Advertisement

ರಣಜಿ: ಕರ್ನಾಟಕಕ್ಕೆ 209 ರನ್‌ ಗೆಲುವು

02:35 PM Nov 29, 2017 | Team Udayavani |

ಹೊಸದಿಲ್ಲಿ: ಸ್ಪಿನ್ನರ್‌ ಕೃಷ್ಣಪ್ಪ ಗೌತಮ್‌ ದಾಳಿಗೆ ರೈಲು ಹಳಿ ತಪ್ಪಿದೆ. ಇಲ್ಲಿನ “ಕರ್ನೈಲ್‌ ಸಿಂಗ್‌ ಸ್ಟೇಡಿಯಂ’ನಲ್ಲಿ ಮಂಗಳವಾರ ರೈಲ್ವೇಸ್‌ ವಿರುದ್ಧ 209 ರನ್ನುಗಳ ಭರ್ಜರಿ ಜಯ ಸಾಧಿಸಿದ ಕರ್ನಾಟಕ, 2017-18ನೇ ರಣಜಿ ಋತುವಿನ ಲೀಗ್‌ ವ್ಯವಹಾರವನ್ನು ಅಧಿಕಾರಯುತವಾಗಿ ಮುಗಿಸಿದೆ. ಕ್ವಾರ್ಟರ್‌ ಫೈನಲ್‌ನಲ್ಲಿ “ರಣಜಿ ದೊರೆ’ ಮುಂಬಯಿಯನ್ನು ಎದುರಿಸಲಿದೆ.

Advertisement

ಆರ್‌. ವಿನಯ್‌ ಕುಮಾರ್‌ ಸಾರಥ್ಯದಲ್ಲಿ ಅಮೋಘ ಪ್ರದರ್ಶನ ಕಾಯ್ದುಕೊಂಡು ಬಂದ ಕರ್ನಾಟಕ, “ಎ’ ವಿಭಾಗ ದಲ್ಲಿ ಆಡಿದ 6 ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದು 32 ಅಂಕ ಗಳೊಂದಿಗೆ ಅಗ್ರಸ್ಥಾನಿಯಾಗಿ ನಾಕೌಟ್‌ಗೆ ಲಗ್ಗೆ ಇರಿಸಿತು. ಉಳಿದೆರಡು ಪಂದ್ಯ ಡ್ರಾಗೊಂಡರೂ ರಾಜ್ಯ ತಂಡ ಮೊದಲ ಇನ್ನಿಂಗ್ಸ್‌ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ದಿಲ್ಲಿ ತಂಡ ಒಟ್ಟು 27 ಅಂಕ ಗಳಿಸಿ ದ್ವಿತೀಯ ಸ್ಥಾನಿಯಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು. 

ಗೌತಮ್‌ ಮಿಂಚಿನ ದಾಳಿ
ಗೆಲುವಿಗೆ 377 ರನ್‌ ಗುರಿ ಪಡೆದ ರೈಲ್ವೇಸ್‌ 63 ಓವರ್‌ಗಳಲ್ಲಿ 167 ರನ್ನಿಗೆ ತನ್ನೆಲ್ಲ ವಿಕೆಟ್‌ ಕಳೆದುಕೊಂಡು ಶರಣಾಯಿತು. ರೈಲ್ವೇಸ್‌ ಪತನದಲ್ಲಿ ನಿರ್ಣಾಯಕ ಪಾತ್ರ ವಹಿಸಿದವರು ಆಫ್ಸ್ಪಿನ್ನರ್‌ ಕೃಷ್ಣಪ್ಪ ಗೌತಮ್‌. ಅವರು 72 ರನ್ನಿಗೆ 7 ವಿಕೆಟ್‌ ಉಡಾಯಿಸಿದರು. ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಗೌತಮ್‌ ಅವರ ಜೀವನಶ್ರೇಷ್ಠ ಬೌಲಿಂಗ್‌ ಆಗಿದೆ. 108 ರನ್ನಿಗೆ 7 ವಿಕೆಟ್‌ ಉರುಳಿಸಿದ್ದು ಅವರ ಈ ವರೆಗಿನ ಅತ್ಯುತ್ತಮ ಪ್ರದರ್ಶನವಾಗಿತ್ತು. ಮತ್ತೂಬ್ಬ ಸ್ಪಿನ್ನರ್‌ ಶ್ರೇಯಸ್‌ ಗೋಪಾಲ್‌ 59ಕ್ಕೆ 2, ವೇಗಿ ಅಭಿಮನ್ಯು ಮಿಥುನ್‌ 21ಕ್ಕೆ ಒಂದು ವಿಕೆಟ್‌ ಕಿತ್ತರು. 

