ಮುಂಬೈ: ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ದ ಸತತ ಎರಡು ಟೆಸ್ಟ್ ಪಂದ್ಯಗಳಲ್ಲಿ ಸೋಲು ಕಂಡಿರುವ ಭಾರತ ತಂಡವು ಮೂರನೇ ಪಂದ್ಯಕ್ಕಾಗಿ ತಂಡದಲ್ಲಿ ಬದಲಾವಣೆ ಮಾಡಿಕೊಂಡಿದೆ. ವೈಟ್ ವಾಶ್ ತಪ್ಪಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿರುವ ರೋಹಿತ್ ಬಳಗವು ಮೂರನೇ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ (Wankhede Stadium, Mumbai) ನವೆಂಬರ್ 1ರಿಂದ ಮೂರನೇ ಮತ್ತು ಸರಣಿಯ ಅಂತಿಮ ಪಂದ್ಯ ನಡೆಯಲಿದೆ. ಹೀಗಾಗಿ ತನ್ನ ಬೌಲಿಂಗ್ ವಿಭಾಗದಲ್ಲಿ ಒಂದು ಬದಲಾವಣೆ ಮಾಡಿದೆ.
ಡೆಲ್ಲಿಯ ವೇಗಿ ಹರ್ಷಿತ್ ರಾಣಾ (Harshita Rana) ಅವರನ್ನು ಕಿವೀಸ್ ವಿರುದ್ದದ ಮೂರನೇ ಪಂದ್ಯಕ್ಕಾಗಿ ಸ್ಕ್ವಾಡ್ ಗೆ ಸೇರಿಸಲಾಗಿದೆ. ರಣಜಿ ಟ್ರೋಫಿ ಕೂಟದ ಅಸ್ಸಾಂ ವಿರುದ್ದದ ಪಂದ್ಯದಲ್ಲಿ ಹರ್ಷಿತ್ ರಾಣಾ ಅವರು ಆಲ್ ರೌಂಡ್ ಪ್ರದರ್ಶನ ನೀಡಿದ್ದಾರೆ. ಎಂಟನೇ ಕ್ರಮಾಂಕದಲ್ಲಿ ಆಡಿ ಅರ್ಧ ಶತಕ ಬಾರಿಸಿದ್ದ ರಾಣಾ ಬೌಲಿಂಗ್ ನಲ್ಲಿ ಐದು ವಿಕೆಟ್ ಪಡೆದಿದ್ದರು.
ಆರಂಭದಲ್ಲಿ ನ್ಯೂಜಿಲ್ಯಾಂಡ್ ಸರಣಿಗಾಗಿ ಭಾರತೀಯ ತಂಡದಲ್ಲಿ ರಾಣಾ ಮೀಸಲು ಆಟಗಾರನಾಗಿದ್ದರು. ಆದರೆ ಅಸ್ಸಾಂ ವಿರುದ್ಧ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ದೆಹಲಿಯ ಮೂರನೇ ಸುತ್ತಿನ ರಣಜಿ ಟ್ರೋಫಿ ಪಂದ್ಯಕ್ಕಾಗಿ ಅವರನ್ನು ತಂಡದಿಂದ ಬಿಡಲಾಗಿತ್ತು. ಇದೀಗ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇಂಡಿಯನ್ ಎಕ್ಸ್ಪ್ರೆಸ್ನ ವರದಿಯ ಪ್ರಕಾರ, ಹರ್ಷಿತ್ ರಾಣಾ ಶುಕ್ರವಾರ ವಾಂಖೆಡೆ ಕ್ರೀಡಾಂಗಣದಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ.
ಬಾರ್ಡರ್- ಗಾವಸ್ಕರ್ ಟ್ರೋಫಿಗಾಗಿ ಕೆಲ ದಿನಗಳ ಹಿಂದೆ ಘೋಷಣೆ ಮಾಡಿದ ತಂಡದಲ್ಲಿಯೂ ಹರ್ಷಿತ್ ರಾಣಾ ಸ್ಥಾನ ಪಡೆದಿದ್ದಾರೆ.