ಮೈಸೂರು: ಕೋವಿಡ್ ಹಿನ್ನೆಲೆ 6 ತಿಂಗಳಿನಿಂದ ಸ್ತಬ್ಧಗೊಂಡಿದ್ದ ರಂಗಾಯಣದ ಅಂಗಳದಲ್ಲಿ “ಬೊಮ್ಮನಹಳ್ಳಿ ಕಿಂದರಿಜೋಗಿ’ ಮರುಸೃಷ್ಟಿ ವಾಚಿಕಾಭಿನಯಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಕೋವಿಡ್ ಸೋಂಕು ಹಬ್ಬುವ ಭೀತಿ ಹಿನ್ನೆಲೆ ಕಾರ್ಯಚಟುವಟಿಕೆಗಳು ರಂಗಾಯಣದ ಅಂಗಳದಲ್ಲಿ ಸ್ಥಗಿತಗೊಂಡಿದ್ದವು. ಹೆಚ್ಚಿನ ಕಾರ್ಯಕ್ರಮವಾಗಲಿ ಅಥವಾ ಚಟುವಟಿಕೆಗಳಾಲಿ ನಡೆಯುತ್ತಿರಲಿಲ್ಲ. ಕಳೆದ ವಾರ ಸಾಹಿತಿ ದೇವನೂರು ಮಹದೇವ ಅವರ “ಕುಸುಮಬಾಲೆ’ ವಾಚಿಕಾಭಿಯ ಪ್ರಯೋಗ ಮಾಡುವ ಮೂಲಕ ರಂಗಾಯಣ ಕಲಾವಿದರು ಯಶಸ್ವಿಯಾಗಿದ್ದು, ಇದೀಗ ಅದರ ಮುಂದುವರಿದ ಭಾಗವಾಗಿ ಕುವೆಂಪು ಅವರ “ಬೊಮ್ಮನಹಳ್ಳಿಯ ಕಿಂದರಿಜೋಗಿ’ ಮರುಸೃಷ್ಟಿ ವಾಚಿಕಾಭಿನಯ ಪ್ರಯೋಗ ಮಾಡಿದ್ದು, ಇದಕ್ಕೆ ಸೋಮವಾರ ಚಾಲನೆ ದೊರೆಯಿತು.
ರಂಗಾಯಣದ ಹಿರಿಯ ಕಲಾವಿದರಾದಸಂತೋಷ್ ಕುಮಾರ್ ಕುಸನೂರು ಕಿಂದರಿಜೋಗಿ ವೇಷದಲ್ಲಿ ಗಮನ ಸೆಳೆದರು. ಅರಿವು ಶಾಲೆಯ 10 ಮಕ್ಕಳು ಕಿಂದರಿಜೋಗಿ ಜತೆ ಹಾಡಿ ನಲಿದರು. ಬಹುದಿನಗಳ ಬಳಿಕ ರಂಗಾಯಣದಲ್ಲಿ ಮಕ್ಕಳ ಕಲರವ ಕೇಳಿ ಬಂತು. ರಂಗಾಯಣದ ವೆಬ್‌ಸೈಟ್, ಯೂ ಟ್ಯೂಬ್ ಹಾಗೂ ಫೇಸ್‌ಬುಕ್ ಪೇಜ್‌ನಲ್ಲಿ ಸಂಜೆ ಇದರ ವಿಡಿಯೋ ನೋಡಬಹುದು. “ಬೊಮ್ಮನಹಳ್ಳಿಯ ಕಿಂದರಿಜೋಗಿ’ ವಾಚಿಕಾ ಭಿನಯವನ್ನು ಯೂಟ್ಯೂಬ್‌ಗ ಅಪ್ಲೋಡ್ ಮಾಡುವ ಕಾರ್ಯಕ್ರಮವನ್ನು ಮಕ್ಕಳೇ ಉದ್ಘಾಟಿಸಿದ್ದು ವಿಶೇಷವಾಗಿತ್ತು. ನಂತರ ಮಾತನಾಡಿದ ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ಕಿಂದರಿಜೋಗಿ ವಾಚಿಕನಾಭಿನಯ 3 ಕಂತುಗಳಲ್ಲಿ ಪ್ರತಿದಿನ ಸಂಜೆ 6.30ಕ್ಕೆ ಪ್ರಸಾರವಾಗಲಿದೆ. ಈಗಾಗಲೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೊಂದಿಗೆ ಮಾತುಕತೆ ನಡೆಸಲಾಗಿದ್ದು, ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳಿಂದ ಸಕಲ ವಿದ್ಯಾರ್ಥಿಗಳಿಗೆ ವೀಕ್ಷಣೆಗೆ ಅವಕಾಶ ಮಾಡಿಕೊಡುವ ಭರವಸೆ ನೀಡಿದ್ದಾರೆ. ಶೀಘ್ರದಲ್ಲೇ ವಿದ್ಯಾರ್ಥಿಗಳು ಇದನ್ನು ಕಣ್ತುಂಬಿಕೊಳ್ಳಬಹುದು. ಅಲ್ಲದೇ, ಬಿ.ವಿ.ಕಾರಂತರು ರಂಗಾಯಣದ ನಾಟಕಗಳಿಗೆ ಸಂಗೀತ ಸಂಯೋಜಿಸಿದ ರಂಗ ಗೀತೆಗಳು ಇದೀಗ ತಾಲೀಮು ಹಂತದಲ್ಲಿದ್ದು, ಸೆ.15ರೊಳಗೆ ಚಿತ್ರೀಕರಣಗೊಂಡು ಪ್ರಸಾರ ಆಗಲಿದೆ ಎಂದರು.
