Advertisement

‘ಗ್ರೀನ್‌ ಕಾರ್ಪೆಟ್’ಯೋಜನೆಯಲ್ಲಿ ರಾಣಿಪುರಂ

04:20 PM Nov 03, 2018 | |

ಕಾಸರಗೋಡು: ಚಾರಣಿಗರ ಸ್ವರ್ಗ ಎಂದೇ ಪರಿಗಣಿಸಲ್ಪಟ್ಟಿರುವ ರಾಣಿಪುರಂ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ಕೇಂದ್ರವಾಗಿರುವ ಬೇಕಲ ಕೋಟೆ ‘ಗ್ರೀನ್‌ ಕಾರ್ಪೆಟ್ ’ ಯೋಜನೆಯಲ್ಲಿ ಸ್ಥಾನ ಪಡೆದಿದೆ. ಪ್ರವಾಸಿಗರನ್ನು ಕೈಬೀಸಿ ಕರೆಯುವ ಉದ್ದೇಶದಿಂದ ಜಿಲ್ಲೆಯ ಪ್ರವಾಸಿ ಕೇಂದ್ರಗಳನ್ನು ಸಜ್ಜುಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಇದರಂತೆ ಪ್ರವಾಸಿ ಕೇಂದ್ರಗಳಲ್ಲಿ ಶುಚಿತ್ವ ಪ್ರಕ್ರಿಯೆ ಆರಂಭಿಸಲಾಯಿತು.

Advertisement

ಚಾರಣಿಗರ ಪ್ರಿಯವಾದ ರಾಣಿಪುರಂ ಮತ್ತು ಐತಿಹಾಸಿಕ ಹಿನ್ನೆಲೆಯುಳ್ಳ ಬೇಕಲ ಕೋಟೆಯನ್ನು ಶುಚಿತ್ವ ಕೇಂದ್ರಗಳನ್ನಾಗಿ ಪರಿವರ್ತಿಸಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. ಇದರಂತೆ ಪ್ರಥಮ ಹಂತದಲ್ಲಿ ಶುಚೀಕರಣ ಯಜ್ಞ ರಾಣಿಪುರಂ ಪ್ರವಾಸಿ ಕೇಂದ್ರದಲ್ಲಿ ಆರಂಭಗೊಂಡಿತು. ಪನತ್ತಡಿ ಪಂಚಾಯತ್‌ ಅಧ್ಯಕ್ಷ ಪಿ.ಜಿ.ಮೋಹನನ್‌ ಶುಚಿತ್ವ ಪ್ರಕ್ರಿಯೆ ಯೋಜನೆಗೆ ಚಾಲನೆ ನೀಡಿದರು.

ಪ್ರವಾಸೋದ್ಯಮ ಇಲಾಖೆಯ ಡೆಪ್ಯೂಟಿ ಡೈರೆಕ್ಟರ್‌ ಪಿ.ಎ.ಸುಬೈರ್‌ ಕುಟ್ಟಿ, ಪಂಚಾಯತ್‌ ಸ್ಥಾಯೀ ಸಮಿತಿ ಅಧ್ಯಕ್ಷ ಎಂ.ಸಿ.ಮಾಧವನ್‌, ಪ್ರವಾಸೋದ್ಯಮ ಇನ್ಫಾರ್ಮೇಶನ್‌ ಅಧಿಕಾರಿ ಬಾಬು ಮಹೇಂದ್ರನ್‌, ಡಿಟಿಪಿಸಿ ಕಾರ್ಯದರ್ಶಿ ಬಿಜು ರಾಘವನ್‌, ಮಲನಾಡು ಮಾರ್ಕೇಟಿಂಗ್‌ ಸಹಕಾರಿ ಸೊಸೈಟಿ ಅಧ್ಯಕ್ಷ ಎಂ.ವಿ.ಭಾಸ್ಕರನ್‌, ಅರಣ್ಯ ಸಂರಕ್ಷಣೆ ಸಮಿತಿ ಅಧ್ಯಕ್ಷ ಎಸ್‌. ಮಧುಸೂದನನ್‌ ಮೊದಲಾದವರು ಮಾತನಾಡಿದರು. 

