Advertisement

ರಣಜಿ ಕ್ವಾರ್ಟರ್‌ ಫೈನಲ್‌: ಕರ್ನಾಟಕಕ್ಕೆ ರಾಜಸ್ಥಾನ ಸವಾಲು

12:55 AM Jan 15, 2019 | |

ಬೆಂಗಳೂರು: ಉದ್ಯಾನನಗರಿಯ “ಎಂ. ಚಿನ್ನಸ್ವಾಮಿ ಕ್ರೀಡಾಂಗಣ’ದಲ್ಲಿ ಮಂಗಳವಾರದಿಂದ ಆತಿಥೇಯ ಕರ್ನಾಟಕ-ರಾಜಸ್ಥಾನ ತಂಡಗಳ ನಡುವೆ ರಣಜಿ ಕ್ವಾರ್ಟರ್‌ ಫೈನಲ್‌ ಹಣಾಹಣಿ ಆರಂಭವಾಗಲಿದೆ. ಪ್ರಬಲ ಪೈಪೋಟಿ ನೀಡಲು ಎರಡೂ ತಂಡಗಳು ಸಜ್ಜಾಗಿದ್ದು, ಅಭಿಮಾನಿಗಳ ಕುತೂಹಲ ಗರಿಗೆದರಿದೆ.

Advertisement

ಒಂದು ಕಡೆ ಲೀಗ್‌ನಲ್ಲಿ ಕಷ್ಟಪಟ್ಟು ಕ್ವಾರ್ಟರ್‌ ಫೈನಲ್‌ ತನಕ ಸಾಗಿ ಬಂದಿರುವ ರಾಜ್ಯ ತಂಡ, ಇನ್ನೊಂದು ಕಡೆ ಲೀಗ್‌ನಲ್ಲಿ ಅಜೇಯ ಎನಿಸಿಕೊಂಡಿರುವ ರಾಜಸ್ಥಾನ. ಮೇಲ್ನೋಟಕ್ಕೆ ಎರಡೂ ತಂಡಗಳು ಪ್ರಬಲವಾಗಿದೆ. ರಾಜಸ್ಥಾನ ಸ್ವಲ್ಪ ಹೆಚ್ಚು ಬಲಿಷ್ಠ ಅನ್ನುವುದು ಹಿಂದಿನ ಪಂದ್ಯಗಳ ಫ‌ಲಿತಾಂಶಗಳಿಂದ ತಿಳಿಯುತ್ತದೆ. ಲೀಗ್‌ನಲ್ಲಿ ರಾಜಸ್ಥಾನ ಒಟ್ಟು 9 ಪಂದ್ಯ ಆಡಿದೆ. 7 ಪಂದ್ಯದಲ್ಲಿ ಗೆಲುವು ಗಳಿಸಿದೆ. 2 ಪಂದ್ಯ ಡ್ರಾ ಆಗಿದೆ. ಸೋಲನ್ನೇ ಕಾಣದೆ “ಸಿ’ ಗುಂಪಿನ ಅಗ್ರಸ್ಥಾನಿಯಾಗಿ ರಾಜಸ್ಥಾನ ಕ್ವಾರ್ಟರ್‌ಫೈನಲ್‌ ತನಕ ಬಂದಿದೆ. ಹೀಗಾಗಿ ರಾಜ್ಯಕ್ಕೆ ಕಠಿನ ಸವಾಲು ಎದುರಾಗಬಹುದು. ಕರ್ನಾಟಕ “ಎ’ ಗುಂಪಿನ 3ನೇ ಸ್ಥಾನಿಯಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ಲೀಗ್‌ನಲ್ಲಿ ಒಟ್ಟು 8 ಪಂದ್ಯ ಆಡಿದ್ದ ರಾಜ್ಯ ತಂಡ 3 ಜಯ, 2 ಸೋಲು ಹಾಗೂ ಮೂರನ್ನು ಡ್ರಾ ಮಾಡಿಕೊಂಡಿತ್ತು.

