Advertisement

ರಣಜಿ ಸೆಮಿಫೈನಲ್‌: ಇಂದಿನಿಂದ ಕರ್ನಾಟಕ-ಬಂಗಾಲ ಕದನ

02:21 AM Feb 29, 2020 | Sriram |

ಕೋಲ್ಕತಾ: ಲೀಗ್‌, ಕ್ವಾರ್ಟರ್‌ಫೈನಲ್‌ನಲ್ಲಿ ಅಜೇಯವಾಗಿ ಮೆರೆದಾಡಿರುವ ಕರ್ನಾಟಕ ತಂಡವು ಶನಿವಾರದಿಂದ ಆರಂಭವಾಗಲಿರುವ ರಣಜಿ ಸೆಮಿಫೈನಲ್‌ ಪಂದ್ಯದಲ್ಲಿ ಆತಿಥೇಯ ಬಂಗಾಲ ತಂಡವನ್ನು ಎದುರಿಸಲಿದೆ.

Advertisement

ರಾಹುಲ್‌ ಸೇವೆ ಲಭ್ಯ
ಭಾರತದ “ಕ್ರಿಕೆಟ್‌ ಕಾಶಿ’ ಎಂದೇ ಕರೆಯಲ್ಪಡುವ ಕೋಲ್ಕತಾದ ಈಡನ್‌ಗಾರ್ಡನ್‌ನಲ್ಲಿ ಈ ಎರಡೂ ತಂಡಗಳು ಮುಖಾಮುಖೀಯಾಗುತ್ತಿವೆ. ಲೀಗ್‌, ಕ್ವಾರ್ಟರ್‌ ಫೈನಲ್‌ನಲ್ಲೂ ಸೋತಿಲ್ಲ, ಸೆಮೀಸ್‌ನಲ್ಲೂ ಸೋಲಲ್ಲ ಎನ್ನುವ ಆತ್ಮವಿಶ್ವಾಸದಿಂದ ಕರ್ನಾಟಕ ಕಣಕ್ಕಿಳಿಯುತ್ತಿದೆ. ವಿಶೇಷವೆಂದರೆ ಕರ್ನಾಟಕ ತಂಡಕ್ಕೆ ಖ್ಯಾತ ಬ್ಯಾಟ್ಸ್‌ಮನ್‌ ಕೆ.ಎಲ್‌.ರಾಹುಲ್‌ ಸೇವೆ ಲಭ್ಯವಿದೆ. ಇವರ ಆಗಮನದಿಂದ ಕರ್ನಾಟಕ ತಂಡದ ಬ್ಯಾಟಿಂಗ್‌ ವಿಭಾಗ ಮತ್ತಷ್ಟು ಬಲಿಷ್ಠಗೊಳ್ಳಲಿದೆ. ಮತ್ತೂಂದು ಕಡೆ ತವರಿನಲ್ಲಿ ಜಯ ನಮ್ಮದೇ ಎನ್ನುವ ಆತ್ಮವಿಶ್ವಾಸದೊಂದಿಗೆ ಬಂಗಾಲ ಸೆಣಸಾಟಕ್ಕೆ ಅಣಿಯಾಗಿದ್ದು ಕರ್ನಾಟಕಕ್ಕೆ ಸೋಲುಣಿಸಲು ತಂತ್ರ ರೂಪಿಸಿದೆ.

ಅಜೇಯ ಕರ್ನಾಟಕ
ಎಲೈಟ್‌ “ಎ’ ಮತ್ತು “ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಕರ್ನಾಟಕ ಲೀಗ್‌ನಲ್ಲಿ ಒಟ್ಟಾರೆ 8 ಪಂದ್ಯವನ್ನಾಡಿತ್ತು. 4 ಪಂದ್ಯದಲ್ಲಿ ಗೆಲುವು ಗಳಿಸಿದ್ದ ಕರ್ನಾಟಕ ತಂಡವು 4 ಪಂದ್ಯದಲ್ಲಿ ಡ್ರಾ ಸಾಧಿಸಿತ್ತು. ಒಟ್ಟಾರೆ 31 ಅಂಕದೊಂದಿಗೆ ಗುಂಪಿನ 3ನೇ ಸ್ಥಾನಿಯಾಗಿ ಸ್ಪರ್ಧೆ ಮುಗಿಸಿತ್ತು. ನಾಕೌಟ್‌ ಸುತ್ತಿನಲ್ಲೂ ಅದೇ ಫಾರ್ಮ್ ಮುಂದುವರಿಸಿದ ಕರ್ನಾಟಕ ತಂಡವು ಜಮ್ಮು ಕಾಶ್ಮೀರ ತಂಡವನ್ನು ಅವರದ್ದೇ ನೆಲದಲ್ಲಿ ಹೊಡೆದುರುಳಿಸಿ ಸೆಮೀಸ್‌ಗೆ ನೆಗೆದಿತ್ತು. ಕರ್ನಾಟಕ ತಂಡ ಇದುವರೆಗೆ ಕೂಟದಲ್ಲಿ ಸಾಗಿದ ಒಟ್ಟಾರೆ ಹಾದಿ ಗಮನಿಸಿದರೆ ಒಂದೇ ಒಂದು ಸೋಲು ಕಂಡಿಲ್ಲ. ಬ್ಯಾಟಿಂಗ್‌, ಬೌಲಿಂಗ್‌ ಎರಡರಲ್ಲೂ ಕರ್ನಾಟಕ ತಂಡ ಬಲಿಷ್ಠವಾಗಿದೆ. ಎಂತಹ ತಂಡಕ್ಕೂ ಆಘಾತ ನೀಡಬಲ್ಲ ಸಾಮರ್ಥ್ಯ ಹೊಂದಿದೆ.

ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ದೇವದತ್ತ ಪಡಿಕ್ಕಲ್‌, ಆರ್‌. ಸಮರ್ಥ್ ಜವಾಬ್ದಾರಿ ಅರಿತು ಬ್ಯಾಟ್‌ ಬೀಸುತ್ತಿದ್ದಾರೆ. ನಾಯಕ ಕರುಣ್‌ ನಾಯರ್‌ ಕ್ವಾರ್ಟರ್‌ಫೈನಲ್‌ನಲ್ಲಿ ನಿರಾಸೆ ಮೂಡಿಸಿದ್ದರು. ಮೊದಲ ಇನ್ನಿಂಗ್ಸ್‌ ನಲ್ಲಿ 4 ರನ್‌ ಹಾಗೂ ಎರಡನೇ ಇನ್ನಿಂಗ್ಸ್‌ ನಲ್ಲಿ 15 ರನ್ನಿಗೆ ಔಟಾಗಿದ್ದರು. ಮಹತ್ವದ ಪಂದ್ಯದಲ್ಲಿ ಅವರಿಂದ ಉತ್ತಮ ಬ್ಯಾಟಿಂಗ್‌ ಹೊರಹೊಮ್ಮಿದರೆ ಕರ್ನಾಟಕ ದೊಡ್ಡ ಮೊತ್ತ ಪೇರಿಸುವ ಅವಕಾಶಗಳು ಹೆಚ್ಚಿವೆ. ನ್ಯೂಜಿಲ್ಯಾಂಡ್‌ನ‌ಲ್ಲಿ ಸೀಮಿತ ಓವರ್‌ಗಳ ಪಂದ್ಯವನ್ನಾಡಿ ಇದೀಗ ಕರ್ನಾಟಕ ತಂಡವನ್ನು ಸೇರಿಕೊಂಡಿರುವ ಕೆ.ಎಲ್‌.ರಾಹುಲ್‌ ಆಗಮನದಿಂದ ಬಂಗಾಲ ಬೌಲರ್‌ಗಳಲ್ಲಿ ಸಣ್ಣಗೆ ನಡುಕ ಶುರುವಾಗಿದೆ. ರಾಹುಲ್‌ ನೆಲಕಚ್ಚಿ ನಿಂತು ಬ್ಯಾಟ್‌ ಬೀಸಿದರೆಂದರೆ ನಿಯಂತ್ರಿಸುವುದು ಕಷ್ಟವಾಗಬಹುದು.

