ಹೊಸದಿಲ್ಲಿ: ರೈಲ್ವೇಸ್ ವಿರುದ್ಧ ನಡೆಯುತ್ತಿರುವ ರಣಜಿ ಕ್ರಿಕೆಟ್ ಲೀಗ್ ಹಂತದ ಅಂತಿಮ ಪಂದ್ಯದ ಮೂರನೇ ದಿನ ತನ್ನ ದ್ವಿತೀಯ ಇನ್ನಿಂಗ್ಸ್ನಲ್ಲಿ ಕೇವಲ 1 ವಿಕೆಟಿಗೆ 208 ರನ್ ಪೇರಿಸಿರುವ ಕರ್ನಾಟಕ ತಂಡವು ಒಟ್ಟಾರೆ 309 ರನ್ನುಗಳ ಬೃಹತ್ ಮುನ್ನಡೆ ಪಡೆದಿದೆ.
ಪಂದ್ಯ ಡ್ರಾದತ್ತ ಸಾಗುವ ಮುನ್ಸೂಚನೆ ದೊರೆತಿದ್ದರೂ ಕರ್ನಾಟಕದ ಮನದಲ್ಲಿ ಈಗ ಸಣ್ಣ ಗೆಲುವಿನ ಕನಸು ಕೂಡ ಚಿಗುರಿದೆ. ಮಂಗಳವಾರ ಅಂತಿಮ ದಿನವಾಗಿದ್ದು ಕರ್ನಾಟಕ ಬೆಳಗ್ಗೆ ಸ್ವಲ್ಪ ಹೊತ್ತು ಆಡಿ ರೈಲ್ವೇಸ್ಗೆ ಗೆಲುವಿನ ಗುರಿಯನ್ನು ನೀಡುವ ಸಾಧ್ಯತೆಯಿದೆ. ಕರ್ನಾಟಕ ತನ್ನ ಬೌಲರ್ಗಳ ಮೇಲೆ ಭರವಸೆ ಇರಿಸಿ ಯಶ ಸಾಧಿಸಿದ್ದೇ ಆದರೆ ಜಯ ಗಳಿಸುವ ಸಾಧ್ಯತೆಯೂ ಇದೆ. ರಾಜ್ಯ ತಂಡದಲ್ಲಿ ಅನುಭವಿ ಬೌಲರ್ಗಳಿದ್ದು ಯಾವುದೇ ಕ್ಷಣದಲ್ಲೂ ಪಂದ್ಯಕ್ಕೆ ತಿರುವು ಕೊಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ವಿನಯ್ ಕುಮಾರ್ಗೆ ವಿಶ್ವಾಸವಿಟ್ಟು ಪ್ರಯತ್ನಕ್ಕೆ ಇಳಿಯುವ ಅವಕಾಶ ಇದೆ.
ಬೃಹತ್ ಮುನ್ನಡೆ ಪಡೆದಿರುವ ಕರ್ನಾಟಕ: ಕರ್ನಾಟಕದ 434 ರನ್ನಿಗೆ ಉತ್ತರವಾಗಿ ರೈಲ್ವೇಸ್ ಮೊದಲ ಇನ್ನಿಂಗ್ಸ್ನಲ್ಲಿ 333 ರನ್ಗೆ ಆಲೌಟಾಯಿತು. 101 ರನ್ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದ ಕರ್ನಾಟಕ ದ್ವಿತೀಯ ಇನ್ನಿಂಗ್ಸ್ನಲ್ಲೂ ಭರ್ಜರಿ ಆಟವಾಡಿತು. ಆರಂಭಿಕರಾದ ರವಿಕುಮಾರ್ ಸಮರ್ಥ್ (56 ರನ್), ಮಾಯಾಂಕ್ ಅಗರ್ವಾಲ್ (ಅಜೇಯ 104 ರನ್) ಮೊದಲ ವಿಕೆಟಿಗೆ 117 ರನ್ ಜತೆಯಾಟ ನಿರ್ವಹಿಸಿದರು. ಉತ್ತಮ ಆರಂಭ ನೀಡಿದ್ದ ಇವರಿಬ್ಬರನ್ನು ಬೇರ್ಪಡಿಸಿದ್ದು ಅಮಿತ್ ಮಿಶ್ರಾ. ಅವರು ಅರ್ಧಶತಕ ಗಳಿಸಿದ್ದ ಸಮರ್ಥ್ ಅವರನ್ನು ಎಲ್ಬಿ ಬಲೆಗೆ ಬೀಳಿಸಿದರು. ಆ ಬಳಿಕ 2ನೇ ವಿಕೆಟಿಗೆ ಬಂದ ಡಿ ನಿಶ್ಚಲ್ (ಅಜೇಯ 41 