ರಾಜ್‌ಕೋಟ್: ಮಹಾರಾಷ್ಟ್ರ ವಿರುದ್ಧದ ಹಿಂದಿನ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿದ ಕರ್ನಾಟಕ ತಂಡ ರಣಜಿ ಋತುವಿನಲ್ಲಿ ಗೆಲುವಿನ ಓಟ ಮುಂದುವರಿಸುವ ಉತ್ಸಾಹದಲ್ಲಿದೆ.
ಗುರುವಾರದಿಂದ ಆತಿಥೇಯ ಸೌರಾಷ್ಟ್ರವನ್ನು ರಾಜ್‌ಕೋಟ್‌ನಲ್ಲಿ ಎದುರಿಸಲಿರುವ ರಾಜ್ಯ ತಂಡ, ಭರವಸೆಯ ಕರುಣ್ ನಾಯರ್, ರವಿಕುಮಾರ್ ಸಮರ್ಥ್ ಪುನರಾಗಮನದಿಂದ ಹೆಚ್ಚು ಆತ್ಮವಿಶ್ವಾಸದಲ್ಲಿದೆ.
ಭಾರತ “ಎ’ ತಂಡದೊಂದಿಗೆ ನ್ಯೂಜಿಲ್ಯಾಂಡ್‌ಗೆ ತೆರಳಿದ್ದ ಕರುಣ್ ನಾಯರ್ ಹಾಗೂ ರವಿಕುಮಾರ್ ಸಮರ್ಥ್ ಸೌರಾಷ್ಟ್ರ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಇದರಿಂದ ತಂಡದ ಬಲ ದುಪ್ಪಟ್ಟಾಗಿದೆ. ಇದುವರೆಗೆ 3 ಪಂದ್ಯಗಳನ್ನು ಆಡಿರುವ ಕರ್ನಾಟಕ ತಂಡ ವಿದರ್ಭ ಮತ್ತು ಮುಂಬಯಿ ವಿರುದ್ಧ ಡ್ರಾ ಮಾಡಿಕೊಂಡಿತ್ತು. ಮೈಸೂರಿನಲ್ಲಿ ಮಹಾರಾಷ್ಟ್ರ ವಿರುದ್ಧ 7 ವಿಕೆಟ್‌ಗಳ ಗೆಲುವು ಸಾಧಿಸಿತ್ತು.
ವಿದರ್ಭ ವಿರುದ್ಧದ ಪಂದ್ಯಕ್ಕೆ ಹೋಲಿಸಿದರೆ ಉಳಿದೆರಡು ಪಂದ್ಯಗಳಲ್ಲಿ ರಾಜ್ಯ ತಂಡ ಉತ್ತಮ ಆಟವನ್ನೇ ಆಡಿದೆ. ಇವು ತವರಿನಲ್ಲಿ ನಡೆದ ಪಂದ್ಯಗಳಾದ್ದರಿಂದ ಈ ಫಲಿತಾಂಶ ಸಾಧ್ಯವಾಗಿದೆ ಎನ್ನುವುದು ಸಹಜ ಊಹೆ. ಆದರೆ ಇದನ್ನೂ ಮೀರಿ ರಾಜ್ಯ ತಂಡಕ್ಕೆ ಗೆಲ್ಲುವ ಸಾಮರ್ಥ್ಯವಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.
ಡಿ. ನಿಶ್ಚಲ್, ಬಿ.ಆರ್. ಶರತ್, ದೇವದತ್ತ ಪಡಿಕ್ಕಲ್ ಬ್ಯಾಟಿಂಗಿನಲ್ಲಿ ಲಯದಲ್ಲಿದ್ದಾರೆ. ತಂಡದ ಉಪನಾಯಕ ಶ್ರೇಯಸ್ ಗೋಪಾಲ್ ಬೌಲಿಂಗ್, ಬ್ಯಾಟಿಂಗ್ ಎರಡರಲ್ಲೂ ಕ್ಲಿಕ್ ಆಗುತ್ತಿದ್ದಾರೆ. ಜೆ. ಸುಚಿತ್ ತಮ್ಮ ಎಡಗೈ ಆಫ್ ಸ್ಪಿನ್ ಮೂಲಕ ಗಮನ ಸೆಳೆದಿದ್ದಾರೆ. ಕೆ. ಸಿದ್ಧಾರ್ಥ್ ಶತಕ ಬಾರಿಸಿ ತಮ್ಮ ಸಾಮರ್ಥ್ಯ ಸಾಬೀತು ಮಾಡಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಅನುಭವಿ ವೇಗಿಗಳಾದ ವಿನಯ್ ಕುಮಾರ್, ಅಭಿಮನ್ಯು ಮಿಥುನ್ ಮೇಲೆ ಭಾರೀ ನಿರೀಕ್ಷೆ ಇಡಲಾಗಿದೆ.
ರವೀಂದ್ರ ಜಡೇಜ ಗೈರು
ಸೌರಾಷ್ಟ್ರ ಈಗಾಗಲೇ 4 ಪಂದ್ಯಗಳನ್ನು ಆಡಿದೆ. ಮೂರನ್ನು ಡ್ರಾ ಮಾಡಿಕೊಂಡಿದ್ದು, ರೈಲ್ವೇಸ್ ವಿರುದ್ಧ 3 ವಿಕೆಟ್ ಗೆಲುವು ಸಾಧಿಸಿದೆ. ಸೌರಾಷ್ಟ್ರದ ಈ ಸಾಧನೆಯಲ್ಲಿ ಖ್ಯಾತ ಆಟಗಾರ ರವೀಂದ್ರ ಜಡೇಜ ಪಾತ್ರ ಮಹತ್ವದ್ದಾಗಿತ್ತು. ಆದರೆ ಅವರೀಗ ಭಾರತ ತಂಡದಲ್ಲಿರುವುದರಿಂದ ಸೌರಾಷ್ಟ್ರ ಅಷ್ಟರ ಮಟ್ಟಿಗೆ ಬಲಹೀನವಾಗಿದೆ. ಇದರ ಲಾಭವನ್ನು ಕರ್ನಾಟಕ ಪಡೆಯಬೇಕಿದೆ.