Advertisement

Ranji:ಕರ್ನಾಟಕ ತಂಡದೆದುರು ಉತ್ತಮ ಸ್ಥಿತಿಯಲ್ಲಿ ವಿದರ್ಭ

11:34 PM Feb 23, 2024 | Team Udayavani |

ನಾಗ್ಪುರ: ಆರಂಭಿಕ ಆಟಗಾರ ಅಥರ್ವ ಟೈಡ್‌ ಅವರ ಅಮೋಘ ಶತಕ ದಿಂದಾಗಿ ವಿದರ್ಭ ತಂಡವು ಕರ್ನಾಟಕ ತಂಡದೆದುರಿನ ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಉತ್ತಮ ಮೊತ್ತ ಪೇರಿಸು ವತ್ತ ಹೊರಟಿದೆ. ಅಥರ್ವ ಅವರ ಶತಕ ಮತ್ತು ಯಶ್‌ ರಾಥೋಡ್‌ ಅವರ 93 ರನ್‌ ನೆರವಿನಿಂದಾಗಿ ವಿದರ್ಭ ತಂಡವು ಮೊದಲ ದಿನದಾಟದ ಅಂತ್ಯಕ್ಕೆ ಮೂರು ವಿಕೆಟಿಗೆ 261 ರನ್‌ ಪೇರಿಸಿದೆ.

Advertisement

ಲೀಗ್‌ ಹಂತದಲ್ಲಿ ಬೌಲಿಂಗ್‌ನಲ್ಲಿ ಉತ್ತಮ ನಿರ್ವಹಣೆ ನೀಡಿದ್ದ ಕರ್ನಾಟಕ ತಂಡವು ಈ ಪಂದ್ಯದಲ್ಲಿ ಪರಿಣಾಮಕಾರಿಯಾಗಿ ದಾಳಿ ಸಂಘಟಿಸಲು ವಿಫ‌ಲವಾಗಿದೆ. ಅದರ ಪೂರ್ಣ ಲಾಭ ಪಡೆದ ವಿದರ್ಭ ತಂಡವು ದೊಡ್ಡ ಮೊತ್ತ ಪೇರಿಸುವ ಸೂಚನೆ ನೀಡಿದೆ. ಇದರಿಂದಾಗಿ ಕರ್ನಾಟಕ ತಂಡ ಬಹಳ ಎಚ್ಚರಿಕೆಯಿಂದ ಆಡಬೇಕಾದ ಅಗತ್ಯವಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಲು ಕರ್ನಾಟಕ ಪ್ರಯತ್ನ ಪಡಬೇಕಾಗಿದೆ.

ವಿದರ್ಭ ಮೊದಲ ವಿಕೆಟನ್ನು ಬೇಗನೇ ಕಳೆದುಕೊಂಡರೂ ಅಥರ್ವ ಮತ್ತು ಯಶ್‌ ರಾಥೋಡ್‌ ದ್ವಿತೀಯ ವಿಕೆಟಿಗೆ 184 ರನ್ನುಗಳ ಜತೆಯಾಟ ನಡೆಸಿ ತಂಡವನ್ನು ಉತ್ತಮ ಸ್ಥಿತಿಗೆ ತಲುಪಿಸುವಲ್ಲಿ ಯಶಸ್ವಿಯಾದರು. ಈ ಹಂತದಲ್ಲಿ ಶತಕದತ್ತ ದಾಪುಗಾಲು ಹಾಕುತ್ತಿದ್ದ ರಾಥೋಡ್‌ ಅವರನ್ನು ಕಾವೇರಪ್ಪ ಔಟ್‌ ಮಾಡಿಸಿದರು. 157 ಎಸೆತ ಎದುರಿಸಿದ ಅವರು 12 ಬೌಂಡರಿ ನೆರವಿನಿಂದ 93 ರನ್‌ ಗಳಿಸಿದ್ದರು. ಇದೇ ವೇಳೆ ಅಥರ್ವ ಟೈಡ್‌ 109 ರನ್‌ ಗಳಿಸಿ ಔಟಾದರು. 244 ಎಸೆತ ಎದುರಿಸಿದ ಅವರು 16 ಬೌಂಡರಿ ಮತ್ತು 1 ಸಿಕ್ಸರ್‌ ಬಾರಿಸಿದ್ದರು. ಈ ಹಿಂದೆ ಕರ್ನಾಟಕ ಪರ ಆಡಿದ್ದ ಕರುಣ್‌ ನಾಯರ್‌ 30 ರನ್‌ ಗಳಿಸಿ ಔಟಾಗದೆ ಉಳಿದಿದ್ದಾರೆ.

ಸಂಕ್ಷಿಪ್ತ ಸ್ಕೋರು: ವಿದರ್ಭ ಮೊದಲ ಇನ್ನಿಂಗ್ಸ್‌: ಮೂರು ವಿಕೆಟಿಗೆ 261 (ಅಥರ್ವ ಟೈಡ್‌ 109, ಯಶ್‌ ರಾಥೋಡ್‌ 93, ಕರುಣ್‌ ನಾಯರ್‌ 30 ಬ್ಯಾಟಿಂಗ್‌).

