Advertisement

Ranji:ಈ ಬಾರಿ ಕರ್ನಾಟಕದ ಕನಸು ಭಗ್ನ?

11:33 PM Feb 25, 2024 | Team Udayavani |

ನಾಗ್ಪುರ: ಇಲ್ಲಿ ನಡೆಯುತ್ತಿರುವ ರಣಜಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಕರ್ನಾಟಕ ಸೋಲಿನತ್ತ ಧಾವಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 286 ರನ್ನಿಗೆ ಆಲೌಟಾಗಿ, 174 ರನ್‌ ಹಿನ್ನಡೆ ಅನುಭವಿಸಿರುವ ಕರ್ನಾಟಕ ಉಳಿದಿರುವ ಎರಡು ದಿನಗಳಲ್ಲಿ ಏನು ಪವಾಡ ಮಾಡುತ್ತದೆ ಎನ್ನುವುದನ್ನು ಕಾದು ನೋಡಬೇಕು. ಇನ್ನೊಂದು ಕಡೆ ಆತಿಥೇಯ ವಿದರ್ಭ ಎರಡನೇ ಇನ್ನಿಂಗ್ಸ್‌ ಆರಂಭಿಸಿದ್ದು ವಿಕೆಟ್‌ ನಷ್ಟವಿಲ್ಲದೇ 50 ರನ್‌ ಗಳಿಸಿದೆ.

Advertisement

ಈಗಾಗಲೇ 224 ರನ್‌ ಮುನ್ನಡೆಯಲ್ಲಿರುವ ವಿದರ್ಭವನ್ನು, ಒಟ್ಟಾರೆ 300ರೊಳಗೆ ನಿಯಂತ್ರಿಸಿ, ಆ ಮೊತ್ತವನ್ನು ಚೇಸ್‌ ಮಾಡುವ ಗುರಿ ಹಾಕಿಕೊಳ್ಳುವುದೊಂದೇ ರಾಜ್ಯಕ್ಕಿರುವ ದಾರಿ. ಇದೂ ಅತ್ಯಂತ ಕಠಿನ ಸಾಧ್ಯವಾದ ಕೆಲಸ. ಒಂದು ವೇಳೆ ಇದರಲ್ಲಿ ವಿಫ‌ಲವಾದರೆ ಸೋಲು ಅಥವಾ ಡ್ರಾವನ್ನು ತಪ್ಪಿಸುವುದು ಸಾಧ್ಯವೇ ಇಲ್ಲ.

ಇಲ್ಲಿನ ವಿದರ್ಭ ಕ್ರಿಕೆಟ್‌ ಅಸೋಸಿಯೇಶನ್‌ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ವಿದರ್ಭ ಮೊದಲನೇ ಇನ್ನಿಂಗ್ಸ್‌ನಲ್ಲಿ 460 ರನ್‌ ಗಳಿಸಿತ್ತು. ಇದಕ್ಕೆ ಪ್ರತಿಯಾಗಿ ಇನ್ನಿಂಗ್ಸ್‌ ಆರಂಭಿಸಿದ್ದ ಕರ್ನಾಟಕ, ಶನಿವಾರ 2 ವಿಕೆಟ್‌ ನಷ್ಟಕ್ಕೆ 98 ರನ್‌ ಗಳಿಸಿತ್ತು. ರವಿವಾರ ಆಟ ಮುಂದುವರಿಸಿದ ಕರ್ನಾಟಕ ದಿಢೀರನೇ ಕುಸಿದು 286 ರನ್ನಿಗೆ ಆಲೌಟಾಯಿತು. ತಂಡದ ಪರ ನಿಕಿನ್‌ ಜೋಸ್‌ 82 ರನ್‌ ಗಳಿಸಿದರೆ, ಆರ್‌.ಸಮರ್ಥ್ 59 ರನ್‌ ಬಾರಿಸಿದರು. ಅನೀಶ್‌ 34 ರನ್‌ ಗಳಿಸಿದರು. ವಿದರ್ಭ ಪರ ಆದಿತ್ಯ ಸರ್ವಟೆ, ಯಶ್‌ ಠಾಕೂರ್‌ ತಲಾ 3 ವಿಕೆಟ್‌ ಪಡೆದರು.

ನಾಯಕ ಮಾಯಾಂಕ್‌ ಅಗರ್ವಾಲ್‌ ಸೊನ್ನೆ ಸುತ್ತಿದರು. ಮನೀಶ್‌ ಪಾಂಡೆ 15, ಹಾರ್ದಿಕ್‌ ರಾಜ್‌ 23, ಎಸ್‌. ಶರತ್‌ 29, ವಿ. ವೈಶಾಕ್‌ 23 ರನ್‌ ಗಳಿಸಿ ಔಟಾದರು. ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿರುವ ವಿದರ್ಭ ಪರ ಅಥರ್ವ ತಾಯಿಡೆ 21, ಧ್ರುವ ಶೋರೆ 29 ರನ್‌ ಬಾರಿಸಿ ಕ್ರೀಸ್‌ನಲ್ಲಿ ಉಳಿದಿದ್ದಾರೆ. 4ನೇ ದಿನದಾಟದ ವೇಳೆ ವಿದರ್ಭ ಇನ್ನೂ ಮುನ್ನಡೆ ಹೆಚ್ಚಿಸಿಕೊಳ್ಳುವ ಸಾಧ್ಯತೆಯಿದೆ. ಪಂದ್ಯವನ್ನು ಉಳಿಸಿಕೊಳ್ಳುವ ನೆಲೆ ಯಲ್ಲಿ ಕರ್ನಾಟಕದ ಮುಂದೆ ದೊಡ್ಡ ಸವಾಲು ಇದೆ.

