿಸ್ಥಾನ ತಂಡಕ್ಕೆ ಮಂಗಳವಾರ ಅಂಗವಿಕಲ ಕ್ರಿಕೆಟ್ ಆಟಗಾರ ಶಂಕರ್ ಸಜ್ಜನ್ ನೆಟ್‌ನಲ್ಲಿ ಲೆಗ್ ಸ್ಪಿನ್ ಬೌಲಿಂಗ್ ನಡೆಸಿ ಸುದ್ದಿಯಾಗಿದ್ದಾರೆ. ಸಜ್ಜನ್ ಬೌಲಿಂಗ್ ಕಂಡು ಸ್ವತಃ ಅಫ್ಘಾನ್‌ನ ಖ್ಯಾತ ಬೌಲರ್ ರಶೀದ್ ಖಾನ್ ಬೆರಗಾಗಿದ್ದಾರೆ. ಶಂಕರ್ ಸಜ್ಜನ್ ತನಗೆ ಸ್ಫೂರ್ತಿ ಎಂದು ರಶೀದ್ ಖಾನ್ ತಿಳಿಸಿದ್ದಾರೆ.
ಯಾರಿವರು ಶಂಕರ್ ಸಜ್ಜನ್?: ಶಂಕರ್ ಸಜ್ಜನ್ ಬಿಜಾಪುರ ಮೂಲದವರು. ಅವರಿಗೆ 18 ವರ್ಷ. ಅಸಮರ್ಪಕ ಕ್ರೋಮೋಸೋಮ್‌ನಿಂದಾಗಿ ಶಂಕರ್ ಬಾಲ್ಯದಲ್ಲೇ ದೈಹಿಕ ಸಮಸ್ಯೆಗೆ ತುತ್ತಾದರು. ಹೀಗಿದ್ದರೂ ಶಂಕರ್ ಛಲ ಬಿಡದ ಮಲ್ಲ. ಬದುಕಿನಲ್ಲಿ ಏನಾದರು ಸಾಧಿಸಬೇಕು ಎನ್ನುವ ಹಠವಾದಿ. ಕೊನೆಗೂ ಕ್ರಿಕೆಟ್ ಅಭ್ಯಾಸ ನಡೆಸಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ಅವರು ಅನಿಲ್ ಕುಂಬ್ಳೆ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಕೆಎಸ್‌ಸಿಎ ಅಧಿಕಾರಿ ಸಂತೋಷ್ ಮೆನನ್ ನೆರವಿನಿಂದ ಶಂಕರ್ ಅಫ್ಘಾನಿಸ್ಥಾನ ತಂಡಕ್ಕೆ ಬೌಲಿಂಗ್ ನಡೆಸುವ ಅವಕಾಶ ಪಡೆದುಕೊಂಡಿದ್ದಾರೆ.
ಕುಂಬ್ಳೆ ಅಕಾಡೆಮಿಯಲ್ಲಿ ದೊರೆತ ಭಾಗ್ಯ: ಶಂಕರ್ ಸಜ್ಜನ್‌ಗೆ ಕನ್ನಡ ದಿನ ಪತ್ರಿಕೆಗಳನ್ನು ಓದುವ ಆಸಕ್ತಿ ಹೆಚ್ಚಂತೆ. ಒಂದು ದಿನ ಶಂಕರ್ ಪತ್ರಿಕೆ ಓದುತ್ತಿದ್ದಾಗ ಅನಿಲ್ ಕುಂಬ್ಳೆ ಅಕಾ ಡೆಮಿಯ ಜಾಹೀರಾತು ಪ್ರಕಟವಾಗಿತ್ತು. ಇದನ್ನು ನೋಡಿ ತನ್ನ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಇವರಿಗೆ ವಿಶೇಷ ಅವಕಾಶವನ್ನೂ ಕಲ್ಪಿಸಲಾಯಿತು.
ಕುಂಬ್ಳೆ, ರಶೀದ್ ಖಾನ್ ಸ್ಫೂರ್ತಿ: ಶಂಕರ್ ಸಜ್ಜನ್‌ಗೆ ಭಾರತದ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಹಾಗೂ ಅಫ್ಘಾನಿಸ್ಥಾನ ಕ್ರಿಕೆಟಿಗ ರಶೀದ್ ಖಾನ್ ಸ್ಫೂರ್ತಿಯಂತೆ. ಇದಕ್ಕೆ ಕಾರಣ ಇಬ್ಬರು ಕೂಡ ಲೆಗ್‌ಸ್ಪಿನ್ನರ್ ಆಗಿರುವುದು. ಸಂತೋಷ್ ಮೆನನ್ ಅಫ್ಘಾನ್ ಕ್ರಿಕೆಟಿಗರಿಗೆ ಬೌಲಿಂಗ್ ನಡೆ ಸಲು ನನಗೆ ಅವಕಾಶ ಕೊಡಿಸಿದ್ದಾರೆ. ನನ್ನ ಬೌಲಿಂಗ್ ನೋಡಿದ ಅಫ್ಘಾನ್ ಕ್ರಿಕೆಟಿಗರು ಕ್ರಿಕೆಟ್ ಅನ್ನು ಬಿಡಬೇಡ. ನಿನಗೆ ಒಳ್ಳೆಯ ಭವಿಷ್ಯವಿದೆ ಎಂದಿದ್ದಾರೆ.
ಶಂಕರ್ ಸಜ್ಜನ್, ಅಂಗವಿಕಲ ಲೆಗ್‌ಸ್ಪಿನ್ನರ್