Advertisement

ಮೈಸೂರು: ರೈತ ದಸರೆಗೆ ಮೆರುಗು ನೀಡಿದ ಅಪರೂಪದ ರಾಸುಗಳು

02:56 PM Oct 01, 2022 | Team Udayavani |

ಮೈಸೂರು: ಐಶಾರಾಮಿ ಕಾರು, ಬೈಕುಗಳಷ್ಟೇ ಬೆಲೆ ಬಾಳುವ ಹೋರಿ, ಎತ್ತು ಮತ್ತು ಕುರಿಗಳು. ದೇಶದ ವಿವಿಧ ಭಾಗಗಳ ಅಪರೂಪದ ತಳಿಯ ಜಾನುವಾರುಗಳ ಜೊತೆಗೆ ಕೃಷಿ, ತೋಟಗಾರಿಕೆಗೆ ಪೂರಕವಾದ ಮಾಹಿತಿ ಒದಗಿಸುವ ಕೇಂದ್ರಗಳು.

Advertisement

ಒಟ್ಟಾರೆ ಕೃಷಿಗೆ ಸಂಬಂಧಿತ ಮಾಹಿತಿ ಕಣಜ ನಗರದ ಜೆ.ಕೆ. ಗ್ರೌಂಡ್‌ನ‌ಲ್ಲಿ ಅನಾವರಣಗೊಂಡಿತ್ತು. ರೈತ ದಸರಾ ಉಪ ಸಮಿತಿ ವತಿಯಿಂದ ಜೆ.ಕೆ. ಮೈದಾನದಲ್ಲಿ ಆಯೋಜಿಸಿರುವ ರೈತ ದಸರಾ ಹಾಗೂ ಕೃಷಿ ಅಪರೂಪದ ತಳಿಯ ರಾಸುಗಳು, ನಾವೀನ್ಯ ಯಂತ್ರೋಪಕರಣಗಳು, ಸುಧಾರಿತ ಕೃಷಿ, ತೋಟಗಾರಿಕ ಬೆಳೆಯ ತಳಿಗಳು, ಸರ್ಕಾರದ ನಾನಾ ಯೋಜನೆಗಳ ಪ್ರದರ್ಶನ ಎಲ್ಲರ ಗನ ಸೆಳೆದವು.

ದೇಶದ ಅಪರೂಪದ ತಳಿಗಳ ದರ್ಶನ: ರೈತ ದಸರಾದ ವಸ್ತುಪ್ರದರ್ಶನದಲ್ಲಿ ನೆರೆಯ ಪಾಕಿಸ್ತಾನದ ಮತ್ತು ಪಂಜಾಬ್‌ ಭಾಗದಲ್ಲಿ ಕಂಡುಬರುವ ಸಾಹಿವಾಲ್‌ ತಳಿಯ ಹಸು, ರಾಜಸ್ತಾನ ಥಾರ್‌ ಭಾಗದ ಥಾರ್‌ಪಾರ್ಕರ್‌, ತಮಿಳುನಾಡಿನ ಬರಗೂರು, ಆಂಧ್ರಪ್ರದೇಶದ ನೆಲ್ಲೂರು ಭಾಗದ ಪುಂಗನೂರು, ಮಲೆನಾಡಿನ ಗಿಡ್ಡ ತಳಿಯ ಹಸುಗಳು ನೋಡುಗರನ್ನು ಆಕರ್ಷಿಸಿದರೆ ಮುರ್ರಾ ತಳಿಯ ಎಮ್ಮೆ, ಬಂಡೂರು ಕುರಿ ಹಾಗೂ ರಾಣೆ ಬೆನ್ನೂರಿನ ಕುರಿಗಳು ವಿಶೇಷವಾಗಿದ್ದವು.

ರಾಣೆಬೆನ್ನೂರಿನ ಕುರಿ ಪ್ರಮುಖ ಆಕರ್ಷಣೆ: ರೈತ ದಸರಾದಲ್ಲಿ ಪಾಲ್ಗೊಂಡಿದ್ದ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಿಂದ 5 ಜೊತೆ ಕಟ್ಟುಮಸ್ತಾದ ಟಗರು ಭಾಗವಹಿಸಿ ಎಲ್ಲರನ್ನು ಆಕರ್ಷಿಸಿದವು. ಇದರಲ್ಲಿ ಒಂದು ಜೊತೆ ಟಗರು ಪುಟ್ಟದಾದ ಗಾಡಿಯನ್ನು ನಗರದ ಕೋಟೆ ಆಂಜನೇಯಸ್ವಾಮಿ ದೇಗುಲದಿಂದ ಜೆ.ಕೆ. ಮೈದಾನಕ್ಕೆ ಎಳೆತಂದಿದ್ದು ವಿಶೇಷವಾಗಿತ್ತು.

ಬೈಕಿನಷ್ಟೇ ಬೆಲೆ: ರಾಣೆಬೆನ್ನೂರಿನಿಂದ ಆಗಮಿಸಿದ್ದ ಟಗರುಗಳು ಬರೋಬ್ಬರಿ 60 ಸಾವಿರದಿಂದ 1 ಲಕ್ಷದ ವರೆಗೆ ಬೆಲೆ ಬಾಳುವು ದಷ್ಟೇ ಅಲ್ಲದೇ 45ರಿಂದ 60 ಕೆ.ಜಿ. ತೂಕ ತೂಗಿದವು. ಇವುಗಳ ಪೋಷಕರು ಪ್ರತಿನಿತ್ಯ 500 ರೂ.ನಷ್ಟು ಹಣ ವ್ಯಯಿಸಿ ಹಾಲು, ಮೊಟ್ಟೆ, ಹುರುಳಿ, ಗೋದಿ, ಜೋಳ ಸೇರಿದಂತೆ ವಿಶೇಷ ಆಹಾರ ನೀಡಿ ತಯಾರು ಮಾಡಿ, ಟಗರುಗಳನ್ನು ಕಟ್ಟು ಮಸ್ತಾಗಿ ಬೆಳೆಸಿದ್ದ ನೋಡಗರನ್ನು ಆಕರ್ಷಿಸಿತು.