ಇದಕ್ಕೂ ಮುನ್ನ ಒಂದಕ್ಕೆ 208 ರನ್‌ ಮಾಡಿದಲ್ಲಿಂದ ಬ್ಯಾಟಿಂಗ್‌ ಮುಂದುವರಿಸಿದ ಕರ್ನಾಟಕ, 4 ವಿಕೆಟಿಗೆ 275 ರನ್‌ ಮಾಡಿ ತನ್ನ ದ್ವಿತೀಯ ಸರದಿಯನ್ನು ಡಿಕ್ಲೇರ್‌ ಮಾಡಿತು. ಅಗರ್ವಾಲ್‌ 104ರಿಂದ 134ರ ತನಕ ಬ್ಯಾಟಿಂಗ್‌ ವಿಸ್ತರಿಸಿದರು (178 ಎಸೆತ, 13 ಬೌಂಡರಿ, 3 ಸಿಕ್ಸರ್‌). ಡಿ. ನಿಶ್ಚಲ್‌ ಹಿಂದಿನ ದಿನದ ಮೊತ್ತಕ್ಕೆ ನಾಲ್ಕೇ ರನ್‌ ಸೇರಿಸಿ ಬೇಗನೆ ನಿರ್ಗಮಿಸಿದರು (45). ಕರುಣ್‌ ನಾಯರ್‌ (20) ಮತ್ತು ಶ್ರೇಯಸ್‌ ಗೋಪಾಲ್‌ (20) ಅಜೇಯರಾಗಿ ಉಳಿದರು. 

ರೈಲ್ವೇಸ್‌ ಎಚ್ಚರಿಕೆಯ ಆರಂಭ
ರೈಲ್ವೇಸ್‌ ಆರಂಭಿಕರಾದ ಶಿವಕಾಂತ್‌ ಶುಕ್ಲಾ (13) ಮತ್ತು ಮೃಣಾಲ್‌ ದೇವಧರ್‌ (24) ಪಂದ್ಯವನ್ನು ಉಳಿಸಿ ಕೊಳ್ಳುವ ಗುರಿಯೊಂದಿಗೆ ಎಚ್ಚರಿಕೆಯಿಂದಲೇ ಬ್ಯಾಟಿಂಗ್‌ ಆರಂಭಿಸಿದರು. ಇವರು 14 ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡಾಗ ಪಂದ್ಯ ಡ್ರಾ ಹಾದಿ ಹಿಡಿಯುತ್ತದೆಂದೇ ಭಾವಿಸಲಾಗಿತ್ತು. ಆದರೆ ಯಾವಾಗ ಗೌತಮ್‌ ದಾಳಿ ಗಿಳಿದರೋ ರೈಲ್ವೇಸ್‌ ಕುಸಿತವೂ ಮೊದಲ್ಗೊಂಡಿತು. ಗೌತಮ್‌ ಆರಂಭಿಕರಿಬ್ಬರನ್ನೂ ಕ್ಲೀನ್‌ಬೌಲ್ಡ್‌ ಮಾಡಿದರು. 