ಪ್ರಬಲ ಎದುರಾಳಿ ಬಂಗಾಲ
ಆತಿಥೇಯ ಬಂಗಾಲ ತಂಡ ಕರ್ನಾಟಕಕ್ಕೆ ಆಘಾತ ನೀಡಲು ತುದಿಗಾಲಲ್ಲಿ ನಿಂತಿದೆ. ತವರಿನ ಪಿಚ್‌, ಅಭಿಮಾನಿಗಳ ಬೆಂಬಲದೊಂದಿಗೆ ಕಣಕ್ಕಿಳಿಯುತ್ತಿರುವ ಬಂಗಾಲ ಹೆಚ್ಚು ಅಪಾಯ ಕಾರಿಯಾಗಿದೆ. ಅಭಿಮನ್ಯು ಈಶ್ವರನ್‌ ತಂಡವನ್ನು ಮುನ್ನಡೆಸುತ್ತಿದ್ದಾರೆ. ತಂಡದ ತಾರಾ ಬ್ಯಾಟ್ಸ್‌ ಮನ್‌ ಮನೋಜ್‌ ತಿವಾರಿ ಒಡಿಶಾ ವಿರುದ್ಧ ಕ್ವಾರ್ಟರ್‌ಫೈನಲ್‌ನಲ್ಲಿ ವಿಫ‌ಲರಾಗಿದ್ದರು. ಮೊದಲ ಇನ್ನಿಂಗ್ಸ್‌ ನಲ್ಲಿ 4 ರನ್ನಿಗೆ ಔಟಾಗಿದ್ದ ಮನೋಜ್‌ ತಿವಾರಿ 2ನೇ ಇನ್ನಿಂಗ್ಸ್‌ನಲ್ಲಿ 6 ರನ್ನಿಗೆ ವಿಕೆಟ್‌ ಕಳೆದುಕೊಂಡಿದ್ದರು. ಅನುಸ್ತಪ್‌ ಮಜುಂದಾರ್‌ ಕ್ವಾರ್ಟರ್‌ಫೈನಲ್‌ನಲ್ಲಿ ಶತಕ ಬಾರಿಸಿದ್ದರು. ವಿಕೆಟ್‌ ಕೀಪರ್‌ ಶ್ರೀವತ್ಸ ಗೋಸ್ವಾಮಿ, ಶಹಬ್ಟಾಜ್‌ ಅಹ್ಮದ್‌ ರಾಜ್ಯ ಬೌಲರ್‌ಗಳಿಗೆ ಸವಾಲಾಗಬಲ್ಲರು.

Advertisement

ಗುಜರಾತ್‌ಗೆ ಸೌರಾಷ್ಟ್ರ ಎದುರಾಳಿ
ರಾಜ್‌ಕೋಟ್‌: ಇಲ್ಲಿನ ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯಲಿರುವ ಇನ್ನೊಂದು ಸೆಮಿಫೈನಲ್‌ ಸೆಣಸಾಟದಲ್ಲಿ ಆತಿಥೇಯ ಸೌರಾಷ್ಟ್ರ ತಂಡ ಬಲಿಷ್ಠ ಗುಜರಾತ್‌ ತಂಡವನ್ನು ಎದುರಿಸಲಿದೆ. ಗುಜರಾತ್‌ ತಂಡವನ್ನು ಅನುಭವಿ ಪಾರ್ಥಿವ್‌ ಪಟೇಲ್‌ ಮುನ್ನಡೆಸುತ್ತಿದ್ದಾರೆ. ಕಳೆದ ವರ್ಷದ ರನ್ನರ್‌ಅಪ್‌ ಸೌರಾಷ್ಟ್ರ ಜೈದೇವ್‌ ಉನಾದ್ಕತ್‌ ನಾಯಕತ್ವದಲ್ಲಿ ಕಣಕ್ಕಿಳಿಯುತ್ತಿದೆ.

ಸಂಭಾವ್ಯ ತಂಡ
ಕರ್ನಾಟಕ
ಕರುಣ್‌ ನಾಯರ್‌ (ನಾಯಕ), ಆರ್‌.ಸಮರ್ಥ್, ದೇವದತ್ತ ಪಡಿಕ್ಕಲ್‌, ಮನೀಷ್‌ ಪಾಂಡೆ, ಕೆ.ಎಲ್‌.ರಾಹುಲ್‌, ಎಸ್‌.ಶರತ್‌, ಶ್ರೇಯಸ್‌ ಗೋಪಾಲ್‌, ಕೆ.ಗೌತಮ್‌, ಅಭಿಮನ್ಯು ಮಿಥುನ್‌, ಕೆ.ವಿ.ಸಿದ್ಧಾರ್ಥ್, ಪ್ರಸಿದ್ಧ್ ಕೃಷ್ಣ, ಜೆ. ಸುಚಿತ್‌, ಪ್ರತೀಕ್‌ ಜೈನ್‌, ರೋನಿತ್‌ ಮೋರೆ.

ಬಂಗಾಲ
ಅಭಿಮನ್ಯು ಈಶ್ವರನ್‌ (ನಾಯಕ), ಕೌಶಿಕ್‌ ಘೋಷ್‌, ಅಭಿಷೇಕ್‌ ರಾಮನ್‌, ಅರ್ನಬ್‌ ನಂದಿ, ಮನೋಜ್‌ ತಿವಾರಿ, ಅನುಸ್ತಪ್‌ ಮಜುಂದಾರ್‌, ಶ್ರೀವತ್ಸ ಗೋಸ್ವಾಮಿ, ಶಹಾºಜ್‌ ಅಹ್ಮದ್‌, ಮುಕೇಶ್‌ ಕುಮಾರ್‌, ಇಶಾನ್‌ ಪೊರೆಲ್‌, ನಿಕಾಂತ ದಾಸ್‌.

Advertisement

Udayavani is now on Telegram. Click here to join our channel and stay updated with the latest news.

Next