ಕುಸಿದ ಸೌರಾಷ್ಟ್ರ
ಕೊಯಮತ್ತೂರಿನಲ್ಲಿ ಸಾಗುತ್ತಿರುವ ಇನ್ನೊಂದು ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ತಮಿಳುನಾಡಿನ ಸಾಯಿ ಕಿಶೋರ್‌ ಅವರ ದಾಳಿಗೆ ತತ್ತರಿಸಿದ ಹಾಲಿ ಚಾಂಪಿಯನ್‌ ಸೌರಾಷ್ಟ್ರ ತಂಡವು ಕೇವಲ 183 ರನ್ನಿಗೆ ಆಲೌಟಾಗಿದೆ. 27ರ ಹರೆಯದ ಸಾಯಿ ಕಿಶೋರ್‌ 66 ರನ್ನಿಗೆ 5 ವಿಕೆಟ್‌ ಉರುಳಿಸಿದ್ದಾರೆ. ಅವರು ಈ ಕೂಟದಲ್ಲಿ ಗರಿಷ್ಠ 43 ವಿಕೆಟ್‌ ಕಿತ್ತ ಸಾಧನೆ ಮಾಡಿದ್ದಾರೆ.
ಮೊದಲ ದಿನದಾಟದ ಅಂತ್ಯಕ್ಕೆ ತಮಿಳು ನಾಡು ಒಂದು ವಿಕೆಟ್‌ ಕಳೆದುಕೊಂಡಿದ್ದು 23 ರನ್‌ ಗಳಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಲು ತಮಿಳುನಾಡು ಇನ್ನೂ 160 ರನ್‌ ಗಳಿಸಬೇಕಾಗಿದೆ.

Advertisement

ಮಧ್ಯಪ್ರದೇಶ 9ಕ್ಕೆ 234
ಇಂಧೋರ್‌ನಲ್ಲಿ ನಡೆಯುತ್ತಿರುವ ಪಂದ್ಯ ದಲ್ಲಿ ಆಂಧ್ರ ವಿರುದ್ಧ ಮಧ್ಯ ಪ್ರದೇಶ 9 ವಿಕೆಟಿಗೆ 234 ರನ್‌ ಗಳಿಸಿ ಆಡುತ್ತಿದೆ. ಯಶ್‌ ದುಬೆ (64) ಮತ್ತು ಹಿಮಾಂಶು ಮಂತ್ರಿ (49), ಸಾರಾನ್ಸ್‌ ಜೈನ್‌ (41 ಬ್ಯಾಟಿಂಗ್‌) ಅವರ ಉತ್ತಮ ಆಟದಿಂದಾಗಿ ತಂಡ ಚೇತರಿಸಿಕೊಂಡಿದೆ.

ಮುಂಬಯಿಗೆ ಮುಶೀರ್‌ ನೆರವು
ಅಂಡರ್‌-19 ವಿಶ್ವಕಪ್‌ನಲ್ಲಿ ಭಾರತದ ಸ್ಟಾರ್‌ ಆಟಗಾರಾಗಿ ಕಾಣಿಸಿಕೊಂಡಿದ್ದ ಮುಶೀರ್‌ ಖಾನ್‌ ಅವರು ಶುಕ್ರವಾರದಿಂದ ಆರಂಭವಾದ ಬರೋಡ ವಿರುದ್ಧದ ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಮುಂಬಯಿ ತಂಡದ ನೆರವಿಗೆ ನಿಂತಿದ್ದಾರೆ. ಅವರ ಚೊಚ್ಚಲ ಪ್ರಥಮ ದರ್ಜೆ ಶತಕದಿಂದಾಗಿ ಮುಂಬಯಿ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟಿಗೆ 248 ರನ್‌ ಪೇರಿಸಿದೆ.

ಒಂದು ಹಂತದಲ್ಲಿ 99 ರನ್ನಿಗೆ 4 ವಿಕೆಟ್‌ ಕಳೆದುಕೊಂಡು ಒದ್ದಾಡುತ್ತಿದ್ದ ಮುಂಬಯಿ ತಂಡವನ್ನು ಮುಶೀರ್‌ ಆಧರಿಸಿದರು. ಅವರ ಅಜೇಯ 128 ರನ್‌ ನೆರವಿನಿಂದ ತಂಡ ಉತ್ತಮ ಸ್ಥಿತಿಗೆ ತಲುಪುವಂತಾಯಿತು. 216 ಎಸೆತ ಎದುರಿಸಿದ ಅವರು 10 ಬೌಂಡರಿ ಬಾರಿಸಿದ್ದಾರೆ. 18ರ ಹರೆಯದ ಮುಶೀರ್‌ ಇತ್ತೀಚೆಗೆ ಮುಗಿದ ಅಂಡರ್‌ -19 ವಿಶ್ವಕಪ್‌ನಲ್ಲೂ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದರು. ಬರೋಡದ ಅನುಭವಿ ಬೌಲರ್‌ ಭಾರ್ಗವ್‌ ಭಟ್‌ 82 ರನ್ನಿಗೆ ನಾಲ್ಕು ವಿಕೆಟ್‌ ಕಿತ್ತು ಮುಂಬಯಿಗೆ ಹೊಡೆತ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next