Advertisement

ಕಾರಿನಷ್ಟೇ ಬೆಲೆ ಕೃಷ್ಣನಿಗೆ: ಮಳವಳ್ಳಿಯಿಂದ ರೈತ ಬೋರೇಗೌಡ ಅವರ ಜತೆಗೆ ಆಗಮಿಸಿದ್ದ ಕೃಷ್ಣ ಹೆಸರಿನ ಹೋರಿ ರೈತ ದಸರಾದ ಪ್ರಮುಖಆಕರ್ಷಣೆಯಾಗಿತ್ತು. ಬರೋಬ್ಬರಿ 15ರಿಂದ 20 ಲಕ್ಷ ರೂ. ಮಾರುಕಟ್ಟೆ ಮೌಲ್ಯವಿರುವ ಕೃಷ್ಣ, ಸಣ್ಣ ಕೊಂಬಿನ, ಬೃಹದಾಕಾರದ ಆತನ ದೇಹ ನೋಡುಗರನ್ನು ಒಮ್ಮೆ ಭಯ ಬೀಳಿಸಿದರೂ ಸೌಮ್ಯ ಸ್ವಭಾವದ ವರ್ತನೆ ಎಲ್ಲರ ಮನ ಗೆದ್ದಿತು. ಮೈದಾನಕ್ಕೆ ಆಗಮಸಿದ್ದ ರೈತರು ಕೃಷ್ಣನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಭ್ರಮಿಸಿದರು. ಇದರ ಜೊತೆಗೆ ವಿವಿಧ ಭಾಗದಿಂದ 10ಕ್ಕೂ ಹೆಚ್ಚು ಹಳ್ಳಿಕಾರ್‌ ರಾಸುಗಳು ರೈತ ದಸರಾದಲ್ಲಿ ಪಾಲ್ಗೊಂಡಿದ್ದವು.

ಕೃಷಿ ಯಂತ್ರೋಪಕರಣಗಳು ಇವೆ
ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ನಾವೀನ್ಯ ಯಂತ್ರೋಪಕರಣಗಳು ವಸ್ತುಪ್ರದರ್ಶನಲ್ಲಿ ಗಮನ ಸೆಳೆದವು. 06, 09 ಎಚ್‌ಪಿ ಪವರ್‌ ಟಿಲ್ಲರ್‌ಗಳು ಹಾಗೂ ಕೃಷಿ ಉಪಕರಣಗಳ ಮಾರಾಟ ರಿಯಾಯಿತಿ ದರದಲ್ಲಿತ್ತು. ಅಲ್ಲದೇ, ಸುಧಾರಿತ ತಳಿಗಳ ಪ್ರಾತ್ಯಕ್ಷಿಕೆ ಮತ್ತು ಮಾರಾಟ ಇತ್ತು. ಮಂಡ್ಯ ವಿ.ಸಿ.ಫಾರಂ ಕೃಷಿ ಸಂಶೋಧನಾಲಯ ಕೇಂದ್ರದ ವತಿಯಿಂದ ಕಬ್ಬು, ಭತ್ತ, ವಿವಿಧ ಧಾನ್ಯಗಳ ಬಗ್ಗೆ ಮಾಹಿತಿ ನೀಡಿದರು.

ಫ‌ರ್ಟಿಲೈಜರ್ ಕಂಪನಿಗಳು ಮಳಿಗೆಗಳು ರಾಸಾಯನಿಕ ಗೊಬ್ಬರದ ಬಗ್ಗೆ ಅರಿವು ನೀಡಿದವು. ಬೆಳೆಗೆ ಎಷ್ಟು ಪ್ರಮಾಣದಲ್ಲಿ ರಾಸಾಯನಿಕ ಸಿಂಪಡಿಸಬೇಕು. ರೋಗ ಬರದಂತೆ ನಿಯಂತ್ರಿಸುವುದು ಮಾದರಿಗಳು, ಮಣ್ಣಿನ ಫ‌ಲವತ್ತತೆ ಹೆಚ್ಚಿಸುವುದು ಸೇರಿ ಹಲವು ಮಾಹಿತಿ ಲಭ್ಯವಿತ್ತು. ಕೃಷಿ ಇಲಾಖೆ ವತಿಯಿಂದ ರೈತರಿಗೆ ದೊರೆಯುವ ಸೌಲಭ್ಯಗಳು, ಯೋಜನೆಗಳ ಪ್ರದರ್ಶನ ವಿತ್ತು. ಅನೇಕ ರೈತರು ಮಳಿಗೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಸಕಾಲದಲ್ಲಿ ಸೌಲಭ್ಯ ಪಡೆಯುವ ಬಗ್ಗೆ ವಿವರ ಪಡೆದರು. ಒಟ್ಟಾರೆ ನಗರದ ಜೆ.ಕೆ. ಗ್ರೌಂಡ್‌ನ‌ಲ್ಲಿ ಆಯೋಜಿಸಿರುವ 3 ದಿನಗಳ ರೈತ ದಸರಾದಲ್ಲಿ ಕೃಷಿ ಸಂಬಂಧಿತ ಮಾಹಿತಿ ಕಣಜವೇ ಅನಾವರಣಗೊಂಡಿತ್ತು.
●ಸತೀಶ್‌ ದೇಪುರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next