Advertisement

Poetry: ಸಾಹಿತ್ಯ ಲೋಕದ ಭಾವಯಾನ ‘ಕವನ’

03:26 PM Mar 22, 2024 | Team Udayavani |

ಕವನ ಸಾಸುವೆಯಲ್ಲಿ ಸಾಗರವನ್ನು ತೋರಬಲ್ಲ ಸಾಹಿತ್ಯ ಪ್ರಕಾರ. ಬೆಳಕಿನ ದೊಂದಿಯಂಥ ಕವಿತೆ ಅಥವಾ ಕವನ ಸಾಹಿತ್ಯದಲ್ಲಿನ ಉಳಿದೆಲ್ಲ ಪ್ರಕಾರಗಳಿಗಿಂತ ವಿಭಿನ್ನ ಮತ್ತು ಚೆನ್ನ.

Advertisement

ಸಾಹಿತ್ಯ ಕ್ಷೇತ್ರಕ್ಕೆ ಕಥೆ, ಕಾದಂಬರಿ, ಅಂಕಣ ಸಾಹಿತ್ಯ, ನಾಟಕ, ಪ್ರಬಂಧ ಹೀಗೆ ಯಾವುದೇ ಮಾರ್ಗದ ಮೂಲಕ ಪ್ರವೇಶಿಸಬಹುದು. ಆದರೆ ಬರೆಯಲು ಹೊರಡುವ ಸಾಹಿತ್ಯಪ್ರೇಮಿಯ ಮೊದಲ ಒಲವು ಮಾತ್ರ ಕವನವೇ. ಕಾರಣ ಇಷ್ಟೇ, ಅಕ್ಷರಲೋಕಕ್ಕೆ ಧುಮುಕುವ ಹುಮ್ಮಸ್ಸಿಗೆ ಪೂರಕವೆಂಬಂತೆ ಕಡಿಮೆ ಸಮಯ ಮತ್ತು ಕಡಿಮೆ ಪದಗಳಲ್ಲಿ ತನ್ನ ಒಳಗುದಿಯನ್ನು ವ್ಯಕ್ತಪಡಿಸುವ ಧಾವಂತಕ್ಕೆ ದ್ವಾರವಾಗಿ ಕವಿತೆಯೇ ಆಯ್ಕೆಯಾಗಿಬಿಡುತ್ತದೆ.

ಕವನ ಚಿತ್ರಿಸುವಾಗ ಪ್ರಾಸ ಪದಗಳ ಚಮತ್ಕಾರ ತೋರಬಹುದು, ಸೂಚ್ಯವಾಗಿ ಗಂಭೀರ ವಿಷಯವನ್ನು ಹೇಳಿಬಿಡಬಹುದು, ಭಯವೆನಿಸುವ ಬೇಗುದಿಯನ್ನು ಪದಗಳ ಹೊದಿಕೆಯಡಿ ಮುಚ್ಚಿ ಹೇಳಿಬಿಡಬಹುದು ಈ ಬಗೆಯ ಹಲವಾರು ಕಾರಣಗಳಿಗಾಗಿ ಬರೆಹಶೈಶವಕ್ಕೆ ಕವಿತೆ ಮೆಚ್ಚಿನ ಆಟಿಕೆಯಾಗುತ್ತದೆ.

ಈಗ ಫೇಸುºಕ್‌ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಮುಕ್ತ ಬರೆಹಕ್ಕೆ ಅವಕಾಶವಿದ್ದ ಕಾರಣದಿಂದಾಗಿ ಅನೇಕರು ಕವಿತೆಗಳನ್ನು ಹೆಚ್ಚೆಚ್ಚು ಬರೆಯುತ್ತಿದ್ದಾರೆ. ಎಲ್ಲವೂ ಅತ್ಯುತ್ತಮ ಅಂತಲೋ, ಎಲ್ಲವೂ ಕಳಪೆಯಂತಲೋ ಪರಿಗಣಿಸಬೇಕಿಲ್ಲ. ಎಲ್ಲ ಬಗೆಯ ಕವಿತೆಗಳು ಅಲ್ಲಿ ರೂಪತಾಳಿ ನಿಲ್ಲುತ್ತವೆ. ಇತ್ತೀಚಿನ ಕವಿತೆಗಳ ಬಗ್ಗೆ ಸುಮ್ಮನೆ ಒಂದು ತಮಾಷೆಯ ಮಾತಿದೆ. ಪದದ ಪಕ್ಕ ಪದ ಬರೆದರೆ ಗದ್ಯ, ಪದದ ಕೆಳಗೆ ಪದ ಬರೆದರೆ ಪದ್ಯ ಎಂದು. ಈ ಬಗೆಯ ಕವಿತೆಗಳನ್ನೂ ಈಗ ಕಾಣಬಹುದು. ಇದರ ಹೊರತಾಗಿ ಕಣ್ಣುಹಾಯಿಸಿದರೆ ನಮಗೆ ಪುಟ್ಟ ಮೂರು ನಾಲ್ಕು ಸಾಲಿನ ಕವಿತೆಗಳಿಂದ ಪುಟಗಟ್ಟಲೆ ತಮ್ಮ ವಿಸ್ತಾರ ವ್ಯಾಪಿಸಿಕೊಂಡ ಖಂಡಕಾವ್ಯಗಳ ತನಕ ಅನೇಕ ಗಾತ್ರದ ಕವಿತೆಗಳು ಸಿಗುತ್ತವೆ.

