Advertisement

ರಂಗ ಜಂಗಮನ ಸ್ಥಾವರ

02:46 PM Apr 07, 2018 | Team Udayavani |

ರಂಗಜಂಗಮ ಬಿ.ವಿ. ಕಾರಂತರು ಎಪ್ಪತ್ತರ ದಶಕದಲ್ಲಿ ಕನ್ನಡ ರಂಗಭೂಮಿಗೆ ಹೊಸ ತಿರುವು ತಂದವರು; ರಂಗಸಂಗೀತದ ಮೂಲಕ ಹೊಸ ಶಕೆ ಆರಂಭಿಸಿದವರು. ತಮ್ಮ ಪ್ರತಿ ಪ್ರಯೋಗವನ್ನೂ ಮಾಂತ್ರಿಕವಾಗಿಸಿದವರು. ಅದರ ಬೆರಗಿಗೆ ಕಣ್ಣರಳಿಸದವರೇ ಇಲ್ಲ. ಇಂಥವರು ಅನೇಕ ಶಿಷ್ಯರನ್ನೂ ಹುಟ್ಟುಹಾಕಿದರು. ಅವರಿಗೆಲ್ಲ ರಂಗಬದ್ಧತೆ ಮತ್ತು ರಂಗಪ್ರೀತಿ ಮೈಗೂಡಿಸಿಕೊಟ್ಟು ಭೌತಿಕವಾಗಿ ನಮ್ಮಿಂದ ದೂರಾದರು ಅಷ್ಟೇ. ಆದರೆ, ಅವರು ರಂಗದ ಬಗೆಗೆ ಹೊಂದಿದ್ದ ನಿಲುವುಗಳು, ಚಿಂತನೆ ಎಲ್ಲವೂ ಇನ್ನೂ ಜೀವಂತವಾಗಿ ಇದೆ ಎನ್ನುವುದಕ್ಕೆ ಈಚೆಗೆ ಕೆ.ಎಚ್‌ ಕಲಾಸೌಧದಲ್ಲಿ ಪ್ರಯೋಗಗೊಂಡ “ರಂಗಜಂಗಮನ ಸ್ಥಾವರ’ ನಾಟಕವೇ ಸಾಕ್ಷಿ. 

Advertisement

 ಕಾರಂತರ ಜೊತೆ ದೀರ್ಘ‌ಕಾಲ ಒಡನಾಡಿ, ಅವರಿಂದ ರಂಗಪಾಠಗಳನ್ನು ಮೈಗೂಡಿಸಿಕೊಂಡಿರುವ ಎಸ್‌. ರಾಮನಾಥ್‌ ಈ ಪ್ರಯೋಗ ಅಣಿಗೊಳಿಸಿದ್ದರು. ಇದರಲ್ಲಿ ಮೊದಲಿಗೆ ಕಂಡದ್ದು ಗುರುವಿನೆಡೆಗೆ ಅವರಿಗೆ ಇರುವ ಅಪರಿಮಿತ ಆರಾಧನಾಭಾವ. ಈ ಆರಾಧನೆಯೇ ಅವರನ್ನು ತಮ್ಮ ಗುರುವಿನ ಪ್ರತಿ ಮಾತು, ಚಿಂತನೆ, ನಿಲುವುಗಳನ್ನು ತುಂಬ ಸೂಕ್ಷ್ಮವಾಗಿ ಅರಿಯುವ ನಿಟ್ಟಿನಲ್ಲಿ ಸಜ್ಜುಗೊಳಿಸಿದೆ. “ನಾಟಕವೆಂದರೆ ಬರೆಯುವುದಲ್ಲ, ಅದನ್ನು ಕಟ್ಟುವುದಲ್ಲ. ಅದು ಘಟಿಸುವುದು ಅಷ್ಟೆ’ ಎನ್ನುತ್ತಿದ್ದ ಕಾರಂತರ ಮಾತುಗಳು ರಾಮನಾಥ್‌ರನ್ನು ಚಿಂತನೆಗೆ ಹಚ್ಚಿವೆ. ಸ್ವತಃ ನಟ ಹಾಗೂ ನಾಟಕಕಾರರಾಗಿರುವ ರಾಮನಾಥ್‌ ಕನ್ನಡ ರಂಗಭೂಮಿಗೆ “ಪುಗಳೇಂದಿ ಪ್ರಹಸನ’, “ಅರಹಂತ’ದಂಥ ನಾಟಕಗಳನ್ನು ಕೊಟ್ಟವರು. ಇವರಲ್ಲಿರುವ ಸೃಜನಶೀಲ ತುಡಿತ ಮತ್ತು ಗುರುವಿನ ಅನುಪಸ್ಥಿತಿಯಲ್ಲಿ ರಂಗದ ಬಗೆಗೆ ಹರಿಸಬೇಕಾದ ನೋಟಕ್ರಮ ಎರಡನ್ನೂ ಮಿಳಿತ ಮಾಡಿ “ರಂಗಜಂಗಮನ ಸ್ಥಾವರ’ ಸಿದ್ಧಗೊಳಿಸಿದ್ದಾರೆ. ಈ ನಾಟಕದ ವೈಶಿಷ್ಟéವಿರುವುದು ಅದರ ರಚನೆಯ ಮಾದರಿಯಲ್ಲಿ. 

