ವಡೋದರ: ಸೋಮವಾರದಿಂದ ಆರಂಭಗೊಳ್ಳಲಿರುವ ರಣಜಿ ಪಂದ್ಯಾವಳಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಕರ್ನಾಟಕ ತಂಡ ಬರೋಡಾವನ್ನು ಎದುರಿಸಲಿದೆ.
ವಡೋದರ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.ಹೊಸ ನಿಯಮದಂತೆ, ಗ್ರೂಪ್ “ಎ’ ಮತ್ತು ಗ್ರೂಪ್ “ಬಿ’ಗಳ ಒಟ್ಟು ಅಗ್ರ 5 ತಂಡಗಳು, ಗ್ರೂಪ್ “ಸಿ’ಯಿಂದ 2, ಪ್ಲೇಟ್ ಗ್ರೂಪ್‌ನಿಂದ ಒಂದು ತಂಡ ಕ್ವಾರ್ಟರ್ ಫೈನಲ್ ಹಂತಕ್ಕೆ ತೇರ್ಗಡೆ ಹೊಂದಲಿವೆ.
ಈ ನಿಯಮದನ್ವಯ, ಸದ್ಯದ ಮಟ್ಟಿಗೆ ಕ್ವಾರ್ಟರ್ ಫೈನಲ್‌ಗೆ ಸಾಗಬಹುದಾದ ತಂಡಗಳನ್ನು ಗುರುತಿಸುವುದಾದರೆ ಗ್ರೂಪ್ “ಎ’ಯಿಂದ ವಿದರ್ಭ (28) ಹಾಗೂ ಕರ್ನಾಟಕ (27) ತಂಡಗಳೇ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತವೆ. ಆನಂತರದ ಸ್ಥಾನಗಳಲ್ಲಿ “ಎ’ ಗ್ರೂಪ್‌ನ ಗುಜರಾತ್ (26 ಅಂಕ), ಸೌರಾಷ್ಟ್ರ (26 ಅಂಕ) ತಂಡಗಳೇ ಇವೆ. ಗ್ರೂಪ್ “ಬಿ’ಯ ಮಧ್ಯಪ್ರದೇಶ (24) 5ನೇ ತಂಡವಾಗಿದೆ.
20 ಅಂಕಗಳನ್ನು ಪಡೆದಿರುವ ಬರೋಡಾ ತಂಡ 9ನೇ ಸ್ಥಾನ ಪಡೆಯುತ್ತದೆ. ಕರ್ನಾಟಕ ವಿರುದ್ಧ ಬೋನಸ್ ಅಂಕ ಸಹಿತ ಜಯ ಸಾಧಿಸಿದರೆ ಬರೋಡ ಮುನ್ನಡೆ ಸಾಧಿಸಬಹುದೇನೋ! ಆದರೆ, ಕರ್ನಾಟಕ ತಂಡ ಬರೋಡಾವನ್ನು ಮಣಿಸಿದರೆ ನಿರಾಯಾಸವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಲಿದೆ.ಕಳೆದ ಮೂರು ಪಂದ್ಯಗಳಲ್ಲಿ ಕರ್ನಾಟಕ ತನ್ನ ಸಾಮರ್ಥ್ಯವನ್ನು ಕೊಂಚ ಹೆಚ್ಚಿಸಿಕೊಂಡಿದೆ. ಗುಜರಾತ್ ವಿರುದ್ಧದ ಪಂದ್ಯವನ್ನು ಡ್ರಾ ಮಾಡಿಕೊಂಡ ಅನಂತರ ರೈಲ್ವೇಸ್ ಹಾಗೂ ಛತ್ತೀಸ್‌ಗಢ ವಿರುದ್ಧ ಗೆಲುವು ಸಾಧಿಸಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಹೀಗಾಗಿ ಬರೋಡ ವಿರುದ್ಧ ಮೇಲುಗೈ ಸಾಧಿಸಬಹುದೆಂಬ ನಿರೀಕ್ಷೆ ಇರಿಸಿಕೊಳ್ಳಬಹುದು.
ಕರ್ನಾಟಕ ಸಂಭಾವ್ಯ ತಂಡ
ಮನೀಷ್ ಪಾಂಡೆ (ನಾಯಕ), ಶ್ರೇಯಸ್ ಗೋಪಾಲ್ (ಉಪನಾಯಕ), ಆರ್. ವಿನಯ್ ಕುಮಾರ್, ಡಿ. ನಿಶ್ಚಲ್, ಕೆ.ವಿ. ಸಿದ್ದಾರ್ಥ್, ಕರುಣ್ ನಾಯರ್, ಆರ್. ಸಮರ್ಥ್, ಬಿ.ಆರ್. ಶರತ್ (ವಿಕೆಟ್ ಕೀಪರ್), ಜೆ. ಸುಚಿತ್, ಅಭಿಮನ್ಯು ಮಿಥುನ್, ರೋನಿತ್ ಮೋರೆ, ಪವನ್ ದೇಶಪಾಂಡೆ, ಶರತ್ ಶ್ರೀನಿವಾಸ್, ಪ್ರಸಿದ್ಧ್ ಎಂ. ಕೃಷ್ಣ, ಶುಭಾಂಗ್ ಹೆಗ್ಡೆ.