ರನ್) ಅವರ ಜತೆ ಮಾಯಾಂಕ್ ಅಗರ್ವಾಲ್ ತಾಳ್ಮೆಯ ಬ್ಯಾಟಿಂಗ್ ಮುಂದುವರಿಸಿದರು. ಒಟ್ಟು 157 ಎಸೆತ ಎದುರಿಸಿದ ಅವರು 9 ಬೌಂಡರಿ , 3 ಸಿಕ್ಸರ್ನಿಂದ ಶತಕ ಗಡಿ ದಾಟಿದರು. ಅವರಿಗೆ ನಿಶ್ಚಲ್ ಭರ್ಜರಿಯಾಗಿ ಸಾಥ್ ನೀಡಿದರು. ಸದ್ಯ ಇವರಿಬ್ಬರು ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಮತ್ತೂಮ್ಮೆ ಸಿಡಿದ ಮಾಯಾಂಕ್: ಮಾಯಾಂಕ್ ಅಗರ್ವಾಲ್ ಮೊದಲನೇ ಇನ್ನಿಂಗ್ಸ್ನಲ್ಲಿ 173 ರನ್ ಸಿಡಿಸಿದ್ದರು. ಎರಡನೇ ಇನ್ನಿಂಗ್ಸ್ನಲ್ಲೂ ಇವರು ಆರಂಭಿಕರಾಗಿ ಶತಕ ಸಿಡಿಸಿ ಮಿಂಚಿದರು. ಎದುರಾಳಿ ಬೌಲರ್ಗಳನ್ನು ಮನಬಂದಂತೆ ದಂಡಿಸಿ ರನ್ ಕಲೆ ಹಾಕಿದ್ದು 104 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.
ಸ್ಪಿನ್ ದಾಳಕ್ಕೆ ಉರುಳಿದ ರೈಲ್ವೇಸ್: ಇದಕ್ಕೂ ಮೊದಲು ರಾಜ್ಯ ತಂಡದ ಬೌಲರ್ಗಳಾದ ಕೆ.ಗೌತಮ್ (70ಕ್ಕೆ3) ಹಾಗೂ ಶ್ರೇಯಸ್ ಗೋಪಾಲ್ (102ಕ್ಕೆ 4) ಅವರ ದಾಳಿಯನ್ನು ಎದುರಿಸಲು ರೈಲ್ವೇಸ್ ಬ್ಯಾಟ್ಸ್ಮನ್ಗಳಿಗೆ ಸಾಧ್ಯವೇ ಆಗಲಿಲ್ಲ. ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ರೈಲ್ವೇಸ್ ಸಾಗಿತು. ರೈಲ್ವೇಸ್ ತಂಡದ ಪರ ಮಹೇಶ್ ರಾವತ್ (124 ರನ್) ಹಾಗೂ ಘೋಷ್ (91 ರನ್) ಶತಕ ಸಿಡಿಸಿದದ್ದು ಬಿಟ್ಟರೆ ಉಳಿದ ಬ್ಯಾಟ್ಸ್ಮೆನ್ಗಳಿಂದ ನಿರೀಕ್ಷಿತ ಪ್ರದರ್ಶನ ಹೊರಹೊಮ್ಮಲಿಲ್ಲ. ವೇಗಿ ಅಭಿಮನ್ಯು ಮಿಥುನ್ ಕೂಡ 2 ವಿಕೆಟ್ ಕಬಳಿಸಿ ಹೊಡೆತ ನೀಡಿದ್ದರಿಂದ ರೈಲ್ವೇಸ್ಗೆ ಎಲ್ಲೂ ಚಿಗುರಿಕೊಂಡು ಆಡಲು ಅವಕಾಶ ಸಿಗಲೇ ಇಲ್ಲ.
ಸಂಕ್ಷಿಪ್ತ ಸ್ಕೋರ್
ರೈಲ್ವೇಸ್ 1ನೇ ಇನಿಂಗ್ಸ್ 333 ಆಲೌಟ್ (ರಾವತ್ 124, ಘೋಷ್ 91, ಶ್ರೇಯಸ್ ಗೋಪಾಲ್ 102ಕ್ಕೆ4), ಕರ್ನಾಟಕ 2ನೇ ಇನಿಂಗ್ಸ್ (ಮಾಯಾಂಕ್ ಅಗರ್ವಾಲ್ ಅಜೇಯ 104, ರವಿ ಕುಮಾರ್ ಸಮರ್ಥ್ 56, ಮಿಶ್ರಾ 56ಕ್ಕೆ1)