Advertisement

ಆದರೂ 35ನೇ ಓವರ್‌ ತನಕ ರೈಲ್ವೇಸ್‌ ಹೋರಾಟ ಜಾರಿಯಲ್ಲಿತ್ತು. ಆಗ ಸ್ಕೋರ್‌ 2 ವಿಕೆಟಿಗೆ 82 ರನ್‌ ಆಗಿತ್ತು. ಈ ಓವರಿನಲ್ಲಿ ನಿತಿನ್‌ ಭಿಲ್ಲೆ (15) ಅವರನ್ನು ಲೆಗ್‌ ಬಿಫೋರ್‌ ಬಲೆಗೆ ಕೆಡವಿದ ಮಿಥುನ್‌ ಪಂದ್ಯಕ್ಕೆ ದೊಡ್ಡ ತಿರುವು ಒದಗಿಸಿದರು. ಮುಂದಿನದೆಲ್ಲ ಗೌತಮ್‌ ಸ್ಪಿನ್‌ ಕಾರುಬಾರು. ಒಂದೇ ರನ್‌ ಅಂತರದಲ್ಲಿ ಅವರು ಅರಿಂದಮ್‌ ಘೋಷ್‌ (0) ವಿಕೆಟ್‌ ಉಡಾಯಿಸಿದರು. ವನ್‌ಡೌನ್‌ ಬ್ಯಾಟ್ಸ್‌ಮನ್‌ ಪ್ರಥಮ್‌ ಸಿಂಗ್‌ (36), ಕೆಳ ಕ್ರಮಾಂಕದಲ್ಲಿ ಮನೀಷ್‌ ರಾವ್‌ (22), ನಾಯಕ ಮಹೇಶ್‌ ರಾವತ್‌ (22), ವಿದ್ಯಾಧರ ಕಾಮತ್‌ (20) ಒಂದಿಷ್ಟು ಹೋರಾಟ ನಡೆಸಿದರೂ ಪಂದ್ಯ ಉಳಿಸಿಕೊಳ್ಳಲು ಇವರಿಂದಾಗಲಿಲ್ಲ. ರೈಲ್ವೇಸ್‌ನ ಕೊನೆಯ 5 ವಿಕೆಟ್‌ಗಳು 36 ರನ್‌ ಅಂತರದಲ್ಲಿ ಉದುರಿ ಹೋದವು.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ-434 ಮತ್ತು 4 ವಿಕೆಟಿಗೆ 275 ಡಿಕ್ಲೇರ್‌. ರೈಲ್ವೇಸ್‌-333 ಮತ್ತು 167 (ಪ್ರಥಮ ಸಿಂಗ್‌ 36, ದೇವಧರ್‌ 24, ಮನೀಷ್‌ 22, ರಾವತ್‌ 22, ಗೌತಮ್‌ 72ಕ್ಕೆ 7, ಎಸ್‌. ಗೋಪಾಲ್‌ 59ಕ್ಕೆ 2). ಪಂದ್ಯಶ್ರೇಷ್ಠ: ಮಾಯಾಂಕ್‌ ಅಗರ್ವಾಲ್‌.

ಮಾಯಾಂಕ್‌ ಅಗರ್ವಾಲ್‌:  27 ದಿನದಲ್ಲಿ  1,003 ರನ್‌!
ಮಾಯಾಂಕ್‌ ಅಗರ್ವಾಲ್‌!
ಈ ಬಾರಿಯ ರಣಜಿ ಲೀಗ್‌ ಹಂತದಲ್ಲೇ ಸಾವಿರ ರನ್‌ ಪೂರ್ತಿಗೊಳಿಸುವ ಮೂಲಕ ಸುದ್ದಿಯಲ್ಲಿರುವ ಕರ್ನಾಟಕದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌. ಈ ಸಂದರ್ಭದಲ್ಲಿ ಅವರು 90 ವರ್ಷಗಳ ಹಿಂದಿನ ಕ್ರಿಕೆಟ್‌ ದಾಖಲೆಯೊಂದನ್ನು ಸರಿಗಟ್ಟಿರುವುದು ವಿಶೇಷ.

ಅಗರ್ವಾಲ್‌ ಈ ಸಲದ 5 ರಣಜಿ ಲೀಗ್‌ ಪಂದ್ಯಗಳಿಂದ ಒಟ್ಟು 1,064 ರನ್‌ ಪೇರಿಸಿದ್ದಾರೆ. ಸರಾಸರಿ 133.00. ಇದರಲ್ಲಿ 1,003 ರನ್‌ ಕೇವಲ 27 ದಿನಗಳ ಅವಧಿಯಲ್ಲಿ ಬಂದಿರುವುದು ಕ್ರಿಕೆಟಿನ ಅಸಾಮಾನ್ಯ ಸಾಧನೆಯೇ ಆಗಿದೆ. ಇದನ್ನು ಕ್ರಿಕೆಟಿನ ಮಹಾನ್‌ ತಾರೆಗಳಾದ ಡಾನ್‌ ಬ್ರಾಡ್‌ಮನ್‌, ಸಚಿನ್‌ ತೆಂಡುಲ್ಕರ್‌ ಅವರಿಂದ ಕೂಡ ಸಾಧಿಸಲಾಗಲಿಲ್ಲ!

