Advertisement

Ranji quarterfinal: ಮುಶೀರ್‌ ಖಾನ್‌ ಅಜೇಯ ದ್ವಿಶತಕ

11:41 PM Feb 24, 2024 | Team Udayavani |

ಮುಂಬಯಿ: ಮುಶೀರ್‌ ಖಾನ್‌ ಅವರ ಅಜೇಯ ದ್ವಿಶತಕದಿಂದಾಗಿ ಮುಂಬಯಿ ತಂಡವು ರಣಜಿ ಕ್ವಾರ್ಟರ್‌ಫೈನಲ್‌ ಪದ್ಯದಲ್ಲಿ ಬರೋಡ ವಿರುದ್ಧ 383 ರನ್‌ ಗಳಿಸಿ ಆಲೌಟಾಗಿದೆ.

Advertisement

ಇದಕ್ಕುತ್ತರವಾಗಿ ಬರೋಡ ತಂಡವು ಎರಡನೇ ದಿನದಾಟದ ಅಂತ್ಯಕ್ಕೆ ಎರಡು ವಿಕೆಟ್‌ ಕಳೆದುಕೊಂಡಿದ್ದು 127 ರನ್‌ ಗಳಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಲು ಬರೋಡ ಇನ್ನೂ 257 ರನ್‌ ಗಳಿಸಬೇಕಾಗಿದೆ.

ಐದು ವಿಕೆಟಿಗೆ 248 ರನ್ನುಗಳಿಂದ ದಿನದಾಟ ಆರಂಭಿಸಿದ ಮುಂಬಯಿ ತಂಡಕ್ಕೆ ಮುಶೀರ್‌ ಆಸರೆಯಾದರು. ಮುಂಬಯಿ ಆಟಗಾರರೆಲ್ಲ ಔಟಾಗುವವರಗೆ ಕ್ರೀಸ್‌ನಲ್ಲಿದ್ದ ಅವರು ದ್ವಿಶತಕ ಬಾರಿಸಿ 203 ರನ್ನುಗಳೊಂದಿಗೆ ಅಜೇಯರಾಗಿ ಉಳಿದರು. 357 ಎಸೆತ ಎದುರಿಸಿದ ಅವರು 18 ಬೌಂಡರಿ ಬಾರಿಸಿದ್ದರು. ಮೊದಲ ದಿನ ತಂಡ ಒಂದು ಹಂತದಲ್ಲಿ 99 ರನ್ನಿಗೆ 4 ವಿಕೆಟ್‌ ಕಳೆದುಕೊಂಡ ಸ್ಥಿತಿಯಲ್ಲಿತ್ತು.

ಬಿಗು ದಾಳಿ ಸಂಘಟಿಸಿದ ಭಾರ್ಗವ್‌ ಭಟ್‌ 112 ರನ್ನಿಗೆ 7 ವಿಕೆಟ್‌ ಕಿತ್ತು ಗಮನ ಸೆಳೆದರು.

ಕರ್ನಾಟಕ ವಿರುದ್ಧ ವಿದರ್ಭ ಸುಭದ್ರ
ನಾಗ್ಪುರ: ಕರ್ನಾಟಕದಿಂದಲೇ ವಲಸೆ ಹೋದ ಕರುಣ್‌ ನಾಯರ್‌ ಅವರ ಅಮೋಘ ಬ್ಯಾಟಿಂಗ್‌ ನೆರವಿನಿಂದ ರಣಜಿ ಕ್ವಾರ್ಟರ್‌ ಫೈನಲ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಆತಿಥೇಯ ವಿದರ್ಭ 460 ರನ್‌ಗಳ ಬೃಹತ್‌ ಮೊತ್ತ ಕಲೆ ಹಾಕಿದೆ. ಇದಕ್ಕೆ ಉತ್ತರವಾಗಿ ಕರ್ನಾಟಕ ದಿನದಾಟದ ಮುಕ್ತಾಯಕ್ಕೆ 2 ವಿಕೆಟಿಗೆ 98 ರನ್‌ ಗಳಿಸಿದೆ. ತಂಡ ಇನ್ನೂ 362 ರನ್‌ ಹಿನ್ನಡೆಯಲ್ಲಿದೆ.