ಮಾಯಾಂಕ್‌ ಅನುಪಸ್ಥಿತಿ
ಮಾಯಾಂಕ್‌ ಅಗರ್ವಾಲ್‌ ಗಾಯದ ಕಾರಣದಿಂದಾಗಿ ಈ ಪಂದ್ಯಕ್ಕೆ ಲಭ್ಯರಿರುವುದಿಲ್ಲ. ಇದು ರಾಜ್ಯ ತಂಡಕ್ಕೆ ದೊಡ್ಡ ಹೊಡೆತ ನೀಡುವ ಸಾಧ್ಯತೆ ಇದೆ. ಆದರೆ ಆಲ್‌ರೌಂಡರ್‌ ಕೆ. ಗೌತಮ್‌ ವಾಪಸ್‌ ಆಗಿದ್ದಾರೆ. ಪ್ರಚಂಡ ಫಾರ್ಮ್ನಲ್ಲಿರುವ  ಕೆ.ವಿ. ಸಿದ್ಧಾರ್ಥ್ (651 ರನ್‌) ತವರಿನಂಗಳದಲ್ಲಿ ಮಿಂಚುವ ವಿಶ್ವಾಸವಿದೆ. 6 ಪಂದ್ಯಗಳಿಂದ 29 ವಿಕೆಟ್‌ ಕಬಳಿಸಿರುವ ರೋನಿತ್‌ ಮೋರೆ ತಂಡದ ತಾರಾ ಬೌಲರ್‌ ಆಗಿದ್ದಾರೆ.

ಬಿಷ್ಟಾ, ಅಂಕಿತ್‌ ಅಪಾಯಕಾರಿ
ರಾಜಸ್ಥಾನ ಬ್ಯಾಟ್ಸ್‌ಮನ್‌ ರಾಬಿನ್‌ ಬಿಷ್ಟಾ ರಾಜ್ಯ ಬೌಲರ್‌ಗಳಿಗೆ ಅಪಾಯಕಾರಿಯಾಗಿ ಗೋಚರಿಸುವ ಸಾಧ್ಯತೆ ಇದೆ. 9 ಪಂದ್ಯಗಳಿಂದ ಗರಿಷ್ಠ 684 ರನ್‌ ಬಾರಿಸಿದ ಹೆಗ್ಗಳಿಕೆ ಬಿಷ್ಟಾ ಅವರದು. ಅಂಕಿತ್‌ ಚೌಧರಿ 8 ಪಂದ್ಯಗಳಿಂದ 47 ವಿಕೆಟ್‌ ಕಬಳಿಸಿದ್ದಾರೆ. ಅಂಕಿತ್‌ ಬಗ್ಗೆ ಕರ್ನಾಟಕ ಬ್ಯಾಟ್ಸ್‌ಮನ್‌ಗಳು ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಕರ್ನಾಟಕ ತಂಡ:
ಮನೀಷ್‌ ಪಾಂಡೆ (ನಾಯಕ), ಶ್ರೇಯಸ್‌ ಗೋಪಾಲ್‌ (ಉಪ ನಾಯಕ), ಆರ್‌. ವಿನಯ್‌ ಕುಮಾರ್‌, ಡಿ. ನಿಶ್ಚಲ್‌, ಕರುಣ್‌ ನಾಯರ್‌, ಆರ್‌. ಸಮರ್ಥ್, ಅಭಿಮನ್ಯು ಮಿಥುನ್‌, ರೋನಿತ್‌ ಮೋರೆ, ಕೆ. ಗೌತಮ್‌, ಪ್ರಸಿದ್ಧ್ ಎಂ. ಕೃಷ್ಣ, ಕೆ.ವಿ. ಸಿದ್ಧಾರ್ಥ್, ಜೆ. ಸುಚಿತ್‌,  ಬಿ.ಆರ್‌. ಶರತ್‌, ಶರತ್‌ ಶ್ರೀನಿವಾಸ್‌, ಪವನ್‌ ದೇಶಪಾಂಡೆ.

Advertisement

ರಣಜಿ ಟ್ರೋಫಿ ಕ್ವಾರ್ಟರ್‌ ಫೈನಲ್ಸ್‌
1. ವಿದರ್ಭ-ಉತ್ತರಖಂಡ (ನಾಗಪುರ)
2. ಸೌರಾಷ್ಟ್ರ-ಉತ್ತರಪ್ರದೇಶ (ಲಕ್ನೊ)
3. ಕರ್ನಾಟಕ-ರಾಜಸ್ಥಾನ (ಬೆಂಗಳೂರು)
4. ಕೇರಳ-ಗುಜರಾತ್‌ (ವಯನಾಡ್‌)

Advertisement

Udayavani is now on Telegram. Click here to join our channel and stay updated with the latest news.

Next