Advertisement

ರಣಘಟ್ಟ ಯೋಜನೆ: ನಾಲೆ ಮೂಲಕ ನೀರು ಹರಿವು ಸೂಕ್ತ

07:47 AM Mar 10, 2019 | |

ಹಾಸನ: ಹಳೇಬೀಡು ದ್ವಾರಸಮುದ್ರ ಕೆರೆಗೆ ನೀರು ತುಂಬಿಸುವ ಯೋಜನೆಯಲ್ಲಿ ರಣಘಟ್ಟ ಪಿಕ್‌ಅಪ್‌ನಿಂದ  ಗುರುತ್ವಾಕರ್ಷಣೆಯ ಮೂಲಕ ನಾಲೆಯಲ್ಲಿ ನೀರು ಹರಿಸುವುದು ಸೂಕ್ತ. ಅದನ್ನೇ ಸರ್ಕಾರ ಅನುಷ್ಠಾಗೊಳಿಸಬೇಕು ಎಂದು ಕಾಂಗ್ರೆಸ್‌ ಹಿರಿಯ ಮುಖಂಡ, ಮಾಜಿ ಸಚಿವ ಬಿ.ಶಿವರಾಮು ಅವರು ಒತ್ತಾಯಿಸಿದರು. 

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಣಘಟ್ಟ ಯೋಜನೆಗೆ ಸರ್ಕಾರ ಬಜೆಟ್‌ನಲ್ಲಿ 100 ಕೋಟಿ ರೂ. ಮೀಸಲಿರಿಸಿರುವದು ಸ್ವಾಗತಾರ್ಹ. ಏತ ನೀರಾವರಿ ಅಥವಾ ಗುರುತ್ವಾರ್ಷಣೆಯಲ್ಲಿ ತೆರೆದ ನಾಲೆ ಮೂಲಕ ಹಳೇಬೀಡು ಕೆರೆಗೆ ನೀರು ತುಂಬಿಸುವ ಎರಡು ಪ್ರಸ್ತಾವನೆಗಳು ಸರ್ಕಾರದ ಮುಂದಿವೆ. ಏತ ನೀರಾವರಿಗಿಂತ ಗುರುತ್ವಾರ್ಷಣೆಯಲ್ಲಿ ತೆರೆದ ನಾಲೆ ಮೂಲಕ ನೀರು ಹರಿಸುವುದು ಸೂಕ್ತ ಮತ್ತು ಶಾಶ್ವತ ಪರಿಹಾರವಾಗುತ್ತದೆ ಎಂದು ಹೇಳಿದರು. 

12.10 ಕಿ.ಮೀ. ನಾಲೆ ನಿರ್ಮಾಣ ಅಗತ್ಯ: ರಣಘಟ್ಟದಿಂದ ಹಳೇಬೀಡು ಕೆರೆ ವರೆಗೆ 12.10 ಕಿ.ಮೀ. ನಾಲೆ ನಿರ್ಮಾಣವಾಗಬೇಕು. ಅದರಲ್ಲಿ ಸುಮಾರು 2 ಕಿ.ಮೀ. ಸುರಂಗ ನಾಲೆ ನಿರ್ಮಾಣವಾಗಬೇಕಾಗುತ್ತದೆ. ಪಿಕ್‌ಅಪ್‌ಗಿಂತ 96 ಮೀಟರ್‌ ಎತ್ತರಕ್ಕೆ ನೀರೆತ್ತಬೇಕಾಗಿರುವುದರಿಂದ ಸುರಂಗ ನಿರ್ಮಾಣ ಅಗತ್ಯ. ಆದರೂ ನೀರೆತ್ತಲು ಏತ ನೀರಾವರಿ ಬದಲು ಸುರಂಗ ನಿರ್ಮಿಸುವುದು ಹೊರೆಯಾದರೂ ಶಾಶ್ವತ ಯೋಜನೆಯಾಗುತ್ತದೆ. ಆದ್ದರಿಂದ ಸರ್ಕಾರ ಗುರುತ್ವಾಕರ್ಷಣೆಯ ಮೂಲಕ ನಾಲೆಯಲ್ಲಿ ನೀರು ಹರಿಸುವುದು ಕಾಮಗಾರಿಯನ್ನು ಕೈಗೆತ್ತಿಕೊಂಡು ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಮನವಿ ಮಾಡಿದರು. 