ಎಲ್ಲ ಬಗೆಯ ಕವಿತೆಗಳಲ್ಲಿ ಹೊಸತನ, ರಮ್ಯತೆ, ಒಳದನಿ, ತುಡಿತ, ಭಾವ ವ್ಯಕ್ತಗೊಳ್ಳುತ್ತಿರುತ್ತದೆ. ಓದುಗ ಅದಕ್ಕೆ ತೆರೆದುಕೊಳ್ಳಬೇಕು. ಓದುಗನ ಹೃದಯವೀಣೆ ಕವಿಯ ಭಾವವೀಣೆಯೊಂದಿಗೆ ಶ್ರುತಿಗೊಂಡಾಗ ಕಾವ್ಯಗಾನ ಹೊಮ್ಮುತ್ತದೆ. ಈ ಕಾರಣಕ್ಕಾಗಿಯೇ ಕವಿತೆ ಅಥವಾ ಕಾವ್ಯದ ಓದುಗರನ್ನು ಓದುಗ ಎನ್ನದೇ ಸಹೃದಯ ಎನ್ನುತ್ತಾರೆ. ಕವನಗಳು ಒಂದೇ ಓಘದಲ್ಲಿ ಓದಿ ಮುಗಿಸುವ ಅವಸರ ಬಯಸುವುದಿಲ್ಲ.

Advertisement

ಒಂದೊಂದು ಕವಿತೆಯೂ ಒಂದೊಂದು ಭಾವಬೀಜ. ಓದಿದಾಗ ಅಥವಾ ಕೇಳಿದಾಗ ಮನದ ಮಣ್ಣಲ್ಲಿ ಬಿತ್ತರಗೊಂಡು ನಿರಂತರವಾಗಿ ನಿಧಾನವಾಗಿ ಸಾತತ್ಯದಲ್ಲಿ ಚಿಗುರುತ್ತದೆ; ವಿಕಸಿತಗೊಳ್ಳುತ್ತದೆ; ಮೊಗ್ಗು ಮೂಡುತ್ತದೆ; ಅರಳಿ ಹೂವಾಗುತ್ತದೆ. ಆಗಲೇ ನೋಡಿ ಕವಿತೆಯ ಘಮಲು, ಹೊಳಹು ಪಸರಿಸಿ ಹೃದಯಕ್ಕೆ ಮುದದಾಲಿಂಗನ ದಕ್ಕುವುದು. ಆ ಹೂವು ನಿಧಾನಕ್ಕೆ ಬೀಜವೊಂದನ್ನು ನೀಡಿದಾಗ ಓದುಗನಲ್ಲಿ ಹೊಸತೊಂದು ಸ್ಪೂರ್ತಿ ಚಿಮ್ಮಿ ಮನದಗರ್ಭದಲ್ಲೊಂದು ಕವಿತೆ ಆವಿರ್ಭವಿಸುತ್ತದೆ. ಹೊಸ ಕವಿತೆ ಹೊರಬರುತ್ತದೆ.

ಕವಿತೆಯ ಅರ್ಥ ಕೂಡ ಒಂದೇ ಬಗೆಯದ್ದಲ್ಲ. ಕವಿತೆ ಅಂಗೈಲಿ ಜೋಪಾನವಾಗಿ ಹಿಡಿದಿಟ್ಟ ದೀಪ. ಯಾರಿಗೆ ಯಾವ ಬೆರಳ ಸಂದಿಯಿಂದ ಹೊಮ್ಮಿದ ಬೆಳಕು ದಕ್ಕುವುದೋ ಅದೇ ಅವರ ಪಾಲಿನ ಅರ್ಥ. ಈ ನಮ್ಯತೆ ಕವಿತೆಗೆ ಇರುವ ಕಾರಣಕ್ಕೆ ಕವಿತೆಗೆ ಅನಂತತೆ ಮತ್ತು ಜನಪ್ರಿಯತೆ ಸಿಕ್ಕಿರುವುದು. ಕವಿತೆಯ ಸ್ವಾದ ದಕ್ಕಬೇಕಾದರೆ ಒಂದು ಕವಿತೆ ಓದಬೇಕು, ಅದನ್ನೇ ಮನದಲ್ಲಿ ಧ್ಯಾನಿಸಬೇಕು. ಅದು ಮಾಗಿ ತಾನೇ ತನ್ನೊಳಗಿನ ಒಂದು ಅರ್ಥವನ್ನು ಕೊಡುವ ತನಕ ಕಾಯಬೇಕು. ಅದರೊಟ್ಟಿಗೆ ಮಾಗಬೇಕು. ನಾವೂ ಕವಿತೆಯಾಗಿಬಿಡಬೇಕು…. ಕವಿತೆಯೊಂದಿಗೆ ಸಾಫ‌ಲ್ಯ ಸಾಧಿಸುವ ಸುಲಭ ಸಾಧ್ಯತೆ ಇದು.

-ಚಿದಂಬರ ಕುಲಕರ್ಣಿ

ಧಾರವಾಡ ವಿವಿ

Advertisement

Udayavani is now on Telegram. Click here to join our channel and stay updated with the latest news.

Next