Advertisement

ರಣಜಿ ಫೈನಲ್‌: ಪ.ಬಂಗಾಳಕ್ಕೆ ಆಘಾತ

10:21 PM Feb 16, 2023 | Team Udayavani |

ಕೋಲ್ಕತ: ಸುಮಾರು ಮೂರು ದಶಕಗಳ ಬಳಿಕ ರಣಜಿ ಟ್ರೋಫಿ ಪ್ರಶಸ್ತಿ ಗೆಲ್ಲುವ ಪ.ಬಂಗಾಳದ ಕನಸಿಗೆ ಮೊದಲ ದಿನವೇ ದೊಡ್ಡ ಹೊಡೆತ ಬಿದ್ದಿದೆ. ಜೈದೇವ್‌ ಉನಾದ್ಕಟ್‌ ಮತ್ತು ಚೇತನ್‌ ಸಕಾರಿಯ ಅವರ ಮಾರಕ ದಾಳಿಯ ನೆರವಿನಿಂದ ಸೌರಾಷ್ಟ್ರ ತಂಡವು ರಣಜಿ ಟ್ರೋಫಿಯ ಫೈನಲ್‌ ಪಂದ್ಯದ ಮೊದಲ ದಿನ ಬಂಗಾಳ ವಿರುದ್ಧ ಮೇಲುಗೈ ಸಾಧಿಸಿದೆ.

Advertisement

ಅವರಿಬ್ಬರ ದಾಳಿಗೆ ಕುಸಿದ ಬಂಗಾಳ ಕೇವಲ 174 ರನ್ನಿಗೆ ಆಲೌಟಾಗಿದೆ. ಇದಕ್ಕುತ್ತರವಾಗಿ ಬ್ಯಾಟಿಂಗ್‌ ಆರಂಭಿಸಿರುವ ಸೌರಾಷ್ಟ್ರ ತಂಡವು ದಿನದಾಟದ ಅಂತ್ಯಕ್ಕೆ ಎರಡು ವಿಕೆಟ್‌ ಕಳೆದುಕೊಂಡಿದ್ದು 81 ರನ್‌ ಗಳಿಸಿದೆ.

ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ  ಸಾಧಿಸಲು ತಂಡ ಇನ್ನು 93 ರನ್‌ ಗಳಿಸಬೇಕಾಗಿದೆ. ಫಾರ್ಮ್ನಲ್ಲಿರುವ ಹಾರ್ವಿಕ್‌ ದೇಸಾಯಿ 38 ರನ್ನುಗಳಿಂದ ಆಡುತ್ತಿದ್ದಾರೆ. ಈ ಋತುವಿನಲ್ಲಿ ಅವರು 600 ಪ್ಲಸ್‌ ರನ್‌ ಗಳಿಸಿದ ಸಾಧನೆ ಮಾಡಿದ್ದಾರೆ.

ಹಠಾತ್‌ ಕುಸಿತ :

ತವರಿನ ನೆಲದಲ್ಲಿ ಆಡುವ ಅವಕಾಶ ಪಡೆದರೂ ಬಂಗಾಲ ತಂಡವು ಸೌರಾಷ್ಟ್ರ ತಂಡದ ಬೌಲರ್‌ಗಳ ದಾಳಿಗೆ ತತ್ತರಿಸಿತು. 65 ರನ್‌ ಗಳಿಸುವಷ್ಟರಲ್ಲಿ ತಂಡದ ಅಗ್ರ ಕ್ರಮಾಂಕದ ಆರು ಆಟಗಾರರು ಪೆವಿಲಿಯನ್‌ ಸೇರಿಕೊಂಡಿದ್ದರು. ಆದರೆ ಶಾಬಾಜ್‌ ಅಹ್ಮದ್‌ ಮತ್ತು ವಿಕೆಟ್‌ಕೀಪರ್‌ ಅಭಿಷೇಕ್‌ ಪೊರೆಲ್‌ ಅವರ ತಾಳ್ಮೆಯ ಆಟದಿಂದಾಗಿ ತಂಡವು ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿತು. ಸುಮಾರು ನಾಲ್ಕು ತಾಸು ಸೌರಾಷ್ಟ್ರ ದಾಳಿಯನ್ನು ನಿಭಾಯಿಸಿದ ಅವರಿಬ್ಬರು ಏಳನೇ ವಿಕೆಟಿಗೆ 101 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು.

Advertisement

ಅಹ್ಮದ್‌ ಮತ್ತು ಪೊರೆಲ್‌ ಜೋಡಿ ಮುರಿದ ಬಳಿಕ ತಂಡ ಮತ್ತೆ ಕುಸಿಯಿತು. ಮತ್ತೆ 9 ರನ್‌ ಗಳಿಸುವಷ್ಟರಲ್ಲಿ ತಂಡ 174 ರನ್ನಿಗೆ ಆಲೌಟಾಯಿತು. ಅಹ್ಮದ್‌ 11 ಬೌಂಡರಿ ನೆರವಿನಿಂದ 69 ಮತ್ತು ಪೊರೆಲ್‌ 8 ಬೌಂಡರಿ ನೆರವಿನಿಂದ 50 ರನ್‌ ಗಳಿಸಿದ್ದರು.

ಬಿಗು ದಾಳಿ ಸಂಘಟಿಸಿದ ಜೈದೇವ್‌ ಉನಾದ್ಕತ್‌ 44 ರನ್ನಿಗೆ 3 ಮತ್ತು ಸಕಾರಿಯ 33 ರನ್ನಿಗೆ 3 ವಿಕೆಟ್‌ ಕಿತ್ತರು. ಚಿರಾಗ್‌ ಜಾನಿ ಮತ್ತು ಧರ್ಮೇದ್ರ ಸಿಂಗ್‌ ಜಡೇಜ ತಲಾ ಎರಡು ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರು: ಬಂಗಾಲ 174 (ಶಾಬಾಜ್‌ ಅಹ್ಮದ್‌ 69, ಅಭಿಷೇಕ್‌ ಪೊರೆಲ್‌ 50, ಜೈದೇವ್‌ ಉನಾದ್ಕತ್‌ 44ಕ್ಕೆ 3, ಸಕಾರಿಯ 33ಕ್ಕೆ 3, ಚಿರಾಗ್‌ 33ಕ್ಕೆ 2, ಧರ್ಮೇಂದ್ರ ಸಿಂಗ್‌ ಜಡೇಜ 19ಕ್ಕೆ 2); ಸೌರಾಷ್ಟ್ರ 2 ವಿಕೆಟಿಗೆ 81 (ಹಾರ್ವಿಕ್‌ ದೇಸಾಯಿ 38 ಬ್ಯಾಟಿಂಗ್‌).

 

Advertisement

Udayavani is now on Telegram. Click here to join our channel and stay updated with the latest news.

Next