Advertisement

ರಣಜಿ: ಮಾಯಾಂಕ್‌ ಅಗರ್ವಾಲ್‌ ಶತಕದಾಟ

08:01 PM Jan 04, 2023 | Team Udayavani |

ಬೆಂಗಳೂರು: ಛತ್ತೀಸ್‌ಗಢ ವಿರುದ್ಧದ ರಣಜಿ ಪಂದ್ಯದ ದ್ವಿತೀಯ ದಿನ ಕರ್ನಾಟಕ ತಿರುಗಿ ಬೀಳುವಲ್ಲಿ ಯಶಸ್ವಿಯಾಗಿದೆ. ಬೌಲರ್‌ಗಳ ಬೊಂಬಾಟ್‌ ಆಕ್ರಮಣದ ಬಳಿಕ ನಾಯಕ ಮಾಯಾಂಕ್‌ ಅಗರ್ವಾಲ್‌ ಅಜೇಯ ಶತಕ ಬಾರಿಸಿ ಕರ್ನಾಟಕವನ್ನು ಸುಸ್ಥಿತಿಗೆ ತಲುಪಿಸಿದ್ದಾರೆ.

Advertisement

5 ವಿಕೆಟ್‌ ನಷ್ಟಕ್ಕೆ 267 ರನ್‌ ಮಾಡಿದ್ದ ಛತ್ತೀಸ್‌ಗಢ, ಬುಧವಾರದ ಆಟದಲ್ಲಿ 311ಕ್ಕೆ ಸರ್ವಪತನ ಕಂಡಿತು. ಜವಾಬು ನೀಡುತ್ತಿರುವ ಕರ್ನಾಟಕ ಒಂದು ವಿಕೆಟ್‌ ಕಳೆದುಕೊಂಡು 202 ರನ್‌ ಪೇರಿಸಿದೆ. ಅಗರ್ವಾಲ್‌ 102 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ರವಿಕುಮಾರ್‌ ಸಮರ್ಥ್ ಸ್ವಲ್ಪದರಲ್ಲೇ ಶತಕ ವಂಚಿತರಾದರು. ಅವರ ಗಳಿಕೆ 81 ರನ್‌. ಈ ಜೋಡಿಯಿಂದ ಮೊದಲ ವಿಕೆಟಿಗೆ 46.1 ಓವರ್‌ಗಳಿಂದ 163 ರನ್‌ ಹರಿದು ಬಂತು.

ಮಾಯಾಂಕ್‌ ಅಗರ್ವಾಲ್‌ ಬಿರುಸಿನ ಬ್ಯಾಟಿಂಗ್‌ ಮೂಲಕ ರಂಜಿಸಿದರು. 191 ಎಸೆತ ಎದುರಿಸಿದ್ದು, 9 ಬೌಂಡರಿ ಹಾಗೂ 5 ಸಿಕ್ಸರ್‌ ಸಿಡಿಸಿ ಎದುರಾಳಿ ಬೌಲರ್‌ಗಳ ನಿದ್ದೆಗೆಡಿಸಿದ್ದಾರೆ. ಹ್ಯಾಟ್ರಿಕ್‌ ಶತಕ ಬಾರಿಸಿ ಪ್ರಚಂಡ ಫಾರ್ಮ್ ಪ್ರದರ್ಶಿಸಿದ್ದ ಆರ್‌. ಸಮರ್ಥ್ ಇಲ್ಲಿ ಸತತ 4ನೇ ಶತಕದತ್ತ ದಾಪುಗಾಲಿಕ್ಕಿದ್ದರು. ಆದರೆ ಇದಕ್ಕೆ ಅಜಯ್‌ ಮಂಡಲ್‌ ಅಡ್ಡಗಾಲಿಕ್ಕಿದರು. ಸಮರ್ಥ್ 127 ಎಸೆತ ಎದುರಿಸಿ 11 ಬೌಂಡರಿ ಹೊಡೆದರು.

ಛತ್ತೀಸ್‌ಗಢದ ಕುಸಿತದಲ್ಲಿ ವಿದ್ವತ್‌ ಕಾವೇರಪ್ಪ ಮತ್ತು ವಾಸುಕಿ ಕೌಶಿಕ್‌ ಪಾತ್ರ ಪ್ರಮುಖವಾಗಿತ್ತು. 9 ವಿಕೆಟ್‌ಗಳು ಇವರ ಬುಟ್ಟಿಗೆ ಬಿದ್ದವು. 118 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ಅಶುತೋಷ್‌ ಸಿಂಗ್‌ ಆಟ 135ಕ್ಕೆ ಕೊನೆಗೊಂಡಿತು (319 ಎಸೆತ, 21 ಬೌಂಡರಿ, 1 ಸಿಕ್ಸರ್‌).

ಸಂಕ್ಷಿಪ್ತ ಸ್ಕೋರ್‌: ಛತ್ತೀಸ್‌ಗಢ-311 (ಅಶುತೋಷ್‌ ಸಿಂಗ್‌ 135, ಅಮನ್‌ದೀಪ್‌ ಖಾರೆ 93, ಹರ್‌ಪ್ರೀತ್‌ ಸಿಂಗ್‌ 34, ವಿದ್ವತ್‌ ಕಾವೇರಪ್ಪ 67ಕ್ಕೆ 4, ವಾಸುಕಿ ಕೌಶಿಕ್‌ 43ಕ್ಕೆ 4). ಕರ್ನಾಟಕ-ಒಂದು ವಿಕೆಟಿಗೆ 202 (ಮಾಯಾಂಕ್‌ ಅಗರ್ವಾಲ್‌ ಬ್ಯಾಟಿಂಗ್‌ 102, ಆರ್‌. ಸಮರ್ಥ್ 81, ವಿಶಾಲ್‌ ಓನತ್‌ ಬ್ಯಾಟಿಂಗ್‌ 15).

Advertisement
Advertisement

Udayavani is now on Telegram. Click here to join our channel and stay updated with the latest news.

Next