ಮಂಗಳೂರು: ತನ್ನ ಪತ್ನಿಯ ಮೊದಲನೇ ಪತಿಯ ಅಪ್ರಾಪ್ತ ವಯಸ್ಕ ಮಗಳ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶ್ವತ್ಥ್ ಎಂಬಾತನ ಮೇಲಿನ ಆರೋಪ ಸಾಬೀತಾಗಿದ್ದು, ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮತ್ತು 2ನೇ ತ್ವರಿತಗತಿ ವಿಶೇಷ ನ್ಯಾಯಾಲಯ (ಪೋಕ್ಸೋ) 20 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪ್ರಕರಣದ ವಿವರ
ತನ್ನ ಪತ್ನಿ ಹೆರಿಗೆಗೆ ಹೋಗಿರುವ ಸಂದರ್ಭ 2022ರ ಜುಲೈ 26ರಂದು ಮುಂಜಾನೆ 3.30ರ ವೇಳೆಗೆ ಅಶ್ವತ್ಥ್ ಮನೆಯಲ್ಲಿದ್ದ ಪತ್ನಿಯ ಮೊದಲನೇ ಪತಿಯ ಅಪ್ರಾಪ್ತ ವಯಸ್ಕ ಮಗಳ ಮೇಲೆ ಅತ್ಯಾಚಾರ ನಡೆಸಿದ್ದ. ಬಳಿಕ ಈ ಬಗ್ಗೆ ಯಾರಿಗಾದರೂ ಹೇಳಿದ್ದಲ್ಲಿ ಕೊಲ್ಲುವುದಾಗಿ ಬೆದರಿಸಿದ್ದ. ಬಾಲಕಿ ತಾಯಿಗೆ ವಿಚಾರ ತಿಳಿಸಿದ್ದಳು. ಬಾಲಕಿಯ ದೊಡ್ಡಮ್ಮ ಅದೇ ದಿನ ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಕಲಂ 376, 323, 506 ಐಪಿಸಿ ಮತ್ತು ಕಲಂ 6 ಪೋಕ್ಸೋ ಕಾಯ್ದೆ 2012ರಂತೆ ಪ್ರಕರಣ ದಾಖಲಿಸಿದ್ದರು.
ಪ್ರಕರಣದ ತನಿಖೆ ನಡೆಸಿದ ಮಹಿಳಾ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಲೋಕೇಶ್‌ಎ.ಸಿ. ಅವರು ಸಾಕ್ಷಿದಾರರನ್ನು ವಿಚಾರಿಸಿ ಬಾಲಕಿಯ ಮೆಡಿಕಲ್ ವರದಿ ಹಾಗೂ ಆರೋಪಿತನ ಮೆಡಿಕಲ್ ವರದಿ, ಎಫ್.ಎಸ್.ಎಲ್. ವರದಿ ಪಡೆದು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮತ್ತು 2ನೇ ತ್ವರಿತ ಗತಿ ವಿಶೇಷ ನ್ಯಾಯಾಲಯ (ಪೋಕ್ಸೋ)ದ ನ್ಯಾಯಾಧೀಶರು ಸಾಕ್ಷಾಧಾರ ಮತ್ತು ಸಾಕ್ಷಿದಾರರ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ಆರೋಪಿತನಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಬುಧವಾರ ತೀರ್ಪು ನೀಡಿದ್ದಾರೆ. ಪ್ರಕರಣದಲ್ಲಿ ಸರಕಾರದ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸಿ. ವೆಂಕಟರಮಣ ಸ್ವಾಮಿ ವಾದಿಸಿದ್ದರು.