Advertisement

ಪಂದ್ಯದ ಮೊದಲ ದಿನ ವಿದರ್ಭ 3 ವಿಕೆಟ್‌ಗೆ 261 ರನ್‌ ಗಳಿಸಿತ್ತು. ಅಥರ್ವ ತಾಯಿಡೆ (109) ಹಾಗೂ ಯಶ್‌ ರಾಥೋಡ್‌ (93) ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ಸದೃಢ ಸ್ಥಿತಿಗೆ ತಲುಪಿತ್ತು. 2ನೇ ದಿನ ಆಟ ಮುಂದುವರಿಸಿದ ವಿದರ್ಭ ಇನ್ನಿಂಗÕನ್ನು ಕರುಣ್‌ ಆಧರಿಸಿದರು. ಒಂದೆಡೆ ವಿಕೆಟ್‌ ಬೀಳುತ್ತಿದ್ದರೂ, ನಾಯರ್‌ ತಾಳ್ಮೆಯ ಆಟವಾಡಿದರು. ವಿದ್ವತ್‌ ಕಾವೇರಪ್ಪಗೆ ಬೌಲ್ಡಾಗುವ ಮುನ್ನ 90 ರನ್‌ ಗಳಿಸಿದ್ದೇ ಅಲ್ಲದೆ ತಂಡವನ್ನು ಬೃಹತ್‌ ಮೊತ್ತದತ್ತ ಕೊಂಡೊಯ್ದರು. ಬಾಲಂಗೋಚಿಗಳ ಉಪಯುಕ್ತ ಕಾಣಿಕೆಗಳ ನೆರವಿನಿಂದ ವಿದರ್ಭ 460 ರನ್‌ ಗಳಿಸಿತು. ಕರ್ನಾಟಕ ಪರ ಮಧ್ಯಮ ವೇಗಿ ವಿದ್ವತ್‌ ಕಾವೇರಪ್ಪ 4 ವಿಕೆಟ್‌ ಕಿತ್ತರು.

ಇದಕ್ಕೆ ಉತ್ತರವಾಗಿ ಕರ್ನಾಟಕ ಆರಂಭದಲ್ಲಿಯೇ ಆಘಾತ ಅನುಭವಿಸಿತು. ನಾಯಕ ಮಾಯಾಂಕ್‌ ಅಗರ್ವಾಲ್‌ 2ನೇ ಓವರಿನಲ್ಲೇ ನಿರ್ಗಮಿಸಿದರು. ಮಧ್ಯಮ ವೇಗಿ ಆದಿತ್ಯ ಠಾಕ್ರೆ ಎಸೆತವನ್ನು ಕೆಣಕಿ ಕೀಪರ್‌ಗೆ ಕ್ಯಾಚಿತ್ತು ಶೂನ್ಯಕ್ಕೆ ಔಟಾದರು. ಆರ್‌.ಸಮರ್ಥ್ ಅವರು ಕೆ.ವಿ.ಅನೀಶ್‌ ಜತೆಗೂಡಿ ಇನ್ನಿಂಗ್ಸ್‌ ಕಟ್ಟತೊಡಗಿದರು. 34 ರನ್‌ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಅನೀಶ್‌ ವೇಗಿ ಯಶ್‌ ಠಾಕೂರ್‌ ಎಸೆತವೊಂದನ್ನು ಹೊಡೆಯುವ ಯತ್ನದಲ್ಲಿ ಕೀಪರ್‌ಗೆ ಕ್ಯಾಚ್‌ ಒಪ್ಪಿಸಿ ನಿರ್ಗಮಿಸಿದರು. 2ನೇ ದಿನದಂತ್ಯಕ್ಕೆ ಸಮರ್ಥ್ 43 ಹಾಗೂ ನಿಕಿನ್‌ ಜೋಸ್‌ 20 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದಿದ್ದರು.

ಸಂಕ್ಷಿಪ್ತ ಸ್ಕೋರ್‌: ವಿದರ್ಭ ಮೊದಲ ಇನ್ನಿಂಗ್ಸ್‌: 460 (ಅಥರ್ವ 109, ಯಶ್‌ 93, ಕರುಣ್‌ 90, ವಿದ್ವತ್‌ 99ಕ್ಕೆ 4) ಕರ್ನಾಟಕ 2 ವಿಕೆಟಿಗೆ 98 (ಸಮರ್ಥ್ 43 ಬ್ಯಾಟಿಂಗ್‌, ಅನೀಶ್‌ 34, ನಿಕಿನ್‌ ಜೋಸ್‌ 20 ಬ್ಯಾಟಿಂಗ್‌).

Advertisement

Udayavani is now on Telegram. Click here to join our channel and stay updated with the latest news.

Next