ಸಂಕ್ಷಿಪ್ತ ಸ್ಕೋರ್‌
ವಿದರ್ಭ 460 (ಅಥರ್ವ ತಾಯಿಡೆ 109, ಯಶ್‌ ರಾಥೋಡ್‌ 93, ಕರುಣ್‌ ನಾಯರ್‌ 90, ಕೆ.ವಿದ್ವತ್‌ 99ಕ್ಕೆ 4, ಹಾರ್ದಿಕ್‌ ರಾಜ್‌ 89ಕ್ಕೆ 2) ಕರ್ನಾಟಕ 286 (ಆರ್‌.ಸಮರ್ಥ್ 59, ಕೆ.ವಿ.ಅನೀಶ್‌ 34, ನಿಕಿನ್‌ ಜೋಸ್‌ 82, ಉಮೇಶ್‌ 54ಕ್ಕೆ 2, ಆದಿತ್ಯ ಸರ್ವಟೆ 50ಕ್ಕೆ 3, ಯಶ್‌ ಠಾಕೂರ್‌ 48ಕ್ಕೆ 3). ವಿದರ್ಭ ದ್ವಿತೀಯ ಇನ್ನಿಂಗ್ಸ್‌ ವಿಕೆಟ್‌ ನಷ್ಟವಿಲ್ಲದೇ 50.

Advertisement

ಮುಂಬಯಿಗೆ ಅಲ್ಪ  ಮುನ್ನಡೆ
ಮುಂಬಯಿ: ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ದ್ವಿತೀಯ ಕ್ವಾರ್ಟರ್‌ ಪೈನಲ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಬರೋಡ ವಿರುದ್ಧ ಮುಂಬಯಿ 36 ರನ್‌ಗಳ ಅಲ್ಪ ಮುನ್ನಡೆ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಮುಂಬಯಿ 384 ರನ್‌ ಗಳಿಸಿದ್ದರೆ, ಬರೋಡ 348 ರನ್ನಿಗೆ ಆಲೌಟಾಗಿ ಹಿನ್ನಡೆ ಅನುಭವಿಸಿತ್ತು. ರವಿವಾರ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ್ದ ಮುಂಬಯಿ ದಿನದಂತ್ಯಕ್ಕೆ 1 ವಿಕೆಟ್‌ ಕಳೆದುಕೊಂಡು 21 ರನ್‌ ಗಳಿಸಿದೆ.

ತಮಿಳುನಾಡು ಸೆಮಿಫೈನಲಿಗೆ
ಕೊಯಮತ್ತೂರಿನಲ್ಲಿ ರವಿವಾರ ಮುಕ್ತಾಯಗೊಂಡಿರುವ ರಣಜಿ ಟ್ರೋಫಿ ಮೂರನೇ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ ಇನ್ನಿಂಗ್ಸ್‌ ಸಹಿತ 33 ರನ್‌ಗಳ ಗೆಲುವು ಸಾಧಿಸಿರುವ ತಮಿಳುನಾಡು ತಂಡ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಎರಡು ಇನ್ನಿಂಗ್ಸ್‌ಗಳಲ್ಲಿ ಸೌರಾಷ್ಟ್ರ ಕ್ರಮವಾಗಿ 183 ಮತ್ತು 122 ರನ್‌ ಬಾರಿಸಿದರೆ ತಮಿಳುನಾಡು ಮೊದಲ ಇನ್ನಿಂಗ್ಸ್‌ನಲ್ಲಿ 338 ರನ್‌ ಗಳಿಸಿತ್ತು.

ಗೆಲುವಿನ ಸನಿಹದಲ್ಲಿ ಆಂಧ್ರಪ್ರದೇಶ
ಇಂದೋರ್‌ನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ನಾಲ್ಕನೇ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಮಧ್ಯಪ್ರದೇಶದ ವಿರುದ್ಧ ಆಂಧ್ರಪ್ರದೇಶದ ಗೆಲುವಿಗೆ 75 ರನ್‌ ಬೇಕಾಗಿದೆ. ಮಧ್ಯಪ್ರದೇಶ ಕ್ರಮವಾಗಿ 234, 107 ರನ್‌ ಬಾರಿಸಿದ್ದರೆ ಇದಕ್ಕೆ ಪ್ರತ್ಯುತ್ತರವಾಗಿ ಆಂಧ್ರಪ್ರದೇಶ ಮೊದಲ ಇನ್ನಿಂಗ್ಸ್‌ನಲ್ಲಿ 172 ರನ್‌ ಬಾರಿಸಿತ್ತು. ರವಿವಾರ ಮೂರನೇ ದಿನದಂತ್ಯಕ್ಕೆ ದ್ವಿತೀಯ ಇನ್ನಿಂಗ್ಸ್‌ ಆಡುತ್ತಿದ್ದ ಆಂಧ್ರಪ್ರದೇಶ 44 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 95 ರನ್‌ ಗಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next