ಕ್ಲೀನ್‌ ಡೆಸ್ಟಿನೇಶನ್‌ ನೌಕರರು, ರಾಣಿಪುರಂ ಅರಣ್ಯ ಸಂರಕ್ಷಣೆ ಸಮಿತಿ ಕಾರ್ಯಕರ್ತರು ರಾಣಿಪುರಂ ಅರಣ್ಯ ಪ್ರದೇಶದ ಪಂದಿಕ್ಕಾಲ್‌ನಿಂದ ಪ್ರವಾಸಿ ಕೇಂದ್ರದ ವರೆಗೆ ಶುಚೀಕರಣ ನಡೆಸಿದರು. ಬೇಕಲ ಬೀಚ್‌, ಬೇಕಲ ಕೋಟೆ ಮೊದಲಾದೆಡೆ ಮುಂದಿನ ದಿನಗಳಲ್ಲಿ ಶುಚಿತ್ವ ನಡೆಯಲಿದೆ. ಜಿಲ್ಲೆಗೆ ಪ್ರವಾಸಿಗರನ್ನು ಕೈಬೀಸಿ ಕರೆಯುವ ಉದ್ದೇಶದಿಂದ ಕೇಂದ್ರಗಳನ್ನು ಸಜ್ಜುಗೊಳಿಸಲಾಗುವುದು.

ಶುಚಿತ್ವಕ್ಕೆ ಆದ್ಯತೆ 
ಕೇರಳದ ಪ್ರವಾಸಿಗರು ತಲುಪುವ ಅಕ್ಟೋಬರ್‌ ತಿಂಗಳಿಂದ ಮೇ ತಿಂಗಳ ವರೆಗಿನ ಎಂಟು ತಿಂಗಳಲ್ಲಿ ಗ್ರೀನ್‌ ಕಾರ್ಪೆಟ್  ಯೋಜನೆಯಲ್ಲಿ ಜಿಲ್ಲೆಯ ಪ್ರವಾಸಿ ಕೇಂದ್ರಗಳು ಶುಚಿತ್ವದಲ್ಲಿರುವಂತೆ ನೋಡಿ ಕೊಳ್ಳಲಾಗುವುದು. ಪ್ರಸ್ತುತ ಬೇಕಲ ಕೋಟೆ ಮತ್ತು ಚಂದ್ರಗಿರಿ ಕೋಟೆ ಯಲ್ಲಿ ರುವ ಕ್ಲೀನ್‌ ಡೆಸ್ಟಿನೇಶನ್‌ ನೌಕರರ ಸೇವೆ ಪಡೆಯಲಾಗುವುದು.

Advertisement

ಸಾಕಷ್ಟು ಸೌಲಭ್ಯ
ಕಾಸರಗೋಡು ಜಿಲ್ಲೆಯಲ್ಲಿ ಸಾಕಷ್ಟು ಪ್ರವಾಸಿ ಕೇಂದ್ರಗಳಿದ್ದು, ಸರಿಯಾಗಿ ನಿರ್ವಹಣೆ ಇಲ್ಲದೆ ಅವುಗಳನ್ನು ವೀಕ್ಷಿಸಲು ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುತ್ತಿದೆ. ಪ್ರವಾಸಿಗರನ್ನು ಹೆಚ್ಚೆಚ್ಚು ಆಕರ್ಷಿಸಲು ಜಿಲ್ಲೆಯ ಪ್ರವಾಸಿ ಕೇಂದ್ರಗಳಲ್ಲಿ ಸಾಕಷ್ಟು ಸೌಲಭ್ಯ ಕಲ್ಪಿಸಲಾಗುವುದು. ಅದರಂಗವಾಗಿ ಎಲ್ಲಾ ಕೇಂದ್ರಗಳಲ್ಲಿ ಶುಚಿತ್ವವನ್ನು ಕಾಪಾಡುವ ಉದ್ದೇಶದಿಂದ ಯೋಜನೆಯನ್ನು ಜಾರಿಗೊಳಿಸಲಾಗಿದೆ.
 – ಪಿ.ಐ.ಸುಬೈರ್‌ ಕುಟ್ಟಿ‌,
 ಡೆಪ್ಯೂಟಿ ಡೈರೆಕ್ಟರ್‌, ಪ್ರವಾಸೋದ್ಯಮ ಇಲಾಖೆ. 

Advertisement

Udayavani is now on Telegram. Click here to join our channel and stay updated with the latest news.

Next