ನಿರ್ದೇಶಕ ದಯಾಳ್ ಪದ್ಮನಾಭನ್ ನಿರ್ದೇಶನದಲ್ಲಿ ಮೂಡಿಬಂದಿರುವ “ರಂಗನಾಯಕಿ’ ಚಿತ್ರ ತೆರೆಗೆ ಬರೋದಕ್ಕೆ ದಿನಗಣನೆ ಶುರುವಾಗಿದೆ. ಚಿತ್ರ ಇದೇ ನವೆಂಬರ್ ಮೊದಲವಾರ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಆದರೆ ಚಿತ್ರ ಪ್ರೇಕ್ಷಕರ ಮುಂದೆ ಬರೋದಕ್ಕೂ ಮುಂಚೆಯೇ “ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ-2019’ಕ್ಕೆ ಇಂಡಿಯನ್ ಪನೋರಮಾ ವಿಭಾಗದಿಂದ ಈ ವರ್ಷದ ಏಕೈಕ ಕನ್ನಡ ಚಿತ್ರವಾಗಿ ಆಯ್ಕೆಯಾಗಿದೆ.
ಈ ಬಗ್ಗೆ ಮಾತನಾಡಿರುವ ನಿರ್ದೇಶಕ ದಯಾಳ್ ಪದ್ಮನಾಭನ್, “ಈ ವರ್ಷ ಗೋವಾ ಫಿಲಂ ಫೆಸ್ಟಿವಲ್ ಐವತ್ತನೇ ವರ್ಷಾಚರಣೆಯ ಸಂಭ್ರಮದಲ್ಲಿದೆ. ಈ ಸಂದರ್ಭದಲ್ಲಿ ನಮ್ಮ ಚಿತ್ರ ಆ ಚಿತ್ರೋತ್ಸವದಲ್ಲಿ ಏಕೈಕ ಕನ್ನಡ ಚಿತ್ರವಾಗಿ ಆಯ್ಕೆಯಾಗಿರುವುದು ನಿಜಕ್ಕೂ ಖುಷಿ ತಂದಿದೆ. ಚಿತ್ರ ರಿಲೀಸ್‌ಗೂ ಮೊದಲೇ ಇಂಥ ಪ್ರತಿಷ್ಠಿತ ಚಿತ್ರೋತ್ಸವಕ್ಕೆ ಆಯ್ಕೆಯಾಗಿದ್ದು ಹೆಮ್ಮೆಯ ಸಂಗತಿ.
ಚಿತ್ರದ ಕಥಾಹಂದರ ಎಲ್ಲಾ ಕಡೆಯೂ ತಲುಪುವಂಥದ್ದಾಗಿದ್ದರಿಂದ ಚಿತ್ರವನ್ನು ಚಿತ್ರೋತ್ಸವಕ್ಕೆ ಕಳುಹಿಸಿದ್ದೆವು. ಚಿತ್ರದ ಕಥಾವಸ್ತುವನ್ನು ನೋಡಿದ ಆಯ್ಕೆ ಸಮಿತಿ ನಮ್ಮ ಚಿತ್ರವನ್ನು ಚಿತ್ರೋತ್ಸವಕ್ಕೆ ಆಯ್ಕೆ ಮಾಡಿದೆ. ಇದೇ ನವೆಂಬರ್ 1ಕ್ಕೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ’ ಎಂದಿದ್ದಾರೆ. ಮಹಿಳಾ ಪ್ರಧಾನ ಕಥಾಹಂದರ ಹೊಂದಿರುವ “ರಂಗನಾಯಕಿ’ ಚಿತ್ರದಲ್ಲಿ ಅದಿತಿ ಪ್ರಭುದೇವ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು,
ಶ್ರೀನಿ, ತ್ರಿವಿಕ್ರಮ್, ಶಿವಾರಾಂ, ಸುಚೇಂದ್ರ ಪ್ರಸಾದ್, ಸುಂದರ್, ವೀಣಾ ಸುಂದರ್, ಶೃತಿ ನಾಯಕ್ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಹಾಡುಗಳಿಗೆ ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆಯಿದ್ದು, ಚಿತ್ರಕ್ಕೆ ರಾಕೇಶ್ ಛಾಯಾಗ್ರಹಣ, ಸುನೀಲ್ ಕಶ್ಯಪ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ನವೀನ್ ಕೃಷ್ಣ “ರಂಗನಾಯಕಿ’ಗೆ ಸಂಭಾಷಣೆ ಬರೆದಿದ್ದಾರೆ.