Advertisement

ಏರ್ಯರಿಗೆ ರಂಗಭೂಮಿ ಪ್ರಶಸ್ತಿ

12:30 AM Jan 11, 2019 | |

ಅವಿಭಕ್ತ ದ.ಕ. ಜಿಲ್ಲೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿರುವ ಏರ್ಯ ಲಕ್ಷ್ಮೀ ನಾರಾಯಣ ಆಳ್ವರಿಗೆ ಸಾಹಿತ್ಯವಲ್ಲದೆ ಯಕ್ಷಗಾನ-ನಾಟಕಗಳು ಅತ್ಯಂತ ಆಸಕ್ತಿಯ ಕ್ಷೇತ್ರಗಳು. ಅವರು ಮಂಗಳೂರಿನಲ್ಲಿ ನಾಟಕದ ಚಟುವಟಿಕೆಗಳು ಹೆಚ್ಚಲಿಕ್ಕಾಗಿ “ಭೂಮಿಕಾ’ ಎಂಬ ಹವ್ಯಾಸಿ ನಾಟಕ ಸಂಸ್ಥೆಯನ್ನು ಕಟ್ಟಿ ಸ್ಥಾಪಕಾಧ್ಯಕ್ಷರಾದರು. “ಭಾವಗಂಗೋತ್ರಿ’ ಸಂಸ್ಥೆಯ ಅಧ್ಯಕ್ಷರಾದರು. ಸಾಲಿಗ್ರಾಮ ಮಕ್ಕಳ ಮೇಳದ ಆಡಳಿತ ಮಂಡಳಿ ಉಪಾಧ್ಯಕ್ಷರಾದರು. ಜಿಲ್ಲಾ ಲೈಬ್ರೆರಿ ಅಥಾರಿಟಿ ಸಂಸ್ಥೆಯ ಉಪಾಧ್ಯಕ್ಷರಾಗಿ 6 ವರ್ಷ ದುಡಿದರು. ಎಲ್ಲಕ್ಕಿಂತ ಹೆಚ್ಚಾಗಿ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿ ಸಿದ್ಧಗೊಂಡ ತುಳು ನಿಘಂಟು ಯೋಜನೆಯ (1979-1997) ಸಲಹಾ ಸಮಿತಿಯಲ್ಲಿದ್ದು ಭಾಷಾ ತಜ್ಞರಾಗಿಯೂ ಕೆಲಸ ಮಾಡಿದರು. 19-03-1926ರಂದು ಜನಿಸಿದ ಏರ್ಯರು ಈಗ 93ರ ಹಿರಿಯರು. ಹಲ್ಲು ಹೋದರು ಬೆನ್ನು ಬಾಗಿಲ್ಲ; ನೆನಪು ಮಾಸಿಲ್ಲ; ಉತ್ಸಾಹ ಕುಂದಿಲ್ಲ; ನಡಿಗೆಯ ವೇಗ ಕುಂಠಿತವಾಗಿಲ್ಲ; ಕಿರಿಯರಿಗೆ ಪ್ರೋತ್ಸಾಹ ನೀಡಿ ಬೆನ್ನು ಚಪ್ಪರಿಸಿ, ಉತ್ಸಾಹಗೊಳಿಸುವ ಕ್ರಮ ಹಿಂದೆ ಬಿದ್ದಿಲ್ಲ. ಸತತ ಚಟುವಟಿಕೆಗಳಿಗೆ-ಜೀವನೋತ್ಸಾಹಕ್ಕೆ ಮಾದರಿ ಏರ್ಯದ ಆಳ್ವರು. ಅವರಿಂದ ಕಲಿತು ಅಳವಡಿಸಿಕೊಳ್ಳಬೇಕಾದ ವಿಷಯಗಳು ಹತ್ತು ಹಲವು. ಹಿರಿಯ ಸಾಹಿತಿ, ಸಂಘಟಕ, ಕಲಾಪ್ರೋತ್ಸಾಹಕ, ಸಹಕಾರಿ ಧುರೀಣ, ಅನುಭವಗಳ ಖನಿ ಏರ್ಯ ಲಕ್ಷ್ಮೀನಾರಾಯಣ ಆಳ್ವರಿಗೆ ಉಡುಪಿಯ ರಂಗಭೂಮಿ ಸಂಸ್ಥೆ ಜ.12ರಂದು “ಸಾಹಿತ್ಯ ಕಲಾಶೇವಧಿ’ ಎಂಬ ಬಿರುದಿನೊಂದಿಗೆ ಪುರಸ್ಕರಿಸಲಿದೆ. 

Advertisement

ಪಾದೇಕಲ್ಲು ವಿಷ್ಣು ಭಟ್ಟ

Advertisement

Udayavani is now on Telegram. Click here to join our channel and stay updated with the latest news.

Next