ಈ ಪ್ರಯೋಗದಲ್ಲಿ ಒಂದು ಕ್ರಮಬದ್ಧ ಕತೆಯಿಲ್ಲ. ಹಾಗೆಂದು ಕತೆ ಇಲ್ಲ ಎನ್ನಲೂ ಸಾಧ್ಯವಿಲ್ಲ. ರೂಢಿಗತ ಚೌಕಟ್ಟಿನ ಕತೆ ಇಲ್ಲಿಲ್ಲ ಅಷ್ಟೆ. ಇಲ್ಲಿ ಬಿ.ವಿ. ಕಾರಂತರು ಒಂದು ರೂಪ ಕಟ್ಟಿಕೊಟ್ಟು ಅವುಗಳಿಗೆ ಮೆರುಗು ತಂದ ಆಯಾ ನಾಟಕದ ಪಾತ್ರಗಳಿವೆ; ನಾಟಕಕಾರನಿದ್ದಾನೆ. ಪಾತ್ರಗಳು ಕಾರಂತರೆಡೆಗೆ ಇರಿಸಿಕೊಂಡಿರುವ ಪ್ರೀತಿ ಮತ್ತು ಬೆರಗು ಇದೆ. ಕಾರಂತರು ನಟರ ಬಗ್ಗೆ, ಅವರು ಕಾಯಬೇಕಾದ ಪಾತ್ರಗಳ ಬಗ್ಗೆ, ಅದಕ್ಕೆ ಪಾತ್ರಗಳ ಪ್ರತಿಸ್ಪಂದನ ಹೇಗಿರುತ್ತದೆ ಎಂಬುದರಿಂದ ರಾಮ್‌ನಾಥ್‌ ನಾಟಕ ಆರಂಭಿಸಿದ್ದಾರೆ.

ಹಾಗಾಗಿ ಇದು ಒಂದು ರೀತಿ ರಂಗದ ಪಾತ್ರಗಳ ಬಗೆಗೆ ಕಾರಂತರು ನಡೆಸಿದ ತಾತ್ವಿಕ ಜಿಜಾnಸೆಗಳನ್ನೇ ರಾಮನಾಥ್‌ ಇಲ್ಲಿ ಪಾತ್ರಗಳ ಮೂಲಕ ಹೇಳಿಸಿದ್ದಾರೆ. ಇದು ನಿಜಕ್ಕೂ ಕುತುಹೂಲಕಾರಿ; ಆದರೆ ಈ ಎಲ್ಲಕ್ಕೂ ತಿರುವುಗಳಿವೆ. ಮೃತ್ಛಕಟಿಕ ನಾಟಕದ ಕಳ್ಳನ ಮುಖವಾಡ ಧರಿಸುವ ನಟನೊಬ್ಬ ಉಳಿದ ಬೇರೆ ಪಾತ್ರಗಳನ್ನು ಕದ್ದು ಬಚ್ಚಿಟ್ಟುಬಿಡುತ್ತಾನೆ. ಈ ತಿರುವಿನಲ್ಲೇ ಕಾರಂತರ ಬಹುತೇಕ ಮಾತುಗಳು ಅನುರಣಿಸುತ್ತವೆ. ಅವ‌ರು ನಟನಾ ಮೀಮಾಂಸೆಯ ಬಗ್ಗೆ ತಳೆದಿದ್ದ ನಿಲುವುಗಳು ಎಂಥವೆಂಬುದು ಸೂಚ್ಯವಾಗಿ ತಿಳಿಯುತ್ತದೆ. 

ಆದರೆ ಇಲ್ಲಿ ಒಂದು ತೊಡಕೂ ಇದೆ. ಕಾರಂತರು ನಿರ್ದೇಶಿಸಿದ ನಾಟಕಗಳ ಬಗೆಗೆ ಅರಿವಿಲ್ಲದವರಿಗೆ ಈ ಪ್ರಯೋಗ ಒಗಟಾಗಿಯೇ ಪ್ರವೇಶ ದೊರಕಿಸಿಕೊಡುತ್ತದೆ. “ಗೋಕುಲ ನಿರ್ಗಮನ’ ನಾಟಕ ನೋಡದವರಿಗೆ ಕೃಷ್ಣ ಹೇಳುವ ಕಾರಂತರ ವಿಚಾರಗಳು ನಿಲುಕುವುದು ಕಷ್ಟ. ಹಾಗಾಗಿ ರಂಗಪಥದಲ್ಲಿ ದೀರ್ಘ‌ಕಾಲ ನಡೆದವರಿಗೆ ಮತ್ತು ದಶಕಗಳಿಂದ ರಂಗದ ಬೆರಗಿಗೆ ಒಳಗಾದವರಿಗೆ, ಎಲ್ಲಕ್ಕಿಂತ ಹೆಚ್ಚಾಗಿ ಕಾರಂತರ ಬಗ್ಗೆ ಚೂರಾದರೂ ತಿಳಿದುಕೊಂಡವರಿಗೆ ಈ ಪ್ರಯೋಗ ಚಿಂತನೆಗೆ ಹಚ್ಚುತ್ತದೆ. ಈ ಯಾವುವೂ ಇಲ್ಲದವರಿಗೆ ಕಡೇಪಕ್ಷ ಕುತೂಹಲವನ್ನಾದರೂ ಹುಟ್ಟುಹಾಕುತ್ತದೆ. 

