ರಾಣಿಬೆನ್ನೂರ: ಮನೆಯ ಒಲೆ ಚೆನ್ನಾಗಿದ್ದರೆ ಕುಟುಂಬವೆಲ್ಲ ಆರೋಗ್ಯವಾಗಿರುತ್ತದೆ. ಪುರುಷರು ಮನೆಯೊಡತಿಯನ್ನು ಹೌಸ್‌ವೈಫ್ ಎಂದು ಕರೆಯದೆ ವ್ಯವಸ್ಥಾಪಕಿ ಎಂದು ಸಂಬೋಧಿ ಸುವುದು ಸೂಕ್ತ ಎಂದು ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೆ.ಲೀಲಾವತಿ ಹೇಳಿದರು.
ನಗರದ ಪ್ರಾಥಮಿಕ ಶಿಕ್ಷಕರ ಸಂಘದ ಸಭಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ಜಿಪಂ, ತಾಪಂ, ನಗರಸಭಾ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಆಶ್ರಯದಲ್ಲಿ ಅಕ್ಷರ ದಾಸೋಹದ ತಾಲೂಕು ಅಡುಗೆ ಸಿಬ್ಬಂದಿಗೆ ತರಬೇತಿ ಕಾರ್ಯಗಾರ ಮತ್ತು ವ್ಯವಸ್ಥಿತ ಮತದಾರರ ಜಾಗೃತಿ ಮತ್ತು ಮತದಾನದಲ್ಲಿ ಭಾಗವಹಿಸುವಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
64 ವಿದ್ಯೆಗಳಲ್ಲಿ ಪಾಕಶಾಸ್ತ್ರ ಸಹ ಒಂದಾಗಿದೆ. ನಳ ಮಹಾರಾಜ ಮತ್ತು ಭೀಮಸೇನ್ ಹಾಗೂ ವಿಕ್ರಮಾತ್ಯ ಸೇರಿದಂತೆ ಅನೇಕ ಮಹಾಪುರುಷರು ಪಾಕಶಾಸ್ತ್ರವನ್ನು ಕರಗತ ಮಾಡಿಕೊಂಡಿದ್ದರು. ದೇಶದ ಮುಂದಿನ ಭಾವಿ ಪ್ರಜೆಗಳಾದ ಮಕ್ಕಳಿಗೆ ಉತ್ತಮ ಆಹಾರ ತಯಾರಿಸುವ ಪುಣ್ಯಮಯ ಕಾರ್ಯ ಮಾಡುತ್ತಿರುವ ಅಡುಗೆ ಸಿಬ್ಬಂದಿ ಸೇವೆ ಶ್ಲಾಘನೀಯ ಎಂದರು.
ಪ್ರಜಾಪ್ರಭುತ್ವದ ಭಾಷೆ ಮತದಾನ. ಹೀಗಾಗಿ ಪ್ರತಿಯೊಬ್ಬ ಪ್ರಜೆ ಚುನಾವಣೆಯಲ್ಲಿ ಸ್ವಯಂಪ್ರೇರಿತರಾಗಿ ಮತಗಟ್ಟೆಗೆ ತೆರಳಿ ಮತ ಚಲಾಯಿಸಬೇಕು. ಅಂದಾಗ ಮಾತ್ರ ಪ್ರಜಾಪ್ರಭುತ್ವ ಗಟ್ಟಿಗೊಳ್ಳತ್ತದೆ. ನೀವಷ್ಟೆ ಮತ ಚಲಾಯಿಸದೆ ಮನೆಯಲ್ಲಿಯ ಎಲ್ಲ ಮತದಾರರು ಮತ್ತು ಅಕ್ಕಪಕ್ಕದ ಮನೆಯವರಿಗೆ ಮತ ಚಲಾಯಿಸಲು ಪ್ರೇರೇಪಿಸಬೇಕು. ಆಗ ಮಾತ್ರ ಶೇ.80ರಷ್ಟು ಮತದಾನವಾಗಲು ಸಾಧ್ಯ. ಈ ದಿಶೆಯಲ್ಲಿ ಎಲ್ಲರೂ ಶ್ರಮಿಸೋಣ ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ತಾಪಂ ಇಒ ಡಾ| ಬಸವರಾಜ ಡಿ.ಸಿ., ಎಲ್ಲ ಅ ಧಿಕಾರಿಗಳಿಗೆ ಮತ್ತು ಅಡುಗೆ ಸಿಬ್ಬಂದಿಗೆ ಚುನಾವಣೆಯ ವೇಳೆ ತಪ್ಪದೇ ಮತದಾನ ಮಾಡುವುದಾಗಿ ಪ್ರತಿಜ್ಞಾವಿಧಿ ಬೋಧಿಸಿದರು. ವಿವಿ ಪ್ಯಾಟ್ ಪ್ರಾತ್ಯಕ್ಷಿಕೆ ಮೂಲಕ ಮತದಾನದ ಜಾಗೃತಿ ಮೂಡಿಸಿದರು.
ಜಿಲ್ಲಾ ವಯಸ್ಕರ ಶಿಕ್ಷಣಾ ಧಿಕಾರಿ ಎಂ.ಎಚ್ .ಪಾಟೀಲ, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಎಸ್.ಬಿ.ಹಾದಿಮನಿ, ಪೌರಾಯುಕ್ತ ಡಾ| ಮಹಾಂತೇಶ ಎನ್., ತಾಪಂ ಇಒ ಡಾ| ಬಸವರಾಜ ಡಿ.ಸಿ., ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಲಿಂಗರಾಜ ಸುತ್ತಕೋಟಿ, ನಗರಸಭಾ ಅಭಿಯಂತರ ನಂದ್ಯಪ್ಪ, ನಾಗರಾಜ, ಮಣ್ಣಬಸಣ್ಣನವರ, ತಾಪಂ ವ್ಯವಸ್ಥಾಪಕ ಬಸವರಾಜ ಶಿಡೆನೂರ ಸೇರಿದಂತೆ ಮತ್ತಿತರರು ಇದ್ದರು.