ಅಸ್ಸಾಂ ವಿರುದ್ಧದ ಮೊದಲ ಪಂದ್ಯದಲ್ಲಿ 31 ರನ್‌ ಮಾಡಿದ ಅಗರ್ವಾಲ್‌, ಬಳಿಕ ಹೈದರಾಬಾದ್‌ ವಿರುದ್ಧ ಎರಡೂ ಇನ್ನಿಂಗ್ಸ್‌ಗಳಲ್ಲಿ ಸೊನ್ನೆ ಸುತ್ತಿ ಹೋಗಿದ್ದರು. ಆದರೆ ನ. ಒಂದರಿಂದ ಅಗರ್ವಾಲ್‌ ಅವರ ಬ್ಯಾಟಿಂಗ್‌ ದಿಕ್ಕೇ ಬದಲಾಯಿತು. ಮಹಾರಾಷ್ಟ್ರ ವಿರುದ್ಧ ತ್ರಿಶತಕ (304), ದಿಲ್ಲಿ ವಿರುದ್ಧ 176 ಮತ್ತು 23, ಯುಪಿ ವಿರುದ್ಧ 90 ಮತ್ತು 133, ರೈಲ್ವೇಸ್‌ ಎದುರು ಎರಡೂ ಇನ್ನಿಂಗ್ಸ್‌ಗಳಲ್ಲಿ ಸೆಂಚುರಿ (173 ಮತ್ತು 134)… ಹೀಗೆ ಸಾಗಿ ಬಂದಿದೆ ಅಗರ್ವಾಲ್‌ ಬ್ಯಾಟಿಂಗ್‌ ವೈಭವ. 

ಕ್ರಿಕೆಟ್‌ ದಾಖಲೆಗಳನ್ನು ಅವಲೋಕಿಸುವಾಗ ಆಸ್ಟ್ರೇಲಿಯದ ಬಿಲ್‌ ಪೋನ್ಸ್‌ಫೋರ್ಡ್‌ ವಿಕ್ಟೋರಿಯಾ ಪರ ಆಡುತ್ತ 1927ರ ಡಿಸೆಂಬರ್‌ನಲ್ಲಿ ಸಾವಿರ ರನ್‌ ಬಾರಿಸಿದ ಉಲ್ಲೇಖ ಕಾಣಸಿಗುತ್ತದೆ (1,146 ರನ್‌). ಪೋನ್ಸ್‌ಫೋರ್ಡ್‌ ಅವರನ್ನು ಹೊರತುಪಡಿಸಿದರೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಒಂದೇ ತಿಂಗಳಲ್ಲಿ ಸಾವಿರ ರನ್‌ ಪೇರಿಸಿದ್ದು ಅಗರ್ವಾಲ್‌ ಮಾತ್ರ! ಅಂದು 5 ಇನ್ನಿಂಗ್ಸ್‌ಗಳಲ್ಲಿ ಪೋನ್ಸ್‌ಫೋರ್ಡ್‌ ಕ್ರಮವಾಗಿ 133, 437, 202, 38 ಮತ್ತು 336 ರನ್‌ ಬಾರಿಸಿದ್ದರು.

ಇದೇ ಬ್ಯಾಟಿಂಗ್‌ ಅಬ್ಬರ ಮುಂದುವರಿಸಿದರೆ ರಣಜಿ ಋತು ವೊಂದರಲ್ಲಿ ಸರ್ವಾಧಿಕ ರನ್‌ ಪೇರಿಸಿದ ದಾಖಲೆಯನ್ನೂ ಅಗರ್ವಾಲ್‌ ಒಲಿಸಿಕೊಳ್ಳಬಹುದು. ಸದ್ಯ ಇದು ವಿವಿಎಸ್‌ ಲಕ್ಷ್ಮಣ್‌ ಹೆಸರಲ್ಲಿದೆ (1,415 ರನ್‌).

Advertisement

Udayavani is now on Telegram. Click here to join our channel and stay updated with the latest news.

Next