Advertisement

ಈ ಎಲ್ಲದರ ಆಚೆಗೆ ನಾಟಕದಲ್ಲಿ ಮಾತುಗಳು ಒಂದು ಹಂತದಿಂದ ಆಚೆಗೆ ತೀರಾ ತಾತ್ವಿಕವಾದವು. ಸುಮ್ಮನೆ ಸುಳಿ ತಿರುಗಿದಂತೆ ತಿರುಗಿದವು. ಈ ಸುಳಿಗಳು ವಿಪರೀತವಾಗುತ್ತಿದ್ದಂತೆ ಇವು ಕಾರಂತರ ನಿಲುವುಗಳ್ಳೋ ಅಥವಾ ರಾಮ್‌ನಾಥ್‌ರ ದರ್ಶನವೋ ತಿಳಿಯದಷ್ಟು ಬೆರೆತುಹೋಗಿದ್ದವು.  ಮಾತುಗಳು ತೀರಾ ತಾತ್ವಿಕವಾದವು ಅನಿಸಿದ ಕಡೆಗಳೂ  ತುಂಬಾ ಇವೆ. ಅಲ್ಲಿ ಚೂರೂ ಸರಳಗೊಳಿಸಿಕೊಂಡರೆ ಪ್ರಯೋಗದಲ್ಲಿನ ವಿಚಾರ ಮತ್ತಷ್ಟು ಸ್ಪಷ್ಟವಾಗುತ್ತವೆ.
ಇದರ ಹೊರತಾಗಿ ವಿನ್ಯಾಸದಲ್ಲಿ ರಂಗಾಯಣದ ನಟನಾ ಮಾದರಿಯ ಸೆಳವುಗಳಿವೆ. ಇದು ಸಹಜವೂ ಹೌದು. ಆದರೆ ರಂಗ ಮತ್ತು ರಂಗಸಜ್ಜಿಕೆಯನ್ನು ಬಳಸಿಕೊಂಡ ಬಗೆಯಲ್ಲಿ ಅದೇ ಹಳೆತನವಿತ್ತು. ಆದರೆ, ಚೆಂದವೂ ಇತ್ತು. ಒಂದಿಬ್ಬರು ಹೊಸಬರನ್ನು ಬಿಟ್ಟರೆ ಬಹುತೇಕ ಕಾರಂತರ ಶಿಷ್ಯರೇ ರಂಗದ ಮೇಲೆ ಇದ್ದರು. ಕಲ್ಪನಾ ನಾಗನಾಥ್‌ ಅವರ ಕಂಠದಲ್ಲಿ ಮುಂಚಿನ ಪಸೆ ಇರಲಿಲ್ಲ. ಇದು ಕೊರತೆಯಾಗಿ ಕಂಡಿತು. ಆದರೆ ವಯೋಮಾನ ಮತ್ತು ಅವರಲ್ಲಿರುವ ರಂಗಪ್ರೀತಿ ಈ ಲೋಪವನ್ನು ಮರೆಸಿತು. ರಂಗವಿನ್ಯಾಸ, ರಚನಾ ಮಾದರಿ ಚೆಂದವಿದ್ದರೂ ಸಂಗೀತ  ಕಾರಂತರ ಸಂಗೀತದಂತೆ ಕೇಳಿಸಲಿಲ್ಲ ಎನ್ನುವುದು ನಿಜ. ತಾತ್ವಿಕತೆಯನ್ನು ಚೂರು ಸರಳಗೊಳಿಸಿಕೊಂಡು ಸಂಗೀತಕ್ಕೆ ಮತ್ತೂಂದಿಷ್ಟು ಆಸ್ಥೆ ನೀಡಿದ್ದರೆ ಪ್ರಯೋಗ ಮತ್ತಷ್ಟು ಲವಲವಿಕೆಯಾಗಿರುತ್ತಿತ್ತು. 

ಎನ್‌.ಸಿ ಮಹೇಶ್‌ 

Advertisement

Udayavani is now on Telegram. Click here to join our channel and stay updated with the latest news.

Next