Advertisement

Ranji; ಕರ್ನಾಟಕದ ಸೆಮಿ ಆಸೆಗೆ ಮರುಜೀವ : ವಿದರ್ಭ ನಾಟಕೀಯ ಕುಸಿತ

11:38 PM Feb 26, 2024 | Team Udayavani |

ನಾಗ್ಪುರ: ಪೇಸ್‌ ಬೌಲರ್‌ಗಳಾದ ವಿದ್ವತ್‌ ಕಾವೇರಪ್ಪ, ವಿಜಯ್‌ಕುಮಾರ್‌ ವೈಶಾಖ್‌ ಮತ್ತು ನಾಯಕ ಮಾಯಾಂಕ್‌ ಅಗರ್ವಾಲ್‌ ಸೇರಿಕೊಂಡು ಕರ್ನಾಟಕದ ರಣಜಿ ಸೆಮಿಫೈನಲ್‌ ಆಸೆಗೆ ಮರುಜೀವ ನೀಡಿದ್ದಾರೆ. ಗೆಲುವಿಗೆ 371 ರನ್ನುಗಳ ಕಠಿನ ಗುರಿ ಪಡೆದಿರುವ ಕರ್ನಾಟಕ 4ನೇ ದಿನದಾಟದ ಅಂತ್ಯಕ್ಕೆ ಒಂದು ವಿಕೆಟಿಗೆ 103 ರನ್‌ ಗಳಿಸಿ ಹೋರಾಟ ಜಾರಿಯಲ್ಲಿರಿಸಿದೆ.

Advertisement

ಅಂತಿಮ ದಿನದ ಬ್ಯಾಟಿಂಗ್‌ ಯಶಸ್ಸಿನಲ್ಲಿ ಕರ್ನಾಟಕದ ಯಶಸ್ಸು ಕೂಡ ಅಡಗಿದೆ. ಮೊದಲ ಇನ್ನಿಂಗ್ಸ್‌ ಹಿನ್ನಡೆಗೆ ಸಿಲುಕಿದ ಕಾರಣ ರಾಜ್ಯ ತಂಡದ ಮುನ್ನಡೆಗೆ ಸ್ಪಷ್ಟ ಗೆಲುವೊಂದೇ ಉಳಿದಿರುವ ಏಕೈಕ ಮಾರ್ಗವಾಗಿದೆ. ಪಂದ್ಯ ಡ್ರಾಗೊಂಡರೂ ಅಗರ್ವಾಲ್‌ ಪಡೆ ಹೊರಬೀಳಲಿದೆ. ಅಂತಿಮ ದಿನದಾಟದಲ್ಲಿ ಕರ್ನಾಟಕ 9 ವಿಕೆಟ್‌ಗಳಿಂದ 268 ರನ್‌ ಗಳಿಸಬೇಕಿದೆ.

ದಿನದಾಟದ ಅಂತ್ಯಕ್ಕೆ ಇನ್ನೇನು 3 ಓವರ್‌ ಉಳಿದಿರುವಾಗ 40 ರನ್‌ ಮಾಡಿದ ಆರ್‌. ಸಮರ್ಥ್ ವಿಕೆಟ್‌ ಬಿತ್ತು (69 ಎಸೆತ, 5 ಬೌಂಡರಿ). ಅಗರ್ವಾಲ್‌ 61 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ (77 ಎಸೆತ, 9 ಬೌಂಡರಿ, 1 ಸಿಕ್ಸರ್‌). ಇವರೊಂದಿಗೆ ಕೆ.ವಿ. ಅನೀಶ್‌ ಇದ್ದಾರೆ (1). ಕರ್ನಾಟಕ ಓವರಿಗೆ ಸರಾಸರಿ ಐದರಂತೆ ರನ್‌ ಬಾರಿಸಿದೆ. ಮಂಗಳವಾರವೂ ಇದೇ ವೇಗವನ್ನು ಕಾಯ್ದುಕೊಳ್ಳಬೇಕಿದೆ. ಅಗರ್ವಾಲ್‌-ಸಮರ್ಥ್ ಮೊದಲ ವಿಕೆಟಿಗೆ 101 ರನ್‌ ಪೇರಿಸುವಲ್ಲಿ ಯಶಸ್ವಿಯಾದರು.

ವಿದ್ವತ್‌ಗೆ 6 ವಿಕೆಟ್‌
3ನೇ ದಿನದ ಕೊನೆಯಲ್ಲಿ ನೋಲಾಸ್‌ 50 ರನ್‌ ಹಾಗೂ 224 ರನ್‌ ಮುನ್ನಡೆಯೊಂದಿಗೆ ಸುಸ್ಥಿತಿಯಲ್ಲಿದ್ದ ವಿದರ್ಭ, ಸೋಮವಾರ ನಾಟಕೀಯ ಕುಸಿತಕ್ಕೆ ಸಿಲುಕಿ 196ಕ್ಕೆ ಸರ್ವಪತನ ಕಂಡಿತು. ವಿದ್ವತ್‌ ಕಾವೇರಪ್ಪ (61ಕ್ಕೆ 6) ಹಾಗೂ ವಿಜಯ್‌ಕುಮಾರ್‌ ವೈಶಾಖ್‌ (81ಕ್ಕೆ 4) ಇಬ್ಬರೇ ಸೇರಿಕೊಂಡು ವಿದರ್ಭವನ್ನು ಕಾಡಿದರು.