ರಂಗಾಯಣದ ಭಾರತೀಯ ರಂಗಶಿಕ್ಷಣ ಕೇಂದ್ರದ 2020-21ನೇ ಸಾಲಿನ ಡಿಪ್ಲೊಮಾ ತರಬೇತಿಯ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಸಮಿತಿಯಿಂದ ಆಯ್ಕೆಯಾದ 20 ವಿದ್ಯಾರ್ಥಿಗಳ ಪಟ್ಟಿಯನ್ನು ರಂಗಾಯಣದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ 150ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಅ.5ರಿಂದ ತರಗತಿಗಳು ಆರಂಭವಾಗಲಿವೆ. ರಂಗಾಯಣದ ಹಿರಿಯ ಕಲಾವಿದ ಎಸ್.ರಾಮನಾಥ್ ಪ್ರಾಂಶು ಪಾಲರಾಗಿ ನಿಯುಕ್ತರಾಗಿದ್ದಾರೆ ಎಂದು ಹೇಳಿದರು. ಈ ಸಂದರ್ಭ ರಂಗಾಯಣದ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ ಇದ್ದರು.
ಅಲ್ಪಾವಧಿ ರಂಗ ಶಿಕ್ಷಣ : ಸದ್ಯದಲ್ಲೇ ಸುಬ್ಬಯ್ಯನಾಯ್ಡು ಅಲ್ಪಾವಧಿ ರಂಗ ಶಿಕ್ಷಣ ಆರಂಭಗೊಳ್ಳಲಿದ್ದು, 18ರಿಂದ 35 ವರ್ಷದೊಳಗಿನ ವಯೋಮಿತಿಯ 25 ಹವ್ಯಾಸಿ ಕಲಾವಿದರಿಗೆ ಅವಕಾಶವಿರುತ್ತದೆ. ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ತರಗತಿ ನಡೆಯುತ್ತದೆ. ನಂತರ ಒಂದು ನಾಟಕ ಸಿದ್ಧಗೊಳಿಸಿ ಅದನ್ನು ರಾಜ್ಯದ 4 ರಂಗಾಯಣಗಳಲ್ಲಿಪ್ರದರ್ಶನ ಮಾಡಲಾಗುತ್ತದೆ. ಸೆ.15ರಿಂದ ಡಾ. ಎಸ್.ಎಲ್.ಭೈರಪ್ಪನವರ ಪರ್ವ ಕಾದಂಬರಿಯ ರಂಗರೂಪ ತಾಲೀಮು ಶುರುವಾಗಲಿದೆ ಎಂದು ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿದರು.
ನವರಾತ್ರಿ ರಂಗೋತ್ಸವಕ್ಕೆ ಸಿದ್ಧತೆ : ಪ್ರತಿ ವರ್ಷದಂತೆ ದಸರಾ ನವರಾತ್ರಿ ರಂಗೋತ್ಸವಕ್ಕೆ ಸಿದ್ಧತೆ ನಡೆಯುತ್ತಿದೆ. 9 ದಿನಗಳು ವನರಂಗದಲ್ಲಿ ರಂಗಾಯಣದ ನಾಟಕಗಳು ಮತ್ತು ರಂಗ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.ಕೋವಿಡ್ ಇರುವುದರಿಂದ ಸರ್ಕಾರದ ಮಾರ್ಗ ಸೂಚಿಯಂತೆ ನಾಟಕಗಳ ಪ್ರದರ್ಶನ ನಡೆಯಲಿದೆ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ತಿಳಿಸಿದ್ದಾರೆ.