ಹೋರಾಟಕ್ಕೆ ಸಂದ ಜಯ: 2016 ರ ಮೇ ನಲ್ಲಿಯೇ ರಣಘಟ್ಟದ ಬಳಿ ಸಣ್ಣ ನೀರಾವರಿ ಇಲಾಖೆ  ಮೂಲಕ ಒಂದು ಕೋಟಿ ರೂ. ವೆಚ್ಚದಲ್ಲಿ ಪಿಕ್‌ ಅಪ್‌ನ್ನು  ನಿರ್ಮಿಸಿದ್ದರಿಂದ ಅಲ್ಲಿ ನೀರು ಲಭ್ಯವಿದೆ ಎಂಬುದು ಗೊತ್ತಾಯಿತು. ಆನಂತರ ಪುಷ್ಪಗಿರಿ ಮಠದ ಸ್ವಾಮೀಜಿಯವರು ಹಾಗೂ ರೈತ ಸಂಘದ ಮುಖಂಡರು ಹೋರಾಟ ನಡೆಸಿದ ನಂತರ  ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ರಣಘಟ್ಟ ಪಿಕ್‌ ಅಪ್‌ ಸ್ಥಳಕ್ಕೆ  ಹೋದರು. ಅಲ್ಲಿಯವರೆಗೂ ದೇವೇಗೌಡರ 50 ವರ್ಷ ರಾಜಕೀಯ ಜೀವನದಲ್ಲಿ ಆ ಯೋಜನೆಯ ಬಗ್ಗೆ ಅವರು ಯೋಚನೆಯನ್ನೇ ಮಾಡಿರಲಿಲ್ಲ. ಈ ಯೋಜನೆಯ ಮಹತ್ವದ ಬಗ್ಗೆ ಗಮನ ಸೆಳೆದ ಪುಷ್ಪಗಿರಿ ಸ್ವಾಮೀಜಿ ಹಾಗೂ ರೈತ ಸಂಘದ ಮುಖಂಡರಿಗೆ ತಾವು ಕೃತಜ್ಞತೆ ಸಲ್ಲಿಸುವುದಾಗಿಯೂ ಶಿವರಾಮು ಅವರು ಹೇಳಿದರು. 

ಕಾಂಗ್ರೆಸ್‌ ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ : ಶಿವರಾಮು
ಹಾಸನ:
ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರವೂ ಸೇರಿದಂತೆ ಜೆಡಿಎಸ್‌ ಜೊತೆ ಚುನಾವಣೆ ಮೈತ್ರಿ ಮಾಡಿಕೊಳ್ಳಲು ಬಹುತೇಕ ಕಾಂಗ್ರೆಸ್‌ ಕಾರ್ಯಕರ್ತರಿಗೆ ಇಷ್ಟವಿಲ್ಲ. ಆದರೆ ಪಕ್ಷದ ಹೈ ಕಮಾಂಡ್‌ ತೀರ್ಮಾನಕ್ಕೆ ಬದ್ಧರಾಗಿರುವುದು ಅನಿವಾರ್ಯವಾಗುತ್ತದೆ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಮಾಜಿ ಸಚಿವ ಬಿ.ಶಿವರಾಮು  ಅವರು ಹೇಳಿದರು. 

Advertisement

ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ಹಾಲಿ ಸಂಸದರ ಕ್ಷೇತ್ರಗಳನ್ನು ಜೆಡಿಎಸ್‌ ಕೇಳದಿದ್ದರೆ ಹಾಸನ ಮತ್ತು ಮಂಡ್ಯವನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದು ಅನಿವಾರ್ಯ. ಆಗ ಜೆಡಿಎಸ್‌ ಅಭ್ಯರ್ಥಿ ಪರ ಕಾಂಗ್ರೆಸ್‌ ಇರಲೇ ಬೇಕಾಗುತ್ತದೆ. ಸೀಟು ಹಂಚಿಕೆಯವರೆಗೆ ಮಾತ್ರ ಅಭಿಪ್ರಾಯ ಮಂಡಿಸಲು ಸಾಧ್ಯ. ಆನಂತರ ಹೈ ಕಮಾಂಡ್‌ ನಿರ್ಧಾರಕ್ಕೆ ಬದ್ಧರಾಗಿ ಕೆಲಸ ಮಾಡಬೇಕಾಗುತ್ತದೆ ಎಂದರು. 

ಕಾಂಗ್ರೆಸ್‌ನಿಂದ ಎಷ್ಟೋ ಜನ ಹೊರ ಹೋಗುತ್ತಾರೆ. ಎಷ್ಟೋ ಜನ ಕಾಂಗ್ರೆಸ್‌ ಸೇರುತ್ತಾರೆ ಎಂದು ಮಾಜಿ ಸಚಿವ ಎ.ಮಂಜು ಬಿಜೆಪಿ ಸೇರುವ ವದಂತಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎ.ಮಂಜು ಅವರು ಕಾಂಗ್ರೆಸ್‌ ಬಿಡುತ್ತಾರೆ ಎಂದು ನನಗನಿಸುವುದಿಲ್ಲ. ಅವರು ಪಕ್ಷ ಬಿಡುವ ಪ್ರಶ್ನೆ ಉದ್ಭವಿಸುವುದೂ ಇಲ್ಲ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next