ವಿದರ್ಭದ ಮೊದಲ ವಿಕೆಟ್‌ 68 ರನ್ನಿಗೆ ಬಿತ್ತು. ಆರಂಭಕಾರ ಧ್ರುವ ಶೋರಿ ಅರ್ಧ ಶತಕವೊಂದನ್ನು ಬಾರಿಸಿದರು (57). ಕರ್ನಾಟಕದ ಮಾಜಿ ಆಟಗಾರ ಕರುಣ್‌ ನಾಯರ್‌ 34 ರನ್‌ ಮಾಡಿದರು. ಶೋರಿ ವಿಕೆಟ್‌ 93 ರನ್‌ ಆದಾಗ ಬಿತ್ತು. ಇಲ್ಲಿಂದ ಮುಂದೆ ವಿದರ್ಭ ಕುಸಿತ ನಿಲ್ಲಲೇ ಇಲ್ಲ. 103 ರನ್‌ ಅಂತರದಲ್ಲಿ 8 ವಿಕೆಟ್‌ ಉರುಳಿತು.

Advertisement

ಸಂಕ್ಷಿಪ್ತ ಸ್ಕೋರ್‌: ವಿದರ್ಭ-460 ಮತ್ತು 196 (ಧ್ರುವ ಶೋರಿ 57, ಕರುಣ್‌ ನಾಯರ್‌ 34, ಆದಿತ್ಯ ಸರ್ವಟೆ 29, ಅಥರ್ವ ತೈಡೆ 25, ವಿದ್ವತ್‌ ಕಾವೇರಪ್ಪ 61ಕ್ಕೆ 6, ವೈಶಾಖ್‌ 81ಕ್ಕೆ 4). ಕರ್ನಾಟಕ-286 ಮತ್ತು ಒಂದು ವಿಕೆಟಿಗೆ 103 (ಅಗರ್ವಾಲ್‌ ಬ್ಯಾಟಿಂಗ್‌ 61, ಆರ್‌. ಸಮರ್ಥ್ 40).

415 ರನ್‌ ಮುನ್ನಡೆಯಲ್ಲಿ ಮುಂಬಯಿ
ಮುಂಬಯಿ: ಬರೋಡ ವಿರುದ್ಧ 415 ರನ್‌ ಮುನ್ನಡೆಯಲ್ಲಿರುವ ಮುಂಬಯಿಯ ಸೆಮಿಫೈನಲ್‌ ಕ್ಷಣಗಣನೆ ಆರಂಭಿಸಿದೆ.36 ರನ್ನುಗಳ ಮೊದಲ ಇನ್ನಿಂಗ್ಸ್‌ ಲೀಡ್‌ ಪಡೆದಿರುವ ಮುಂಬಯಿ, ದ್ವಿತೀಯ ಸರದಿಯಲ್ಲಿ 9 ವಿಕೆಟಿಗೆ 379 ರನ್‌ ಗಳಿಸಿ ಸುಸ್ಥಿತಿಯಲ್ಲಿದೆ. ಹಾರ್ದಿಕ್‌ ತಮೋರೆ 114, ಪೃಥ್ವಿ ಶಾ 87 ಹಾಗೂ ಶಮ್ಸ್‌ ಮುಲಾನಿ 54 ರನ್‌ ಹೊಡೆದರು. ಬರೋಡ ಪರ ಭಾರ್ಗವ್‌ ಭಟ್‌ 142 ರನ್‌ ವೆಚ್ಚದಲ್ಲಿ 7 ವಿಕೆಟ್‌ ಹಾರಿಸಿದ್ದಾರೆ. ಬರೋಡ 348 ರನ್‌ ಮಾಡಿತ್ತು.

ಮಧ್ಯ ಪ್ರದೇಶಕ್ಕೆ 4 ರನ್‌ ರೋಚಕ ಜಯ
ಇಂದೋರ್‌: ಆಂಧ್ರ ಪ್ರದೇಶ ವಿರುದ್ಧ 4 ರನ್ನುಗಳ ರೋಚಕ ಜಯ ಸಾಧಿಸಿದ 2021-22ರ ಚಾಂಪಿಯನ್‌ ಮಧ್ಯ ಪ್ರದೇಶ ರಣಜಿ ಟ್ರೋಫಿ ಸೆಮಿಫೈನಲ್‌ ಪ್ರವೇಶಿಸಿದೆ.
ಗೆಲುವಿಗೆ 170 ರನ್‌ ಗಳಿಸಬೇಕಿದ್ದ ಆಂಧ್ರ 165ಕ್ಕೆ ಆಲೌಟ್‌ ಆಯಿತು. ಅನುಭವ್‌ ಅಗರ್ವಾಲ್‌ 52ಕ್ಕೆ 6 ವಿಕೆಟ್‌ ಉಡಾಯಿಸಿ ಮಧ್ಯ ಪ್ರದೇಶದ ಗೆಲುವಿನ ರೂವಾರಿ ಎನಿಸಿದರು. ಆಂಧ್ರ ಪರ ಹನುಮ ವಿಹಾರಿ 55 ರನ್‌ ಮಾಡಿದರು. ಮಧ್ಯ ಪ್ರದೇಶ ಪ್ರಸಕ್ತ ರಣಜಿ ಋತುವಿನಲ್ಲಿ ಉಪಾಂತ್ಯ ತಲುಪಿದ 2ನೇ ತಂಡ. ಇನ್ನೊಂದು ತಂಡ ತಮಿಳುನಾಡು.

Advertisement

Udayavani is now on Telegram. Click here to join our channel and stay updated with the latest news.

Next