Advertisement

ನಗರಸಭೆ ಪ್ರೌಢಶಾಲೆಯಿಂದ ಸಾಧಕರ ಕೊಡುಗೆ 

04:15 PM Oct 28, 2018 | Team Udayavani |

ರಾಣಿಬೆನ್ನೂರ: ಅಧಿಕಾರ, ಅಂತಸ್ತು ಶಾಶ್ವತವಲ್ಲ, ನಮ್ಮ ಜೀವಿತಾವಧಿಯಲ್ಲಿ ಮಾಡುವ ಪುಣ್ಯಕಾರ್ಯಗಳು ಮಾತ್ರ ಶಾಶ್ವತ. ನಾವು ಬರುವಾಗ ಏನನ್ನೂ ತಂದಿಲ್ಲ, ಹೋಗುವಾಗ ಸಹ ಏನನ್ನೂ ಒಯ್ಯುವುದಿಲ್ಲ. ಬದಲಾಗಿ ನಮ್ಮ ಸೇವೆಗಳು ಶಾಶ್ವತವಾಗಿ ಉಳಿಯುತ್ತವೆ ಎಂದು ತಾಪಂ ಮಾಜಿ ಅಧ್ಯಕ್ಷ ನೀಲಕಂಠಪ್ಪ ಕುಸಗೂರ ಹೇಳಿದರು. ನಗರಸಭಾ ಪ್ರೌಢಶಾಲಾ ಸಭಾಂಗಣದಲ್ಲಿ ಶನಿವಾರ ನಗರಸಭಾ ಪ್ರೌಢಶಾಲೆಯ ಹಿತರಕ್ಷಣಾ ಸಮಿತಿಯ ವತಿಯಿಂದ ಏರ್ಪಡಿಸಿದ್ದ ನಗರಸಭೆ ನೂತನ ಸದಸ್ಯರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

Advertisement

1985ರಲ್ಲಿ ಸ್ಥಾಪನೆಯಾದ ನಗರಸಭೆಯ ಪ್ರೌಢಶಾಲೆ ಈಗಾಗಲೇ ಸಮಾಜಕ್ಕೆ ಸಾವಿರಾರು ಸಮರ್ಥ ವಿದ್ಯಾವಂತರನ್ನು ಕೊಡುಗೆಯಾಗಿ ನೀಡಿದೆ.ಅಂಥವರಲ್ಲಿ ಅನೇಕರು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ. ಆಫ್ರಿಕಾದ ಸಂವಿಧಾನ ರಚಿಸಿದ ಎಲ್‌. ಜಿ.ಹಾವನೂರು ಸಹ ಈ ಶಾಲೆಯ ವಿದ್ಯಾರ್ಥಿ ಎಂಬುದು ಹೆಮ್ಮೆಯ ಸಂಗತಿ ಎಂದರು. ಅಲ್ಲದೇ ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡ ಸೇರಿದಂತೆ ಹಲವಾರು ಮಹನೀಯರು ಈ ಶಾಲೆಯ ವಿದ್ಯಾರ್ಥಿಗಳಾಗಿ ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ವಿಜ್ಞಾನ, ತಂತ್ರಜ್ಞಾನಗಳಲ್ಲಿ ತಮ್ಮದೇ ಆದಛಾಪು ಮೂಡಿಸಿದ್ದಾರೆ ಎಂದರು.

ಇಂತಹ ಇತಿಹಾಸವುಳ್ಳ ಶಾಲೆಯು ಮುಚ್ಚುವ ಹಂತ ತಲುಪಿತ್ತು. ನಗರದ ಪ್ರಜ್ಞಾವಂತರು ಹಾಗೂ ಶಾಲೆಯ ಹಳೇ ವಿದ್ಯಾರ್ಥಿಗಳು ಒಗ್ಗೂಡಿ ವಿಧಾನಸಭಾ ಮಾಜಿ ಅಧ್ಯಕ್ಷರ ಸಮ್ಮುಖದಲ್ಲಿ ಪ್ರೌಢ ಶಾಲಾ ಹಿತರಕ್ಷಣಾ ಸಮಿತಿಯ ಮೂಲಕ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ನೂತನವಾಗಿ ಆಯ್ಕೆಯಾಗಿರುವ ನಗರಸಭಾ ಸದಸ್ಯರೆಲ್ಲರೂ ಪಕ್ಷ ಭೇದ ಮರೆತು ಶಾಲೆಯ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ನೂತನವಾಗಿ ಆಯ್ಕೆಗೊಂಡ 35 ನಗರಸಭಾ ಸದಸ್ಯರನ್ನು ನಗರಸಭಾ ಪ್ರೌಢ ಶಾಲಾ ಹಿತರಕ್ಷಣಾ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಪುಟ್ಟಪ್ಪ ಮರಿಯಮ್ಮನವರ, ಗಂಗಮ್ಮ ಹಾವನೂರ, ಪ್ರಭಾವತಿ ತಿಳುವಳ್ಳಿ, ಚಂಪಾ ಬಿಸಲಳ್ಳಿ, ಪ್ರಕಾಶ ಪೂಜಾರ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಹಿತರಕ್ಷಣಾ ಸಮಿತಿ ಅಧ್ಯಕ್ಷ ಈಶ್ವರ ಹಾವನೂರ, ಡಾ| ಬಸವರಾಜ ಕೇಲಗಾರ, ಜೆ.ಎಂ.ಮಠದ, ನಿವೃತ್ತ ಪ್ರಧಾನ ಗುರು ಎಸ್‌.ಜಿ.ಹಿರೇಮಠ, ಪೌರಾಯುಕ್ತ ಡಾ| ಎನ್‌.ಮಹಾಂತೇಶ, ಸಮಿತಿಯ ಕಾರ್ಯದರ್ಶಿ ವಿ.ವಿ. ಹರಪನಹಳ್ಳಿ, ಅಮರನಾಥ ಭೂತೆ, ಆರ್‌.ಬಿ.ಪಾಟೀಲ, ಪ್ರಭುಸ್ವಾಮಿ ಕರ್ಜಗಿಮಠ, ಹನುಮಂತಪ್ಪ ಹೆದ್ದೇರಿ, ರಮೇಶ ಬಿಸಲಳ್ಳಿ ಸೇರಿದಂತೆ ಮತ್ತಿತರರು ಇದ್ದರು. ನಿಂಗಪ್ಪ ವಿಭೂತಿ ಪ್ರಾರ್ಥಿಸಿದರು. ಶಿಕ್ಷಕ ಎಂ.ಎಸ್‌.ಮಳೇಮಠ ಸ್ವಾಗತಿಸಿದರು. ಆರ್‌.ಬಿ.ಪಾಟೀಲ ನಿರೂಪಿಸಿದರು. ಎಂ.ಎಂ.ಅಕ್ಕಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next