Advertisement

ಕವಿಯ ಪ್ರತಿಭಾ ಸ್ಪರ್ಶದಿಂದ ದಿನಬಳಕೆ ಭಾಷೆಯಲ್ಲಿ ಕಾವ್ಯ

10:53 AM Jan 17, 2019 | |

ರಾಣಿಬೆನ್ನೂರ: ಭಾಷಾ ಶೈಲಿ ಕೇವಲ ಒಂದು ಮಾಧ್ಯಮವೆಂದು ಪರಿಗಣಿಸಿದರೆ ಅದನ್ನು ಕವಿ ತನ್ನ ಇಚ್ಚೇಗೆ ತಕ್ಕಂತೆ ಬದಲಾಯಿಸಬಹುದು. ಸಂದರ್ಭಕ್ಕೆ ತಕ್ಕಂತೆ ಉಡುಪು ಬದಲಾಯಿಸುತ್ತೇವಲ್ಲ ಹಾಗೆ. ಆದರೆ ದಿನ ಬಳಕೆಯ ಭಾಷೆ ಕಾವ್ಯವಾಗುವುದು ಕವಿಯ ಪ್ರತಿಭಾ ಸ್ಪರ್ಶದಿಂದ. ಆಲೋಚನೆ ಭಾಷೆಯ ರೂಪದಲ್ಲಿಯೇ ಇರಬೇಕಾಗುತ್ತದೆ ಎಂದು ಹಾನಗಲ್ಲಿನ ಸಾಹಿತಿ ವಿಜಯಕಾಂತ ಪಾಟೀಲ ಹೇಳಿದರು.

Advertisement

ಬುಧವಾರ ನಾಗಶಾಂತಿ ಉನ್ನತಿ ವಿಜ್ಞಾನ ಮತ್ತು ವಾಣಿಜ್ಯ ಪಪೂ ಕಾಲೇಜಿನಲ್ಲಿ ಕಾಗದ ಸಾಂಗತ್ಯ ವೇದಿಕೆಯ ಪದವಿ ಹಾಗೂ ಪಪೂ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಕವಿಗೋಷ್ಠಿ ಹಾಗೂ ಕಾವ್ಯಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕವಿಯ ಆಳವಾದ ಅನುಭವ, ವಿಚಾರಗಳು, ಕವಿಯ ಮನೋಧರ್ಮಕ್ಕೆ ಅನುಗಣವಾಗಿ ಸ್ಪಷ್ಟರೂಪ ತಳೆಯುವ ಜತೆಗೆ ಖಚಿತವಾಗುತ್ತ, ಸೂಚ್ಯವಾಗುತ್ತ ಹೋಗುತ್ತವೆ. ಆದರೆ, ಓದುಗರ ದೃಷ್ಟಿಯಿಂದ ಮೊದಲು ಭಾಷೆ ಆ ಮೂಲಕ ಕವಿಯ ಮನಸ್ಸಿನಾಳಕ್ಕೆ ಇಳಿಯಬೇಕಾಗುತ್ತದೆ. ಎಷ್ಟರ ಮಟ್ಟಿಗೆ ಕವಿ ತನ್ನ ಸಂವೇದನಗಳನ್ನು ಸಂವಹಿಸಬಲ್ಲನೋ ಅಷ್ಟರಮಟ್ಟಿಗೆ ಅವನ ರಚನೆ ಸಫಲವಾಗುವುದು ಎಂದರು.

ಸಹಪ್ರಾಧ್ಯಾಪಕ ಡಾ| ಅನಸೂಯ ಕಾಂಬಳೆ ಮಾತನಾಡಿ, ಕಾವ್ಯವನ್ನು ದಂತ ಗೋಪುರವಾಗಿಸದೆ ಓದುಗರಿಗೆ ಹತ್ತಿರವಾಗಿಸುವುದು ಬಹಳ ಮುಖ್ಯ. ಒಂದು ಭಾಷೆಯ ಹಿಂದೆ ಸಂಸ್ಕೃತಿ ಅಡಗಿದೆ. ಕೇವಲ ಸಾಮಾಜಿಕ, ಕೌಟಂಬಿಕ, ಸಮುದಾಯಿಕ, ವೈಯಕ್ತಿಕವಾದ ದುಃಖ ಹೇಳಿಕೊಂಡ ಮಾತ್ರಕ್ಕೆ ಕಾವ್ಯ ಆಗದು. ಹಾಗೇನಾದರೂ ಆಗುವಂತಿದ್ದರೆ ಲೋಕದ ತುಂಬಾ ಕವಿಗಳೇ ಇರುತ್ತಿದ್ದರು. ರೂಪ ಕಲ್ಪನೆಗಳು, ಶಬ್ದ ಕಲ್ಪನೆಗಳು, ರೂಪಕ ಚಿತ್ರಗಳು, ದೃಶ್ಯ ಪ್ರತಿಮೆಗಳು ಇದ್ದರೆ ಕಾವ್ಯವಾಗುತ್ತದೆ ಎಂದರು.

ಕವಿ ಚಂ.ಸು.ಪಾಟೀಲ ಮಾತನಾಡಿ, ಕನ್ನಡ ಕಾವ್ಯಭಾಷೆಗೆ ಸಾವಿರದಿನ್ನೂರು ವರ್ಷಗಳ ಪರಂಪರೆ ಇದೆ. ಪಂಪ, ರನ್ನ, ರಾಘವಾಂಕ, ಲಕ್ಷ್ಮೀಶನಿಂದ ಹಿಡಿದು, ಕುವೆಂಪು, ಬೇಂದ್ರೆ, ಚಂಪಾ ಹೀಗೇ ಇವೆರೆಲ್ಲರ ಕಾವ್ಯವನ್ನು ಅವಲೋಕಿಸಿದಾಗ ಆಯಾ ಕಾಲದ ಸತ್ವವನ್ನು, ಭಾಷಾ ಸತ್ವ, ನಾದ, ಲಯ, ಅರ್ಥಛಾಯೆಯೊಂದಿಗೆ ಬಳಸಿದ್ದಾರೆ. ಸಹಸ್ರ ವರ್ಷಗಳ ಭಾಷೆಯನ್ನು ಸಮರ್ಥವಾಗಿ ದುಡಿಸಿಕೊಂಡ ಕವಿ-ಕಾವ್ಯಗಳಿವೆ ಎಂದರು. ನಗರಸಭಾ ಮಾಜಿ ಅಧ್ಯಕ್ಷ ಬಸವರಾಜ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಚಾರ್ಯ ಪ್ರೊ| ಬಿ.ಬಿ.ನಂದ್ಯಾಲ ಅಧ್ಯಕ್ಷತೆ ವಹಿಸಿದ್ದರು. ಮಹೇಶ್ವರಗೌಡ ಪಾಟೀಲ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next