Advertisement

ಕಸ ಚೆಲ್ಲುವ ಜಾಗದಲ್ಲಿ ರಂಗೋಲಿ

11:29 AM Nov 19, 2018 | |

ವಾಡಿ: ಸಾರ್ವಜನಿಕರು ಬಡಾವಣೆಯ ವಿವಿಧ ಸ್ಥಳಗಳಲ್ಲಿ ನಿತ್ಯ ಕಸ ಚೆಲ್ಲುವ ಗಲ್ಲಿ ಜಾಗದಲ್ಲಿ ಪೌರಕಾರ್ಮಿಕರು ರಂಗೋಲಿ ಬಿಡಿಸುವ ಮೂಲಕ ಸ್ವತ್ಛತೆ ಕುರಿತು ವಿನೂತನವಾಗಿ ಜಾಗೃತಿ ಮೂಡಿಸಿದರು. ಹದಗೆಟ್ಟ ಚರಂಡಿಗಳು ಮತ್ತು ಎಲ್ಲೆಡೆ ಬೇಕಾಬಿಟ್ಟಿ ಹರಡಲಾಗುತ್ತಿದ್ದ ಕಸದಿಂದ ನೈರ್ಮಲ್ಯ ವ್ಯವಸ್ಥೆ ಹದಗೆಟ್ಟು
ಸಾರ್ವಜನಿಕರು ಕೀಲು ನೋವು, ಜ್ವರ ಸಾಂಕ್ರಾಮಿಕ ರೋಗವಾಗಿ ಕಾಣಿಸಿಕೊಂಡಿದ್ದ ಪುರಸಭೆ ವ್ಯಾಪ್ತಿಯ ವಾರ್ಡ್‌ 15ರ ಸರ್ದಾರ್ಜಿ ಏರಿಯಾದ ವಿವಿಧ ಸ್ಥಳಗಳನ್ನು
ಸ್ವತ್ಛಗೊಳಿಸಿದ ಪೌರಕಾರ್ಮಿಕರು, ಬಡಾವಣೆಯ ಇತರ ಮಹಿಳೆಯರೊಂದಿಗೆ ಬೀದಿಗಳಲ್ಲಿ ರಂಗೋಲಿ ಬಿಡಿಸಿ ಗಮನ ಸೆಳೆದರು.

Advertisement

ಬಡಾವಣೆಯಲ್ಲಿ ಆರೋಗ್ಯ ಇಲಾಖೆಯಿಂದ ಸಾರ್ವಜನಿಕರ ರಕ್ತ ಪರೀಕ್ಷೆ ಆರಂಭವಾಗಿರುವ ಬೆನ್ನಲ್ಲೇ ಪೌರಕಾರ್ಮಿಕರು ಚರಂಡಿಗಳ ಸ್ವತ್ಛತೆಗೆ ಮುಂದಾದರು. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ಲಾರ್ವಾ ಸರ್ವೇ ಮಾಡಿದರು. ಜನರಲ್ಲಿ ಆತಂಕ ಮೂಡಿಸಿದ ಕೀಲು ನೋವು ಸಮಸ್ಯೆ ನಿವಾರಣೆಗೆ ಮುಂದಾಗಿರುವ ಅಧಿಕಾರಿಗಳು ರೋಗ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದಾರೆ.

ವಾರ್ಡ್‌ 15ರ ಮಾಂಸ ಮಾರುಕಟ್ಟೆ ಪ್ರದೇಶ ಮತ್ತು ವೈನ್‌ ಅಂಗಡಿಗಳ ವೃತ್ತಗಳಲ್ಲಿ ಸಾರ್ವಜನಿಕರು ರಾಶಿಗಟ್ಟಲೇ ಕಸ ಸುರಿಯುತ್ತಾರೆ. ಪೌರಕಾರ್ಮಿಕರು ದಿನದ ಪದ್ಧತಿಯಂತೆ ವಿಲೇವಾರಿ ಮಾಡುತ್ತಾರೆ. ಕಸ ವಿಲೇವಾರಿ ವಾಹನ ಹೋದ ನಂತರವೂ ಜನರು ಕಸ ತಂದು ಬೀದಿಗೆ ಚೆಲ್ಲುತ್ತಾರೆ. ಕಸವನ್ನು ಮನೆಯಲ್ಲಿ ಸಂಗ್ರಹಿಸಿಟ್ಟು ಬೆಳಗ್ಗೆ ಮನೆಗೆ ಬರುವ ಪೌರಕಾರ್ಮಿಕರಿಗೆ ನೀಡಬೇಕು ಎಂದು ಎಷ್ಟು ಸಲ ಹೇಳಿದರೂ ಜನರಲ್ಲಿ ಜಾಗೃತಿ ಮೂಡುತ್ತಿಲ್ಲ. 

ಪುರಸಭೆಯೊಂದಿಗೆ ಸಾರ್ವಜನಿಕರ ಸಹಕಾರವೂ ದೊರೆತರೆ ಮಾತ್ರ ನಗರದ ಸ್ವತ್ಛತೆ ಕಾಪಾಡಲು ಸಾಧ್ಯವಾಗುತ್ತದೆ. ಪರಿಣಾಮ ನಿತ್ಯ ಕಸ ಚೆಲ್ಲುವ ಜಾಗ ಶುಚಿಗೊಳಿಸಿ ರಂಗೋಲಿ ಬಿಡಿಸಲಾಗುತ್ತಿದ್ದು, ಇದರಿಂದಾದರೂ ಬಡಾವಣೆ ಜನರಲ್ಲಿ ಜಾಗೃತಿ ಮೂಡಬಹುದು ಎನ್ನುವುದು ನಮ್ಮ ಆಶಯವಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ ಅಕ್ಕರಕಿ, ಹಿರಿಯ ಆರೋಗ್ಯ ನೈರ್ಮಲ್ಯ ನಿರೀಕ್ಷಕ ಶರಣಪ್ಪ ಮಡಿವಾಳ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next