ಸದ್ಯ ತೆರೆಗೆ ಬರೋದಕ್ಕೂ ಮೊದಲೇ ನಿರ್ದೇಶಕ ದಯಾಳ್ ಪದ್ಮನಾಭನ್ ನಿರ್ದೇಶನದಲ್ಲಿ ಮೂಡಿಬಂದಿರುವ “ರಂಗನಾಯಕಿ’ಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಈಗಾಗಲೇ “ಗೋವಾ ಇಂಟರ್‌ನ್ಯಾಶನಲ್ ಫಿಲಂ ಫೆಸ್ಟಿವಲ್-2019’ಕ್ಕೆ ಪನೋರಮಾ ವಿಭಾಗದಲ್ಲಿ ಕನ್ನಡದಿಂದ ಸ್ಥಾನ ಪಡೆದುಕೊಂಡಿರುವ ಏಕೈಕ ಚಿತ್ರ “ರಂಗನಾಯಕಿ’, ಅ. 24ರಂದು ಫಿಲಂ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಳ್ಳಲಿದೆ.
ಇದಾದ ಬಳಿಕ ನವೆಂಬರ್ 1ರಂದು “ರಂಗನಾಯಕಿ’ಯನ್ನು ಪ್ರೇಕ್ಷಕರ ಮುಂದೆ ತರುವ ಆಲೋಚನೆಯಲ್ಲಿದೆ ಚಿತ್ರತಂಡ. ಇನ್ನು “ರಂಗನಾಯಕಿ’ ಮಹಿಳಾ ಪ್ರಧಾನ ಚಿತ್ರವಾಗಿದ್ದರಿಂದ, ಚಿತ್ರ ಬಿಡುಗಡೆಯ ನಂತರ ಮಹಿಳೆಯರಿಗಾಗಿಯೇ ವಿಶೇಷ ಪ್ರದರ್ಶನವನ್ನು ಆಯೋಜಿಸಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಈ ಬಗ್ಗೆ ಮಾತನಾಡುವ “ರಂಗನಾಯಕಿ’ ಚಿತ್ರದ ನಿರ್ದೇಶಕ ದಯಾಳ್ ಪದ್ಮನಾಭನ್, “ಇದೊಂದು ಮಹಿಳಾ ಪ್ರಧಾನ ಚಿತ್ರ.
ತನಗಾದ ಅನ್ಯಾಯದ ವಿರುದ್ಧ ಹುಡುಗಿಯೊಬ್ಬಳು ಹೇಗೆ ಕಾನೂನಿನ ಚೌಕಟ್ಟಿನಲ್ಲಿ ಹೋರಾಡಿ ನ್ಯಾಯ ಪಡೆಯುತ್ತಾಳೆ ಅನ್ನೋದು ಚಿತ್ರದ ಕಥೆಯ ಒಂದು ಎಳೆ. ಕೆಲ ವರ್ಷಗಳ ಹಿಂದೆ ದೆಹಲಿಯಲ್ಲಿ ನಡೆದ ನಿರ್ಭಯಾ ಪ್ರಕರಣದ ಸಂತ್ರಸ್ತ ಹುಡುಗಿ ಬದುಕಿದ್ದರೆ, ಎಂಥಹ ಸಂದರ್ಭ ಮತ್ತು ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಳು ಅನ್ನೋದನ್ನ ಈ ಚಿತ್ರದಲ್ಲಿ ಕಾಲ್ಪನಿಕವಾಗಿ ಹೇಳಿದ್ದೇವೆ. ಇದು ಎಲ್ಲರಿಗೂ ಮುಟ್ಟುವ ಕಥೆ. ಅದರಲ್ಲೂ ಇಂದಿನ ಮಹಿಳೆಯರಿಗೆ ತುಂಬ ಕನೆಕ್ಟ್ ಆಗುವ ಸಬ್ಜೆಕ್ಟ್ ಈ ಚಿತ್ರದಲ್ಲಿದೆ. ಹಾಗಾಗಿ ಮಹಿಳೆಯರಿಗಾಗಿಯೇ ಸ್ಪೆಷಲ್ ಶೋ ಮಾಡುವ ಬಗ್ಗೆ ಪ್ಲಾನ್ ಮಾಡಿಕೊಳ್ಳುತ್ತಿದ್ದೇವೆ’ ಎನ್ನುವ ಮಾಹಿತಿ ನೀಡುತ್ತಾರೆ.
ಇನ್ನು ಈಗಾಗಲೇ ಆನ್‌ಲೈನ್‌ನಲ್ಲಿ “ರಂಗನಾಯಕಿ’ ಚಿತ್ರದ ಮೂರು ಹಾಡುಗಳು ಬಿಡುಗಡೆಯಾಗಿದ್ದು, ಎಲ್ಲಾ ಹಾಡುಗಳಿಗೂ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದ ಕಥೆ ಎಲ್ಲರ ಮನಮುಟ್ಟುವಂತಿದೆ ಎನ್ನುವ ಚಿತ್ರತಂಡ, ಬಿಡುಗಡೆಯ ಬಳಿಕ ಪ್ರೇಕ್ಷಕರೇ ನಮಗಿಂತ ಹೆಚ್ಚಾಗಿ “ರಂಗನಾಯಕಿ’ ಚಿತ್ರದ ಬಗ್ಗೆ ಮಾತನಾಡುತ್ತಾರೆ ಎಂಬ ಭರವಸೆಯನ್ನು ವ್ಯಕ್ತಪಡಿಸುತ್ತದೆ. ಈ ಚಿತ್ರವನ್ನು ಎಸ್‌ವಿ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಡಿ ಎಸ್.ವಿ.ನಾರಾಯಣ್ ನಿರ್ಮಿಸಿದ್ದಾರೆ.