Advertisement

ರ್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆ ಆರಂಭ : ಕ್ಷಿಪ್ರ ವರದಿ, ಪ್ರಕರಣ ಅಧಿಕ ಸಾಧ್ಯತೆ

03:45 AM Jul 13, 2020 | Hari Prasad |

ಬೆಂಗಳೂರು: ಕೋವಿಡ್ 19 ಸೋಂಕುಪೀಡಿತರ ಶೀಘ್ರ ಪತ್ತೆಗಾಗಿ ಸೋಮವಾರದಿಂದ ರ್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆ ಅಧಿಕೃತವಾಗಿ ಆರಂಭವಾಗಲಿದೆ.

Advertisement

ಒಂದು ವಾರದಲ್ಲಿ ರಾಜ್ಯಾದ್ಯಂತ ಹೆಚ್ಚುವರಿಯಾಗಿ ಒಂದು ಲಕ್ಷ ಮಾದರಿಗಳನ್ನು ಪರೀಕ್ಷೆಗೊಳಪಡಿಸುವ ಗುರಿಯನ್ನು ಸರಕಾರ ಹೊಂದಿದೆ.

ಈಗಾಗಲೇ ಒಂದು ಲಕ್ಷ ರ್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷಾ ಕಿಟ್‌ಗಳನ್ನು ಖರೀದಿಸಲಾಗಿದ್ದು, ಬೆಂಗಳೂರಿನಲ್ಲಿ 50 ಸಾವಿರ, ಇತರ ಜಿಲ್ಲೆಗಳಲ್ಲಿ 50 ಸಾವಿರ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಸೋಮವಾರದಿಂದ ರಾಜ್ಯದ ಎಲ್ಲೆಡೆ ಪರೀಕ್ಷೆ ಆರಂಭಗೊಳ್ಳಲಿದೆ. ರ್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆ ತ್ವರಿತವಾಗಿದ್ದು, 15ರಿಂದ 20 ನಿಮಿಷಗಳಲ್ಲಿ ವರದಿ ಲಭ್ಯವಾಗಲಿದೆ.

ನಿತ್ಯ 20 ಸಾವಿರ ಸಾಮಾನ್ಯ ಪರೀಕ್ಷೆಗಳ ಜತೆಗೆ ಈ ರ್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆಗಳು ನಡೆಯಲಿದ್ದು, ಸೋಂಕುಪೀಡಿತರ ಸಂಖ್ಯೆ ಹೆಚ್ಚಬಹುದು.

ಆತಂಕ ಬೇಡ: ಡಾ| ಸಿ.ಎನ್‌. ಮಂಜುನಾಥ್‌
ಪರೀಕ್ಷೆ ಹೆಚ್ಚಿದರೆ ಸೋಂಕುಪೀಡಿತರ ಸಂಖ್ಯೆಯೂ ಹೆಚ್ಚುತ್ತದೆ. ಆದರೆ ಆತಂಕ ಬೇಡ. ವೈರಸ್‌ ದೇಹ ಸೇರಿದ 8-10 ದಿನಗಳಲ್ಲಿ ಸಾಯುತ್ತದೆ. ಸೋಂಕು ದೃಢಪಟ್ಟವರ ಪೈಕಿ ಶೇ.90 ಮಂದಿಗೆ ಯಾವುದೇ ಚಿಕಿತ್ಸೆ ಬೇಕಿಲ್ಲ. ಪೌಷ್ಟಿಕ ಆಹಾರ, ವಿಶ್ರಾಂತಿಯಂತಹ ಆರೈಕೆ ಸಾಕು. ಶೇ.8ರಷ್ಟು ಮಂದಿಗೆ ಆಕ್ಸಿಜನ್‌, ಶೇ. 2ರಷ್ಟು ಮಂದಿಗೆ ಮಾತ್ರ ವೆಂಟಿಲೇಟರ್‌ ಅಗತ್ಯವಿರುತ್ತದೆ. ಲಕ್ಷಣ ಇಲ್ಲದವರು ಮನೆಯಲ್ಲಿಯೇ ಆರೈಕೆಯಲ್ಲಿರಬಹುದು. ಅಗತ್ಯ ವ್ಯವಸ್ಥೆ ಇಲ್ಲದವರನ್ನು ಕೋವಿಡ್ 19 ಕೇರ್‌ ಸೆಂಟರ್‌ನಲ್ಲಿಟ್ಟು ಆರೈಕೆ ಮಾಡಬಹುದು ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನ ಸಂಸ್ಥೆ ನಿರ್ದೇಶಕ ಡಾ| ಸಿ.ಎನ್‌. ಮಂಜುನಾಥ್‌ ತಿಳಿಸಿದ್ದಾರೆ.

Advertisement

22 ಸಾವಿರಕ್ಕೂ ಹೆಚ್ಚು ದೈನಿಕ ಸೋಂಕು
ಹೊಸದಿಲ್ಲಿ: ದೇಶಾದ್ಯಂತ ಕೋವಿಡ್ 19 ತೀವ್ರಗೊಂಡಿದ್ದು, ಕಳೆದ 9 ದಿನಗಳಲ್ಲಿ ಪ್ರತಿದಿನವೂ 22 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.  ಶನಿವಾರದಿಂದ ರವಿವಾರ ಬೆಳಗ್ಗಿನ ತನಕದ 24 ತಾಸುಗಳ ಅವಧಿಯಲ್ಲಿ ದೇಶಾದ್ಯಂತ 28,637 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದು ಇದುವರೆಗಿನ ದೈನಿಕ ಗರಿಷ್ಠ. ದಿನವೊಂದಕ್ಕೆ 26 ಸಾವಿರಕ್ಕಿಂತ ಹೆಚ್ಚು ಮಂದಿಯಲ್ಲಿ ಸೋಂಕು ಪತ್ತೆಯಾಗುತ್ತಿರುವುದು ಇದು ಸತತ 3ನೇ ದಿನ. ಶನಿವಾರ 27,114, ಶುಕ್ರವಾರ 26,506 ಪ್ರಕರಣ ಪತ್ತೆಯಾಗಿದ್ದವು.  ಗುಣಮುಖ ಪ್ರಮಾಣವೂ ಸುಧಾರಣೆಯಾಗುತ್ತಿದ್ದು, ಸದ್ಯ ಶೇ. 62.93ರಷ್ಟಿರುವುದು ಸಮಾಧಾನದ ಸಂಗತಿ.

Advertisement

Udayavani is now on Telegram. Click here to join our channel and stay updated with the latest news.

Next