ಬೆಂಗಳೂರು: ರವಿಕುಮಾರ್ ಸಮರ್ಥ್ ಅವರ ಅಮೋಘ ಶತಕ ಸಾಹಸದಿಂದ ಪುದುಚೇರಿ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕ 134 ರನ್ನುಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಸಂಪಾದಿಸುವಲ್ಲಿ ಯಶಸ್ವಿಯಾಗಿದೆ. ದ್ವಿತೀಯ ಇನ್ನಿಂಗ್ಸ್ ಆರಂಭಿಸಿರುವ ಪುದುಚೇರಿ 58ಕ್ಕೆ 3 ವಿಕೆಟ್ ಕಳೆದುಕೊಂಡಿದ್ದು, ಇನ್ನೂ 76 ರನ್ ಹಿನ್ನಡೆಯಲ್ಲಿದೆ.
ಎಡಗೈ ಸ್ಪಿನ್ನರ್ ಅಂಕಿತ್ ಶರ್ಮ 6 ವಿಕೆಟ್ ಉರುಳಿಸಿ ಕರ್ನಾಟಕವನ್ನು ಕಾಡಿದರು. ಆದರೂ ಈಗಿನ ಸ್ಥಿತಿ ಯಲ್ಲಿ ಈ ಪಂದ್ಯ ಮೂರೇ ದಿನ ಗಳಲ್ಲಿ ಮುಗಿಯುವ ಸಾಧ್ಯತೆ ಇದ್ದು, ಕರ್ನಾಟಕ ಸ್ಪಷ್ಟ ಗೆಲುವು ಸಾಧಿಸು ವುದರಲ್ಲಿ ಅನುಮಾನ ಉಳಿದಿಲ್ಲ.
ದ್ವಿತೀಯ ದಿನದಾಟದಲ್ಲಿ ತೀವ್ರ ಕುಸಿತ ಕಂಡ ಕರ್ನಾಟಕ, ಆರ್. ಸಮರ್ಥ್ ಸಾಹಸದಿಂದ ಮುನ್ನೂರರ ಗಡಿ ದಾಟುವಲ್ಲಿ ಯಶಸ್ವಿಯಾಯಿತು. 59 ರನ್ ಮಾಡಿ ಬ್ಯಾಟಿಂಗ್ ಕಾಯ್ದು ಕೊಂಡಿದ್ದ ಸಮರ್ಥ್ ಇದೇ ಲಯದಲ್ಲಿ ಸಾಗಿ 137 ರನ್ ಕೊಡುಗೆ ಸಲ್ಲಿಸಿದರು. 242 ಎಸೆತಗಳ ಈ ಅಮೋಘ ಆಟದಲ್ಲಿ 17 ಬೌಂಡರಿ ಒಳಗೊಂಡಿತ್ತು.
ಒಂದಕ್ಕೆ 111 ರನ್ ಮಾಡಿದಲ್ಲಿಂದ ಆಟ ಮುಂದುವರಿಸಿದ ಕರ್ನಾಟಕಕ್ಕೆ ಪುದುಚೇರಿ ಬೌಲರ್ ಕಂಟಕವಾಗಿ ಕಾಡಿದರು. ರೋನಿತ್ ಮೋರೆ ಸೊನ್ನೆಗೆ ವಾಪಸಾದರೆ, ವಿಶಾಲ್ ಓನತ್ ನಾಲ್ಕೇ ರನ್ನಿಗೆ ಆಟ ಮುಗಿಸಿದರು. ಸಮರ್ಥ್ ಒಂದೆಡೆ ಕ್ರೀಸ್ ಆಕ್ರಮಿಸಿಕೊಂಡು ಪರಿಸ್ಥಿತಿಯನ್ನು ನಿಯಂತ್ರಿಸತೊಡಗಿ ದರು. ಅವರಿಗೆ ನಿಕಿನ್ ಜೋಸ್ (30) ಅವರಿಂದ ಒಂದಿಷ್ಟು ಬೆಂಬಲ ಲಭಿಸಿತು. 4ನೇ ವಿಕೆಟಿಗೆ 63 ರನ್ ಒಟ್ಟುಗೂಡಿತು.
ಸಮರ್ಥ್ 5ನೇ ವಿಕೆಟ್ ರೂಪದಲ್ಲಿ ಪೆವಿಲಿಯನ್ ಸೇರುವಾಗ ಕರ್ನಾಟಕ 249 ರನ್ ಗಳಿಸಿತ್ತು. 55 ರನ್ ಅಂತರದಲ್ಲಿ ಕೊನೆಯ 5 ವಿಕೆಟ್‌ಗಳನ್ನು ಕಳೆದುಕೊಂಡಿತು. 6ನೇ ಕ್ರಮಾಂಕದಲ್ಲಿ ಆಡಲಿಳಿದ ಮನೀಷ್ ಪಾಂಡೆ 45 ರನ್ ಮಾಡಿದರು.
ದ್ವಿತೀಯ ಸರದಿಯಲ್ಲಿ ಪುದುಚೇರಿ ಕುಸಿತ ಕಂಡಿದೆ. ಮೋರೆ, ವೈಶಾಖ್, ಗೌತಮ್ ತಲಾ ಒಂದು ವಿಕೆಟ್ ಉರುಳಿಸಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಪುದುಚೇರಿ-170 ಮತ್ತು 3 ವಿಕೆಟಿಗೆ 58 (ಜಯ್ ಪಾಂಡೆ ಬ್ಯಾಟಿಂಗ್, ನಯನ್ ಶ್ಯಾಮ್ 24, ಮೋರೆ 9ಕ್ಕೆ 1, ವೈಶಾಖ್ 13ಕ್ಕೆ 1, ಗೌತಮ್ 21ಕ್ಕೆ 1). ಕರ್ನಾಟಕ-304 (ಸಮರ್ಥ್ 137, ಅಗರ್ವಾಲ್ 51, ಪಾಂಡೆ 45, ಜೋಸ್ 30, ಅಂಕಿತ್ ಶರ್ಮ 60ಕ್ಕೆ 6, ವಿ. ಮಾರಿಮುತ್ತು 32ಕ್ಕೆ 2).